ಮೈಸೂರು: ‘ಜಿಲ್ಲೆಯಲ್ಲಿ ಹೊಸದಾಗಿ 52 ಕಂದಾಯ ಗ್ರಾಮಗಳನ್ನು ರಚಿಸಿ ಅಧಿಸೂಚಿಸಲಾಗಿದ್ದು, ಅಲ್ಲಿನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಹಾಡಿಗಳು, ಗೊಲ್ಲರ ಹಟ್ಟಿಗಳು, ಕ್ಯಾಂಪ್‌ಗಳು, ಲಂಬಾಣಿ ತಾಂಡಾಗಳು ಮೊದಲಾದ ಕಡೆಗಳಲ್ಲಿ ವಾಸ ಮಾಡುತ್ತಿರುವವರಿಗೆ ಮೂಲಸೌಕರ್ಯಗಳನ್ನು ಒದಗಿಸುವುದಕ್ಕಾಗಿ ಈ ಕ್ರಮ ವಹಿಸಲಾಗಿದೆ. 52 ಗ್ರಾಮಗಳಲ್ಲಿನ 2,364 ಮಂದಿಗೆ ಹಕ್ಕುಪತ್ರ ದೊರೆಯಲಿದೆ. ಸರ್ಕಾರದಿಂದ ‘ಅಲೆಮಾರಿ ಸೂರಿನಿಂದ ಸುಸ್ಥಿರ ಊರಿನೆಡೆಗೆ’ ಎಂಬ ಘೋಷಣೆ ಮಾಡಲಾಗಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ಮುಂದೆ ಅಲ್ಲಿ ಮೂಲಸೌಕರ್ಯವನ್ನು ಒದಗಿಸಲು ಕಷ್ಟವಾಗಲಾರದು. ಕಂದಾಯ ಸಚಿವ ಆರ್.ಅಶೋಕ್ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನೀಡಿದ್ದ ಭರವಸೆಯಂತೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.
‘58 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಅಂತಿಮ ಅಧಿಸೂಚನೆಗೆ ಬಾಕಿ ಇದೆ. 6 ತಿಂಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಈ ವಿಷಯದಲ್ಲಿ ಇನ್ನೂ ಅರ್ಧ ಹಾದಿಯನ್ನು ಸವೆಸುವ ಜವಾಬ್ದಾರಿಯು ಕಂದಾಯ ಹಾಗೂ ಸರ್ವೇ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮೇಲಿದೆ. ಸರ್ವೇ ಕಾರ್ಯವನ್ನು ತ‌್ವರಿತವಾಗಿ ಪೂರ್ಣಗೊಳಿಸಬೇಕು. ಈ ಕೆಲಸಕ್ಕೆ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಸೂಚಿಸಿದರು.
‘ಈ ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ಅನುದಾನವನ್ನು ಸರ್ಕಾರ ಒದಗಿಸಲಿದೆ. ರಸ್ತೆ, ಶಾಲೆ, ಅಂಗನವಾಡಿ, ಚರಂಡಿ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಪ್ರಸ್ತುತ ಮನೆಗಳಿರುವ ಜಾಗ ನಮ್ಮ ಹೆಸರಲ್ಲಿಲ್ಲ ಎನ್ನುವ ಆತಂಕದಲ್ಲಿದವರಿಗೆ ಹಕ್ಕುಪತ್ರ ನೀಡಲಾಗಿದೆ. ಈ ಮೂಲಕ ಅವರ ಆತಂಕವನ್ನು ನಿವಾರಿಸಲಾಗುತ್ತಿದೆ’ ಎಂದು ತಿಳಿಸಿದರು.
‘ಮೈಸೂರು ತಾಲ್ಲೂಕಿನ 4, ನಂಜನಗೂಡು 44, ತಿ.ನರಸೀಪುರದ 323, ಹುಣಸೂರಿನ 83, ಎಚ್.ಡಿ.ಕೋಟೆಯ 248, ಸರಗೂರಿನ 646, ಪಿರಿಯಾಪಟ್ಟಣದ 1,016 ಮಂದಿ ಸೇರಿ ಒಟ್ಟು 2,364 ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಒದಗಿಸಲಾಗುತ್ತಿದೆ. ಆಯಾ ತಾಲ್ಲೂಕಿನಲ್ಲೇ ಕೊಡಲಾಗುತ್ತದೆ’ ಎಂದರು.
ಹಳ್ಳಿಕೆರೆ ಹುಂಡಿಯ ಪುಟ್ಟಸ್ವಾಮಿ, ಅಂದಾನಿಗೌಡ ಸೇರಿದಂತೆ 10 ಮಂದಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಮೈಸೂರು ಉಪ ವಿಭಾಗಾಧಿಕಾರಿ ಕಮಲಾ ಬಾಯಿ, ತಹಶೀಲ್ದಾರ್ ಗಿರೀಶ್ ಹಾಗೂ ಡಿಡಿಎಲ್ಆರ್ ಸೀಮಂತಿನಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.