ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಮೈ ಉಜ್ಜಿಕೊಳ್ಳುತ್ತಿದ್ದ ಮರ ಕಡಿದ!

ನುಗು ಗ್ರಾಮದಲ್ಲಿ ರಂ‍ಪಾಟ ನಡೆಸಿದ್ದ ಆನೆ: ವಿವೇಕ್ ಕಾರಿಯಪ್ಪ
Last Updated 14 ನವೆಂಬರ್ 2022, 4:54 IST
ಅಕ್ಷರ ಗಾತ್ರ

ಮೈಸೂರು: ‘ಕಾಡಂಚಿನ ಜಮೀನಿನಲ್ಲಿದ್ದ ಮರಕ್ಕೆ ಸಲಗವೊಂದು ದಶಕಗಳಿಂದ ಬೆನ್ನನ್ನು ಉಜ್ಜಿಕೊಂಡು ಹೋಗುತ್ತಿತ್ತು. ಒಂದು ದಿನ ಮಾಲೀಕ ಮರ ಕಡಿದು ಹಾಕಿಬಿಟ್ಟ. ನಂತರ ನಡೆದದ್ದೇ ಬೇರೆ’

ಕಿಸಾನ್ ಸಮ್ಮೇಳನದಲ್ಲಿ ಭಾನುವಾರ ‘ಮಾನವ– ಪ್ರಾಣಿ ಸಂಘರ್ಷ: ಇಬ್ಬರಿಗೂ ಲಾಭವಾಗುವಂತಾ ಪರಿಹಾರ ಸಾಧ್ಯವೆ’ ಸಂವಾದದಲ್ಲಿ ಮೇಲಿನಂತೆ ನುಗು ಗ್ರಾಮದ ಸಾವಯವ ಕೃಷಿಕ ವಿವೇಕ ಕಾರಿಯಪ್ಪ ಹೇಳುತ್ತಿದ್ದಂತೆ ಗೋಷ್ಠಿಯಲ್ಲಿ ಕುಳಿತವರಲ್ಲಿ ಕುತೂಹಲ ಮನೆ ಮಾಡಿತ್ತು.

‘ಆನೆಗೂ ಆಸೆಗಳಿರುತ್ತದೆ, ಸಿಟ್ಟಿರುತ್ತದೆ, ವಸ್ತು ಪ್ರೀತಿಯಿರುತ್ತದೆ. ಇವೆಲ್ಲ ಕೇವಲ ಮನುಷ್ಯರಿಗೆ ಮಾತ್ರವೇ’ ಎಂದು ಪ್ರಶ್ನಿಸಿದರು.

‘ಹಳೆಯ ಗೆಳೆಯನನ್ನು ಕಳೆದುಕೊಂಡಂತೆ ಆನೆ ರಂಪಾಟ ನಡೆಸಿತು. ಅಷ್ಟೂ ದಿನವೂ ಮೈ ಉಜ್ಜಿಕೊಂಡು ತನ್ನ ಪಾಡಿಗೆ ಹೋಗುತ್ತಿದ್ದ ಅದು, ಮೊದಲ ಬಾರಿ ಕೃಷಿಕನ ಜಮೀನಿಗಿಳಿದು ದೂಳಿಪಟ ಮಾಡಿತ್ತು’ ಎಂದರು.

ಪರಿಸರ ತಜ್ಞ ಕೆ.ಮನು ಮಾತನಾಡಿ, ‘ಮನುಷ್ಯರಷ್ಟೇ ಬುದ್ಧಿವಂತರಲ್ಲ. ಪ್ರಾಣಿಗಳೂ ಮಾನವ ತಂತ್ರಗಳಿಗೆ ಪ್ರತಿತಂತ್ರ ಹೂಡುತ್ತವೆ. ಟ್ರೆಂಚ್‌, ರೈಲು ಹಳಿ, ಸೋಲಾರ್ ತಂತಿ ಎಲ್ಲವನ್ನೂ ಆನೆಗಳು ಜಾಣ್ಮೆ ಬಳಸಿ ಮೀರಿಕೊಂಡಿವೆ’ ಎಂದರು.

‘ಪರಿಸರ ಜೀವವಾಸ್ಥೆ ಎಂದಿಗೂ ಬದಲಾಗುತ್ತಿರುತ್ತದೆ. ಮನುಷ್ಯ ಒಳ್ಳೆಯ ಮನುಷ್ಯನಾಗಲು ಹೊರಟಿರುವಂತೆಯೇ ಜಿಂಕೆಹುಲಿಯಿಂದ ತಪ್ಪಿಸಿಕೊಳ್ಳುವ ಒಳ್ಳೆಯ ಜಿಂಕೆಯಾಗುತ್ತದೆ. ಹುಲಿಯು ಜಿಂಕೆಯನ್ನು ಹಿಡಿದು ಒಳ್ಳೆಯ ಹುಲಿಯಾಗುತ್ತದೆ.ಸ್ಪರ್ಧೆಯಿಂದಲೇ ವಿಕಾಸದ ಹಾದಿ ನಡೆದಿದೆ’ ಎಂದರು.

‘ಮಾನವ– ವನ್ಯಜೀವಿ ಸಂಘರ್ಷ ಎಂಬ ಪದ ಕಿವಿಗೆ ಬಿದ್ದದ್ದು 1980ರ ದಶಕದಲ್ಲಿ. ಬೆಂಗಳೂರಿನ ಎಂಜಿನಿಯರಿಂಗ್‌ ಕಾಲೇಜಿಗೆ ಆನೆಗಳು ಬಂದ ಮೇಲೆ. ಅಂದಿನಿಂದಲೂ ಅದನ್ನು ಮತ್ತೆ ಮತ್ತೆ ಕೇಳುತ್ತಿದ್ದೇವೆ’ ಎಂದರು.

ಕೃಷಿಕರಾದ ಮಾಲವಿಕಾ ಸೋಲಂಕಿ ಮಾತನಾಡಿ,‘ಆನೆಗಳನ್ನು ಪಟಾಕಿ ಶಬ್ಧ ಮಾಡಿ ಓಡಿಸುತ್ತಿದ್ದರು. ಮಿಜೋರಾಂನ ಮೆಣಸಿನ ಪುಡಿ ಬಳಸುತ್ತಿದ್ದರು. ಅದೆಲ್ಲಕ್ಕೂ ಆನೆಗಳು ಹೊಂದಿಕೊಂಡಿವೆ. ಜಮೀನಿಗೆ ಬರುತ್ತಿದ್ದ ಆನೆಗಳಿಗೆ ಸೋಲಾರ್‌ ತಂತಿಗೆ ಹೊಂದಿಕೊಂಡಂತೆ ದೇಸಿ ಬಳ್ಳಿ ಬೆಳೆಸಿದೆವು. ಇದೀಗ ಬರುತ್ತಿಲ್ಲ’ ಎಂದು ಹೇಳಿದರು.

ಪರಿಸರ ತಜ್ಞ ಸಮದ್‌ ಕೊಟ್ಟೂರು ಮಾತನಾಡಿ, ‘ಗುಡೇಕೋಟೆಯಲ್ಲಿ ಕರಡಿಗಳು ಜನರ ಮೇಲೆ ದಾಳಿ ಮಾಡುತ್ತಿದ್ದವು. ಆ ಎಲ್ಲ ದಾಳಿ ನಡೆದಿದ್ದು ಮುಂಜಾನೆ 2ರಿಂದ 5ರ ಒಳಗೆ. ಪಂಪ್‌ಸೆಟ್‌ಗೆ ಹೋಗುತ್ತಿದ್ದ ರೈತರು ದಾಳಿಗೀಡಾಗುತ್ತಿದ್ದರು. ವಿದ್ಯುತ್‌ ನಿಗಮದವರಿಗೆ ಹೇಳಿ ಬೆಳಿಗ್ಗೆಯೇ ಸರಬರಾಜು ಮಾಡಲು ಸೂಚಿಸಿದ್ದರಿಂದ ಸಂಘರ್ಷ ತಪ್ಪಿತು’ ಎಂದರು.

ಬಿಜು ನೇಗಿ, ಟಿ.ಸಿ.ಜೋಸೆಫ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT