ಹುಣಸೂರು: ನಗರದ ಸಂತೆ ಮೈದಾನದಲ್ಲಿ ವರ್ಷಗಳ ಹಿಂದೆ ಸರ್ಕಾರಿ ಅನುದಾನ ಬಳಸಿ ಅವೈಜ್ಞಾನಿಕವಾಗಿ ನಿರ್ಮಿಸಿದ ಕಟ್ಟಡವನ್ನು ತಂತ್ರಜ್ಞಾನ ಬಳಸಿ ಸರಿಪಡಿಸಿ ಅಭಿವೃದ್ಧಿಪಡಿಸಿ ಮರುಬಳಕೆ ಮಾಡಬೇಕಾಗಿದೆ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಹೇಳಿದರು.
ನಗರದ ಸಂತೆ ಮೈದಾನದಲ್ಲಿ ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ನಾಲ್ಕನೇ ಹಂತದ ₹ 1.57 ಕೋಟಿ ಅನುದಾನದಲ್ಲಿ ವಾಹನ ಪಾರ್ಕಿಂಗ್ ಕಟ್ಟಡ ಮತ್ತು ತರಕಾರಿ ಮಾರಾಟ ಮಳಿಗೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರೋತ್ಥಾನ ಯೋಜನೆ ಪ್ಯಾಕೇಜ್ 3ರಲ್ಲಿ ವಿವಿಧ ಕಾಮಗಾರಿಗಳಿಗೆ ಅನುಮೋದನೆ ಸಿಕ್ಕಿದ್ದು, ಪ್ರಥಮ ಹಂತದಲ್ಲಿ ಸಂತೆ ಮೈದಾನದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ವಾಹನ ಪಾರ್ಕಿಂಗ್ ಸ್ಲಾಟ್ ಮತ್ತು 40 ತರಕಾರಿ ಮಾರಾಟ ಮಳಿಗೆ ಮತ್ತು 9 ವಾಣಿಜ್ಯ ಮಳಿಗೆ ನಿರ್ಮಾಣ ಕಾಮಗಾರಿಗಳಿಗೆ ₹ 1.57 ಕೋಟಿ ಬಿಡುಗಡೆಯಾಗಿದೆ. ಉಳಿದಂತೆ ನಾಲ್ಕು ಕಾಮಗಾರಿಗಳು ಹಂತ ಹಂತವಾಗಿ ಅನುದಾನದೊಂದಿಗೆ ಚಾಲನೆ ನೀಡಲಾಗುವುದು ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಕಂದಾಯ ವಸೂಲಾತಿ ನಿರೀಕ್ಷೆ ಮಟ್ಟಕ್ಕೆ ಇಲ್ಲದೆ ವಾರ್ಷಿಕ ₹ 3 ಕೋಟಿ ಸಂಗ್ರಹವಾಗುತ್ತಿದೆ. ಕೈಗಾರಿಕಾ ಪ್ರದೇಶವನ್ನು ನಗರಸಭೆಗೆ ಹಿಂಪಡೆಯಲು ನಿರ್ಣಯವಾಗಿ 30 ವರ್ಷ ಕಳೆದಿದ್ದರೂ ಈವರೆಗೂ ಸದಸ್ಯರು ಹಿಂಪಡೆದಿಲ್ಲ. ವಾರ್ಷಿಕ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದರು.
ಅಭಿವೃದ್ಧಿ: ನಗರಸಭೆಯ ಎಂಟ್ರಪ್ರೈಸ್ ಫಂಡ್ ನಲ್ಲಿ ಸಂಗ್ರಹವಾಗಿರುವ ₹ 3 ಕೋಟಿಯಲ್ಲಿ ಸಂತೆ ಮೈದಾನ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ತರಕಾರಿ ವ್ಯಾಪಾರಿಗಳ ಸಂಘ ಸಹಕಾರ ನೀಡಬೇಕು ಎಂದರು.
ನಗರಸಭೆ ಅಧ್ಯಕ್ಷ ಶರವಣ ಮಾತನಾಡಿ, ನಗರಸಭೆಗೆ ಆರ್ಥಿಕ ಶಕ್ತಿ ತುಂಬಿಸಲು ಕಂದಾಯ ವಸೂಲಿ ಅಗತ್ಯ. ಸದಸ್ಯರು ಮತ್ತು ಅಧಿಕಾರಿಗಳು ಸಹಕಾರ ನಿರೀಕ್ಷೆಯಲ್ಲಿದ್ದೇನೆ ಎಂದರು.
ಸದಸ್ಯ ಕೃಷ್ಣರಾಜಗುಪ್ತ ಮಾತನಾಡಿ, ದಶಕದಿಂದ ನನೆಗುದಿಗೆ ಬಿದ್ದಿದ್ದ ಸಂತೆ ಮಾಳ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗೆ ಮರು ಜೀವ ಬಂದಿದೆ. ಶಾಸಕರು ನಗರದ ವ್ಯಾಪಾರಿಗಳ ಸಭೆ ನಡೆಸಿ ಮಳಿಗೆಯಲ್ಲಿ ವ್ಯವಸ್ಥಿತ ವಹಿವಾಟು ನಡೆಸಲು ಸೂಚಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಆಯುಕ್ತರಾದ ಮಾನಸ, ಉಪಾಧ್ಯಕ್ಷ ಆಶಾ ಕೃಷ್ಣನಾಯಕ, ಸದಸ್ಯರಾದ ಮಲ್ಲಿಕ್ ಪಾಶಾ, ಗೀತಾ, ರಾಧಾ, ಸತೀಶ್, ರಮೇಶ್ ದೊಡ್ಡಹೆಜ್ಜೂರು, ಸಿರಾಜ್, ಶ್ರೀನಾಥ್, ರಾಣಿ ಪೆರುಮಾಳ್, ಹರೀಶ್ ಮತ್ತು ನಗರಸಭೆ ಎಂಜಿನಿಯರಿಂಗ್ ವಿಭಾಗದ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.