ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಮನೆ ಮಗ, ನನ್ನನ್ನು ಬೆಂಬಲಿಸಿ: ಡಿ.ಕೆ.ಶಿವಕುಮಾರ್ ಮನವಿ

ತಾಲ್ಲೂಕಿನ ಒಕ್ಕಲಿಗರ ಭವನಕ್ಕೆ ₹50 ಲಕ್ಷ ನೆರವು
Last Updated 16 ಫೆಬ್ರುವರಿ 2023, 4:46 IST
ಅಕ್ಷರ ಗಾತ್ರ

ಎಚ್.ಡಿ.ಕೋಟೆ: ‘ತಾಲ್ಲೂಕಿನ ಒಕ್ಕಲಿಗರ ಭವನಕ್ಕೆ ₹50 ಲಕ್ಷ ನೀಡುವು ದಾಗಿ ಘೋಷಿಸಿದ್ದು, ಅದರಂತೆ ನಡೆದುಕೊಳ್ಳುತ್ತೇನೆ. ‌ಒಕ್ಕಲಿಗರ ಮನೆ ಮಗನಾಗಿ ನಾನಿದ್ದೇನೆ. ನನ್ನನ್ನು ಬೆಂಬಲಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಕಾಂಗ್ರೆಸ್ ಪಕ್ಷದಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ರೆ, ಅವರು ಸರ್ಕಾರವನ್ನು ಉಳಿಸಿಕೊಳ್ಳಲಿಲ್ಲ’ ಎಂದು ದೂರಿದರು.

‘ಅನಿಲ್ ಚಿಕ್ಕಮಾದು ಸರಳ, ಸಜ್ಜನಿಕೆ ವ್ಯಕ್ತಿ. ಪರಿಶಿಷ್ಟ ಪಂಗಡದ ಯುವಕ ನಾಯಕ. ಅವರಲ್ಲಿ ದುರಹಂಕಾರ ಇಲ್ಲ. ನಿಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾನೆ’ ಎಂದು ಶ್ಲಾಘಿಸಿದರು.

‘ಭಾರತ್ ಜೋಡೋ ಯಾತ್ರೆ ವೇಳೆ ಸೋನಿಯಾ ಗಾಂಧಿ ಅವರು ರಾಹುಲ್ ಗಾಂಧಿ ಜೊತೆ ಈ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದ್ದರು. ವಿಜಯದಶಮಿ ದಿನ ನಿಮ್ಮ ಊರಿನ ಪುಟ್ಟ ದೇವಸ್ಥಾನದಲ್ಲಿ ವಿಜಯದಶಮಿ ಆಚರಿಸಿದ್ದರು. ಒಳ್ಳೆಯ ಶಾಸಕನನ್ನು ಆಯ್ಕೆ ಮಾಡಿದ್ದೀರಿ ಎಂದು ಸೋನಿಯಾ ಗಾಂಧಿ ಅವರು ನನ್ನ ಬಳಿ ಹೊಗಳಿದ್ದರು. ಅನಿಲ್ ಚಿಕ್ಕಮಾದು ಜತೆ ನಾವಿದ್ದೇವೆ’ ಎಂದರು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ‘ಡಿ.ಕೆ.ಶಿವಕುಮಾರ್ ಅವರು ನಮ್ಮ ತಂದೆಗೆ ಸಾಕಷ್ಟು ಸಹಾಯ ಮಾಡಿದ್ದರು. ಯುವಕನಾಗಿದ್ದರೂ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದರು. ಆದರೆ, ಬಿಜೆಪಿ ಸರ್ಕಾರದಲ್ಲಿ ಸರಿಯಾದ ಅನುದಾನ ಕೊಟ್ಟಿಲ್ಲ. ಆದರೂ ನಾನು ಹೋರಾಟ ಮಾಡಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.

‘ಇನ್ನೆರೆಡು ತಿಂಗಳು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಡಿ.ಕೆ.ಶಿವಕುಮಾರ್‌ ಅವರನ್ನು ಗದ್ದಿಗೆ ವೃತ್ತದಿಂದ ಮೆರವಣಿಗೆ ಮೂಲಕ ಬಾಪೂಜಿ ವೃತ್ತಕ್ಕೆ ಕರೆತಂದು ಭಾರಿ ಗಾತ್ರದ ಹೂವಿನ ಹಾರ ಹಾಕಿ, ಪುಷ್ಪವೃಷ್ಟಿ ಮಾಡಿದರು.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಇದ್ದರು.

‘ಅನುದಾನ ತಾರತಮ್ಯ’

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ‘ಬಿಜೆಪಿ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಲು ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕೋವಿಡ್ ವೇಳೆ ಜನರಿಗೆ ಅನಿಲ್ ಚಿಕ್ಕಮಾದು ಸಾಕಷ್ಟು ಸಹಾಯ ಮಾಡಿದ್ದಾರೆ. ಸರ್ಕಾರ ಇಲ್ಲದಿದ್ದರೂ ₹700 ಕೋಟಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅನುದಾನ ಕೊಡುವ ವಿಚಾರ ದಲ್ಲಿ ತಾರತಮ್ಯ ಮಾಡುತ್ತಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT