ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆ ದುರಸ್ತಿ, ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಆಗ್ರಹ

ಕಾವೇರಿ ನೀರಾವರಿ ನಿಗಮದ ಮುಂಭಾಗ ಧರಣಿ
Published 18 ಮೇ 2023, 14:35 IST
Last Updated 18 ಮೇ 2023, 14:35 IST
ಅಕ್ಷರ ಗಾತ್ರ

ಹುಣಸೂರು: ಹಾರಂಗಿ ಮತ್ತು ಲಕ್ಷ್ಮಣತೀರ್ಥ ನದಿಯ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಹರಿಸುವ ನಾಲೆ ದುರಸ್ತಿಗೊಳ್ಳದೆ ರೈತರು ಕಂಗಾಲಾಗಿದ್ದು ಕಾವೇರಿ ನೀರಾವರಿ ನಿಗಮ ಕ್ರಮವಹಿಸಿಲ್ಲ ಎಂದು ರೈತ ಸಂಘದ ಸದಸ್ಯರು ಪ್ರತಿಭಟಿಸಿದರು.

ನಗರದ ಹಾರಂಗಿ ನೀರಾವರಿ ಇಲಾಖೆ ಕಚೇರಿ ಎದುರು ರೈತ ಸಂಘದ ಸದಸ್ಯರು ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಹುಣಸೂರು ತಾಲ್ಲೂಕಿನಲ್ಲಿ ದೇವರಾಜ ಅರಸು ಅವಧಿಯಲ್ಲಿ ನಿರ್ಮಾಣಗೊಂಡ ಹಲವು ನಾಲೆಗಳಿದ್ದು, ಅವುಗಳ ದುರಸ್ತಿ ಕಾರ್ಯ ನಡೆಯಬೇಕಿದೆ. ಈ ಬಗ್ಗೆ ಹಲವು ಬಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಕ್ರಮವಹಿಸಿಲ್ಲ ಎಂದರು.

ಕೊಡಗಿನ ಹಾರಂಗಿ ಅಣೆಕಟ್ಟೆಯಿಂದ ಕ್ಷೇತ್ರಕ್ಕೆ ಬರುವ ನೀರು ಅಚ್ಚುಕಟ್ಟು ಪ್ರದೇಶಗಳಿಗೆ ತಲಪಿಸುವ ನಾಲೆ 15 ವರ್ಷಗಳಿಂದ ದುರಸ್ತಿ ಮಾಡದೆ ಹೂಳು ತುಂಬಿ ನೀರು ಹರಿಯುತತಿಲ್ಲ. ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ಮತ್ತು ಇತರ ಅರೆ ನೀರಾವರಿ ಆಶ್ರಿತ ಬೆಳೆ ಮಾಡಲು ಸಾಧ್ಯವಾಗುತ್ತಿಲ್ಲ. ತಾಲ್ಲೂಕಿನ ಕಾವೇರಿ ನೀರಾವರಿ ನಿಗಮದ ಅಧೀನಕ್ಕೆ ಸೇರುವ ಲಕ್ಷ್ಮಣತೀರ್ಥ ನದಿಯ ನಾಲೆ ದುರಸ್ತಿ ಮಾಡಿಲ್ಲ. ಇತ್ತೀಚೆಗೆ ಕಟ್ಟೆಮಳಲವಾಡಿ ಅಣೆಕಟ್ಟೆ ದುರಸ್ತಿ ಮಾಡಿದ್ದು, ಇದಕ್ಕೆ ಸೇರಿದ ನಾಲೆ ಹದಗೆಟ್ಟಿದೆ ಎಂದರು.

ಬಿಳಿಕೆರೆ ಹೋಬಳಿ ಭಾಗದ ಭೂಮಿಗೆ ಮೂಲವಾಗಿದ್ದ ದಿವಾನ್ ಪೂರ್ಣಯ್ಯ ನಾಲೆಯನ್ನೂ ದುಸ್ತಿ ಮಾಡಬೇಕಿದ್ದು, ಈ ನಾಲೆಯಿಂದಾಗಿ ಬಿಳಿಕೆರೆ ಹೋಬಳಿಗೆ ಸೇರಿದ ಹಳೆಪುರ, ಬೆಂಕಿಪುರ, ಅನ್ನರಾಯಪುರ, ಚೆಲ್ಲಹಳ್ಳಿ, ಗೋಹಳ್ಳಿ ಕೆರೆಗಳಿಗೆ ನೀರು ತುಂಬಿಸಲು ಸಹಕಾರಿ ಆಗಲಿದೆ ಎಂದರು.

ಹನಗೋಡು ಅಣೆಕಟ್ಟೆಯ ಉದ್ದೂರು ನಾಲೆ ಸಮರ್ಪಕವಾಗಿ ದುರಸ್ತಿಯಾಗದೆ ಸಾವಿರಾರು ಎಕರೆ ಪ್ರದೇಶಕ್ಕೆ ನೀರು ಹರಿಸುವುದು ಕಷ್ಟಸಾಧ್ಯವಾಗಿದೆ. ಉದ್ದೂರು ಮತ್ತು ಹುಸೇನಪುರ ನಾಲೆಗಳನ್ನು ಆಧುನೀಕರಣಗೊಳಿಸಬೇಕು. ಮರೂರು ಕಾವಲ್ ಪಿಕಪ್ ಬಳಿ ನಾಲೆ ನಿರ್ಮಾಣವಾಗದೆ ನೀರು ರೈತರ ಬಳಕೆಗೆ ಸಿಗದೆ ನದಿ ಸೇರುತ್ತಿದೆ ಎಂದರು.

ಕ್ಷೇತ್ರದಲ್ಲಿ 8 ಏತ ನೀರಾವರಿ ಇದ್ದು, ಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆದಿದ್ದು, ಜನ, ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಬವಣೆ ನೀಗಿಸಲಾಗಿದೆ. ಅಚ್ಚುಕಟ್ಟು ಪ್ರದೇಶದ ರೈತರ ಬವಣೆ ನೀಗಿಸುವಲ್ಲಿ ಕಾವೇರಿ ನೀರಾವರಿ ನಿಗಮ ಮಂಡಳಿಗೆ ಸೇರಿದ ಹಾರಂಗಿ ನೀರಾವರಿ ಇಲಾಖೆ ಸರ್ಕಾರಕ್ಕೆ ಯೋಜನೆ ಮಂಡಿಸಿ ನಾಲೆ ದುರಸ್ತಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಬೆಂಕಿಪುರ ಚಿಕ್ಕಣ್ಣ, ಅಗ್ರಹಾರ ರಾಮೇಗೌಡ, ಧನಂಜಯ್ಯ, ಮೋದೂರು ಶಿವಣ್ಣ, ಚಂದ್ರೇಗೌಡ, ನಿಲುವಾಗಿಲು ಪ್ರಭಾಕರ್, ಕಟ್ಟೆಮಳಲವಾಡಿ ಮಹದೇವ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT