ಮೈಸೂರು: ‘ಬಿಜೆಪಿಗರ ಇತಿಹಾಸವು ಮೌಢ್ಯ, ಅವೈಜ್ಞಾನಿಕತೆ, ದ್ವೇಷ ಹಾಗೂ ಅಸಹನೆಯಿಂದ ಕೂಡಿದೆ’ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.
‘ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ಹಾಗೂ ಲಲಿತ್ ಮೋದಿ ಅವರನ್ನು ಕಳ್ಳರೆಂದಿದ್ದ ರಾಹುಲ್ ಗಾಂಧಿ ಅವರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿ, ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ಈ ಮೂಲಕ ದ್ವೇಷ ರಾಜಕಾರಣಕ್ಕೆ ಬಿಜೆಪಿಗರು ಇಳಿದಿರುವುದು ಸಲ್ಲ’ ಎಂದು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
‘ರಾಹುಲ್ ಗಾಂಧಿಯವರನ್ನು ‘ಪಪ್ಪು’ ಎಂದು ಬಿಂಬಿಸಿ ಜೀವನ ಕಳೆದ ಬಿಜೆಪಿಗರು, ಸೋನಿಯಾ ಗಾಂಧಿ ಅವರನ್ನು ‘ಬಾರ್ ಡ್ಯಾನ್ಸರ್’ ಎಂದಿದ್ದರು. ಈ ಮೂಲಕ ತಮ್ಮ ಸಂಸ್ಕೃತಿಯ ಪಾಠ ಎಂತಹದ್ದು ಎಂಬುದನ್ನು ದೇಶದ ಮುಂದೆ ತೋರ್ಪಡಿಸಿದ್ದರು’ ಎಂದು ಟೀಕಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರೂ ಆಡಳಿತ ನಡೆಸುವುದು ಬಿಟ್ಟು ಚುನಾವಣಾ ಪ್ರಚಾರಕ್ಕಾಗಿ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಮತ್ತು ಮಾಧ್ಯಮ ವಲಯವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರ ಸರ್ಕಾರ ದ್ವೇಷ ರಾಜಕಾರಣದಲ್ಲಿಯೇ ಮುಳುಗಿದೆ’ ಎಂದಿದ್ದಾರೆ.
‘ಪ್ರಧಾನಿ ಅವರಿಗೆ ವಿರೋಧ ಪಕ್ಷಗಳ ಮೇಲೆ ದ್ವೇಷ ಕಾರುವುದು ಬಿಟ್ಟು ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ ಹಾಗೂ ಅಡುಗೆ ಸಿಲಿಂಡರ್ ಬೆಲೆ ತಗ್ಗಿಸಿ ಜವಾಬ್ದಾರಿ ಪ್ರದರ್ಶಿಸಲಿ. ರಾಹುಲ್ ಗಾಂಧಿ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲದೇ ಚಿಲ್ಲರೆ ರಾಜಕಾರಣ ಮಾಡಿದರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.