ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮಕ್ಕಿಂತ ಮನುಷ್ಯತ್ವ ಮುಖ್ಯ:ಸಿದ್ದರಾಮಯ್ಯ

Last Updated 29 ಸೆಪ್ಟೆಂಬರ್ 2022, 14:23 IST
ಅಕ್ಷರ ಗಾತ್ರ

ಮೈಸೂರು: ‘ಎಲ್ಲರನ್ನೂ ಮನುಷ್ಯರನ್ನಾಗಿ ನೋಡಬೇಕು. ಜಾತಿ–ಧರ್ಮಕ್ಕಿಂತಲೂ ಮನುಷ್ಯತ್ವ ಮುಖ್ಯ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದಿಂದ ಇಲ್ಲಿನ ವಿಜಯನಗರ 3ನೇ ಹಂತದಲ್ಲಿ ‘ಸಿದ್ದರಾಮಯ್ಯ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯ’ದ ಹೆಚ್ಚುವರಿ ಕಟ್ಟಡ ಮತ್ತು ಯುಪಿಎಸ್‌ಸಿ, ಕೆಪಿಎಸ್‌ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಟ್ಟಡದ ನಿರ್ಮಾಣಕ್ಕೆ ಗುರುವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ನಾನು ಜಾತಿ, ಧರ್ಮ ನೋಡದೆ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದೆ. ಎಲ್ಲ ವರ್ಗಗಳ ಬಡವರು, ಸಾಮಾಜಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೊಳಿಸಿದ್ದೆ. ಆದರೆ, ಈ ಸರ್ಕಾರದವರು ಉಚಿತವಾಗಿ ಐದು ಕೆ.ಜಿ. ಅಕ್ಕಿ ವಿತರಣೆಯನ್ನೂ ನಿಲ್ಲಿಸಲು ನೋಡುತ್ತಿದ್ದಾರೆ’ ಎಂದು ಆರೋಪಿಸಿದರು.

ಹೊಟ್ಟೆ ಕಿಚ್ಚು:

‘ಉಚಿತ ಅಕ್ಕಿಯನ್ನು ಕುರುಬರು, ದಲಿತರಿಗೆ ಸೀಮಿತ ಮಾಡಲಿಲ್ಲ. ಎಲ್ಲರಿಗೂ ದೊರೆಯುವಂತೆ ಮಾಡಿದ್ದೆ. ಆದರೂ ಕೆಲವರು ಹೊಟ್ಟೆ ಕಿಚ್ಚಿನ ಮಾತುಗಳನ್ನು ಆಡುತ್ತಿದ್ದಾರೆ’ ಎಂದರು.

‘ಗುರಿ, ಶ್ರಮ, ಶ್ರದ್ಧೆ ಇಲ್ಲದಿದ್ದರೆ ಯಶಸ್ಸು ಸಾಧಿಸಲಾಗದು. ಕಾರ್ಯಾಂಗದಲ್ಲಿ ಎಲ್ಲ ಜಾತಿಯವರೂ ಇರಬೇಕು. ಆಗ, ಸಾಮಾಜಿಕ ನ್ಯಾಯ ಸಿಗುತ್ತದೆ. ಇಲ್ಲದಿದ್ದರೆ ಆಶಯ ಈಡೇರುವುದಿಲ್ಲ. ನಿರ್ಣಯ ತೆಗೆದುಕೊಳ್ಳುವ ಜಾಗಗಳಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿರಬೇಕು’ ಎಂದು ತಿಳಿಸಿದರು.

‘ನನ್ನ ಮಗ, ಮೊಮ್ಮಗನಿಗೆ ಓದಲು ಇರುವ ಸೌಲಭ್ಯ ನನಗಿರಲಿಲ್ಲ. ಕಷ್ಟಪಟ್ಟು ಒದಿದ್ದೇವೆ. ಒಂದೊಂದು ದಿನ ಹಸಿದು ಮಲಗಿದ್ದೇವೆ’ ಎಂದು ನೆನೆದರು.

‘ನಾನು ಯಾವ ಜಾತಿ ವಿರೋಧಿಯೂ ಅಲ್ಲ. ಮನುಷ್ಯ ಜಾತಿ ಪರವಾಗಿದ್ದೇನೆ’ ಎಂದರು.

‘ಈ ವಿದ್ಯಾರ್ಥಿನಿಲಯದಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ಉಚಿತವಾಗಿ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ಹೆಚ್ಚಿನವರು ಪಡೆಯಬೇಕು:

ಕಲಬುರಗಿ ಶಾಖಾ ಮಠದ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ‘ಕುರುಬ ಸಮಾಜದವರು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಹುದ್ದೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳಬೇಕು’ ಎಂದು ಆಶಿಸಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು.

ಎಲ್‌ಎಲ್‌ಬಿಯಲ್ಲಿ 9ನೇ ರ‍್ಯಾಂಕ್‌ ಗಳಿಸಿದ ಶಿಲ್ಪಾ ಅವರನ್ನು ಸನ್ಮಾನಿಸಲಾಯಿತು.

ಕಾಗಿನೆಲೆ ಶಾಖಾ ಮಠದ ಶಿವಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ, ಕಾರ್ಯದರ್ಶಿ ಪುಟ್ಟಬಸವೇಗೌಡ, ಕಾಗಿನೆಲೆ ಮಠದ ಮುಖ್ಯ ಆಡಳಿತಾಧಿಕಾರಿ ಬಿ.ಜಿ.ಗೋವಿಂದಪ್ಪ, ಮುಖಂಡ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಸದಸ್ಯ ಜೆ.ಗೋಪಿ, ವಸತಿನಿಲಯದ ಸದಸ್ಯ ಶಿವಣ್ಣೇಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೂರಜ್ ಹೆಗ್ಡೆ, ಮುಖಂಡ ಬಿ.ಎಂ.ರಾಮು, ನಿವೃತ್ತ ಇಇ ಕುಮಾರಸ್ವಾಮಿ, ಸಂಸ್ಥೆ ಕಾರ್ಯದರ್ಶಿ ಪುಟ್ಟಬಸವೇಗೌಡ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶಿವಪ್ಪ ಕೋಟೆ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜು, ಮುಖಂಡರಾದ ಕೋಟೆಹುಂಡಿ ಮಹಾದೇವ, ಎಸ್.ಆರ್. ರವಿಕುಮಾರ್, ಮಂಜುಳಾ ಮಂಜುನಾಥ್, ಕೆ.ಎಸ್.ಶಿವರಾಂ, ಮಂಜುನಾಥ ಭಂಡಾರಿ, ಎಂ.ಶಿವಣ್ಣ ಟಿ.ಬಿ.ಚಿಕ್ಕಣ್ಣ, ನಿವೃತ್ತ ಕೆಎಎಸ್ ಅಧಿಕಾರಿ ಎಂ.ರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT