ಮೈಸೂರು: ‘ಹಸಿವು ನೀಗಿಸುವ ರೈತರಿಗೆ ಪ್ರೋತ್ಸಾಹ ಅಗತ್ಯ’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಹೇಳಿದರು.
ಕನ್ನಡ ಸಾಹಿತ್ಯ ಕಲಾಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ನಗರದ ಕಲಾಮಂದಿರದ ಸುಚಿತ್ರ ಕಲಾಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ‘ಅನ್ನದಾತರೊಂದಿಗೆ ಸ್ವಾತಂತ್ರ್ಯೋತ್ಸವ’ ಆಚರಣೆ ಹಾಗೂ ಯು.ಜಿ. ಮೋಹನಕುಮಾರ್ ಆರಾಧ್ಯ ಅವರ ‘ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲಾ ಪ್ರದರ್ಶನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹಸಿದವರಿಗೆ ಮಾತ್ರ ಅನ್ನ ಹಾಗೂ ಅನ್ನದಾತರ ಬೆಲೆ ಗೊತ್ತಿರುತ್ತದೆ. ಎಷ್ಟೇ ಕಷ್ಟವಿದ್ದರೂ ರೈತರು ಎಲ್ಲರಿಗೂ ಅನ್ನವನ್ನು ಬೆಳೆದುಕೊಡುತ್ತಾರೆ. ಅವರಿಲ್ಲದಿದ್ದರೆ ಹಸಿವು ನೀಗಿಸಲಾಗದು’ ಎಂದರು.
‘ಕಲಾವಿದ ಮೋಹನಕುಮಾರ್ ಪೆನ್‌ನಲ್ಲೇ ಸ್ವಾತಂತ್ರ್ಯ ಯೋಧರ ಚಿತ್ರಗಳನ್ನು ರಚಿಸಿ ಪ್ರದರ್ಶಿಸಿರುವುದು ಹಾಗೂ 73 ಮಂದಿಯ ಚಿತ್ರ ಹಾಗೂ ಅವರ ಬಗ್ಗೆ ವಿವರ ನೀಡಿರುವುದು ಶ್ಲಾಘನೀಯ’ ಎಂದು ಹೇಳಿದರು.
ಸಾಧಕ ರೈತರನ್ನು ಗೌರವಿಸಿದ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ‘ರೈತರು ಸಾಫ್ಟವೇರ್ ಉದ್ಯೋಗಿಗಳಿಗಿಂತ ಹೆಚ್ಚು ಸಂಪಾದನೆ ಮಾಡುತ್ತಿದ್ದರೂ ಮದುವೆಗೆ ಹೆಣ್ಣು ಕೊಡದ ಪರಿಸ್ಥಿತಿ ಇದೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ರೈತ ಸಂಘದ ಸಂಸ್ಥಾಪಕ ಸದಸ್ಯ ಪ್ರೊ.ಕೆ.ಸಿ. ಬಸವರಾಜು, ‘ಹಸಿರು ಸಮೃದ್ಧಿ ಹಾಗೂ ಬದಲಾವಣೆಯ ಸಂಕೇತ. ಪರ್ಯಾಯ ಶಕ್ತಿಯಾಗಬಲ್ಲ ತಾಕತ್ತು ಇರುವುದು ರೈತ ಸಂಘಕ್ಕೆ ಮಾತ್ರ. ಆದರೆ, ಇಂದು ಯಾರ‍್ಯಾರೋ ಹಸಿರು ಶಾಲು ಹಾಕಿಕೊಂಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ‘ಸ್ವಾತಂತ್ರ್ಯ ನಂತರ ದೇಶ ಹಲವಾರು ಸಾಧನೆ ಮಾಡಿದೆ. ಇದರಲ್ಲಿ ಜನರಿಗೆ ಅನ್ನ ನೀಡುತ್ತಿರುವ ರೈತರ ಪಾತ್ರ ಮಹತ್ವದ್ದು’ ಎಂದು ತಿಳಿಸಿದರು.
ರೈತರಾದ ಹುಣಸೂರು ತಾಲ್ಲೂಕು ಮನುಗನಹಳ್ಳಿಯ ಬಿ. ವೀರಭದ್ರಪ್ಪ, ಹನುಮಂತಪುರದ ವಸಂತ, ನಂಜನಗೂಡು ತಾಲ್ಲೂಕು ಕಪ್ಪಸೋಗೆಯ ಮಹೇಂದ್ರ, ಮುದ್ದಹಳ್ಳಿಯ ಕುಮಾರಸ್ವಾಮಿ, ಚಿಕ್ಕಸ್ವಾಮಿ, ತಿ. ನರಸೀಪುರ ತಾಲ್ಲೂಕು ಅತ್ತಹಳ್ಳಿಯ ದೇವರಾಜ್, ಹುಣಸೂರು ತಾಲ್ಲೂಕು ಹೊಸೂರು ಕುಮಾರ್, ಮಂಜು ಕಿರಣ್, ಕುಳ್ಳೇಗೌಡ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿದರು. ಆಲನಹಳ್ಳಿ ಶಾಶ್ವತ ಸೇವಾ ಸ್ಕೂಲ್ ಕಾರ್ಯದರ್ಶಿ ಎಂ.ಆರ್. ಚೌದರಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಯೋಗೇಶ್ ಉಪ್ಪಾರ್, ಮಡಿವಾಳ ಸಮಾಜದ ಮುಖಂಡ ರವಿನಂದನ್, ಶೋಭಾರಾಣಿ, ಶಿ. ಕುಮಾರಸ್ವಾಮಿ, ಮುಖ್ಯ ಶಿಕ್ಷಕಿ ಪವಿತ್ರಾ, ಮುಕ್ತಕ ಕವಿ ಮುತ್ತುಸ್ವಾಮಿ, ಕಲಾವಿದ ಯು.ಜಿ. ಮೋಹನಕುಮಾರ್ ಆರಾಧ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.