ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶುದ್ಧ ಮನಸ್ಸಿನಿಂದ ಪೂಜಿಸಿದರೆ ನೆರವಾಗುವ ಹನುಮ’

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹನುಮ ಜಯಂತಿ ಸಡಗರ
Last Updated 5 ಡಿಸೆಂಬರ್ 2022, 13:09 IST
ಅಕ್ಷರ ಗಾತ್ರ

ಮೈಸೂರು: ‘ಕಲಿಯುಗದಲ್ಲಿ ಕಾಡುತ್ತಿರುವ ಎಲ್ಲ ಬಗೆಯ ಕಷ್ಟ, ದುಃಖಗಳನ್ನು ನಾಶ‌ ಮಾಡಲೆಂದೇ ‌ಆಂಜನೇಯ‌ ಸ್ವಾಮಿ ಅವತರಿಸಿ ಬರುತ್ತಾರೆ’ ಎಂದು ‌ಗಣಪತಿ ಸಚ್ಚಿದಾನಂದ ಸ್ವಾಮೀಜಿ ನುಡಿದರು.

ಇಲ್ಲಿನ ಅವಧೂತ ದತ್ತಪೀಠದ ಆವರಣದಲ್ಲಿ ಹನುಮ ಜಯಂತಿ ‌ಪ್ರಯುಕ್ತ ‘ಕಾರ್ಯಸಿದ್ಧಿ ಹನುಮಾನ್ ಮಂದಿರ’ದಲ್ಲಿ ಸೋಮವಾರ ವಿಶೇಷ ಪೂಜೆ ನೆರವೇರಿಸಿದ ನಂತರ ಅವರು ಆಶೀರ್ವಚನ ನೀಡಿದರು.

‘ರಾಮಾಯಣ‌ ಕಾಲದಲ್ಲಿ ಶ್ರೀರಾಮ, ಸೀತಾಮಾತೆಯವರ‌‌ ಕಷ್ಟಗಳನ್ನೇ ದೂರ ಮಾಡಿದ ಹನುಮಂತ ಸಾಮಾನ್ಯ ಮನುಜರ ದುಃಖ‌ ದೂರ ಮಾಡಲಾರನೇ? ಭಕ್ತಿಯಿಂದ‌ ಪೂಜಿಸಿ ಪ್ರಾರ್ಥಿಸಿದರೆ‌ ಆತ ಎಲ್ಲರಿಗೂ ನೆರವಾಗುತ್ತಾನೆ’ ಎಂದರು.

‘ಹನುಮನ‌‌ ಜನ್ಮ ಸ್ಥಳದ ಬಗ್ಗೆ ಗೊಂದಲಗಳಿವೆ‌. ಕೆಲವರು‌ ಅಂಜನಾದ್ರಿ ಎನ್ನುತ್ತಾರೆ. ಇನ್ಯಾರೋ ಇನ್ನೊಂದು ಸ್ಥಳ‌ ಹೇಳುತ್ತಾರೆ. ಆತ ಹುಟ್ಟಿದ‌ ಸ್ಥಳ ಯಾವದಾದರೂ ಆಗಿರಲಿ, ಅವನನ್ನು ನಂಬಿ‌ ‌ಶುದ್ಧ ಮನಸ್ಸಿನಿಂದ ಪ್ರಾರ್ಥಿಸಬೇಕು’ ಎಂದು ತಿಳಿಸಿದರು.

‘ನಮ್ಮ ಆಶ್ರಮದ ಆವರಣದಲ್ಲಿ 25 ವರ್ಷಗಳಿಂದ‌ ಬಯಲು ಆಂಜನೇಯನಿಗೆ ಪೂಜೆ ಮಾಡಲಾಗುತ್ತಿತ್ತು. 10 ವರ್ಷಗಳಿಂದ ಮಂದಿರ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಇಲ್ಲಿ‌ ಮೂರು ಆಂಜನೇಯ ಮೂರ್ತಿಗಳಿವೆ’ ಎಂದರು.

ಸಂಭ್ರಮದಿಂದ ಆಚರಣೆ:

ಹನುಮ ಜಯಂತಿ ಪ್ರಯುಕ್ತ ಆಶ್ರಮದ ಆವರಣದಲ್ಲಿರುವ ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನವನ್ನು‌‌ ಮಾವಿನ ತೋರಣ‌, ಬಾಳೆಕಂದು ಹಾಗೂ ಪುಷ್ಪಮಾಲೆಗಳಿಂದ ಅಲಂಕರಿಸಲಾಗಿತ್ತು. ದೇವರ ಮೂರ್ತಿಗೆ ವಿವಿಧ ಅಭಿಷೇಕ, ಪೂಜಾ ಕಾರ್ಯಗಳು ನೆರವೇರಿದವು. ಹನುಮ ಮೂರ್ತಿಯನ್ನು ಬಾಳೆ‌ ಹಣ್ಣುಗಳಿಂದ ಅಲಂಕರಿಸಿದ್ದು ಗಮನಸೆಳೆಯಿತು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ದತ್ತಾತ್ರೇಯ ಸ್ವಾಮಿಗೆ ಪೂಜೆ ನೆರವೇರಿಸಿದರು. ಪ್ರಾರ್ಥನಾ ಮಂದಿರದಿಂದ ನಡೆದ ಮೆರವಣಿಗೆಯಲ್ಲಿ ಶ್ರೀಗಳು ಪಾಲ್ಗೊಂಡಿದ್ದರು. ವಿದೇಶಿ ಭಕ್ತರು ಸೇರಿದಂತೆ ನೂರಾರು ಮಂದಿ ಕೇಸರಿ ಬಾವುಟ ಹಿಡಿದು ಸಾಗಿದ್ದು ಗಮನಸೆಳೆಯಿತು.

ಕಾರ್ಯಸಿದ್ಧಿ ಹನುಮಾನ್ ದೇವಸ್ಥಾನದ 10ನೇ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆಯನ್ನು ಶ್ರೀಗಳು ನೆರವೇರಿಸಿದರು. ದತ್ತ‌ವಿಜಯಾನಂದ ತೀರ್ಥ ಸ್ವಾಮೀಜಿ ಇದ್ದರು.

ಬೆಳಿಗ್ಗೆ 7.15ರಿಂದ ಮೂರೂವರೆ ಗಂಟೆಗಳ ಕಾಲ ಭಕ್ತರು ದೇವಾಲಯದ ಆವರಣದಲ್ಲಿ ಹನುಮಾನ್ ಚಾಲೀಸ್ ಪಠಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT