ಮೈಸೂರು: ‘ಭಾರತದ ಆರ್ಥಿಕತೆಯು ಜಾಗತಿಕವಾಗಿ ಮೂರನೇ ಸ್ಥಾನಕ್ಕೆ ಕಾಲಿಡುತ್ತಿದೆ. ಆ ಸಾಧನೆಯ ಭಾಗವಾಗುವಂತೆ ವಿದ್ಯಾರ್ಥಿಗಳು ಆಲೋಚಿಸಬೇಕು. ಸದಾ ಹೊಸತನ ಹೊಂದುವುದು ಯಶಸ್ಸಿನ ಮಾರ್ಗ’ ಎಂದು ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್‌ನ (ಟಿಸಿಒಇ) ಕಾರ್ಯತಂತ್ರ ಸಲಹೆಗಾರ ರಮೇಶ್ ಸಂತಾನಂ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಒಳಾಂಗಣ ಕ್ರೀಡಾ ಭವನದಲ್ಲಿ ಭಾನುವಾರ ನಡೆದ ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಕಲ್ಪನೆಯನ್ನು ಹೊಂದುವುದು ಮತ್ತು ಅದನ್ನು ಈಡೇರಿಸಲು ಸೂಕ್ತ ತಯಾರಿ ನಡೆಸುವುದರಿಂದ ಉತ್ತಮ ಎಂಜಿನಿಯರ್ ಆಗಬಹುದು. ಸ್ವಂತ ಉದ್ಯಮವನ್ನು ಸ್ಥಾಪಿಸಬಹುದು’ ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಉಪಾಧ್ಯಕ್ಷ ಶಿವಲಿಂಗಪ್ಪ, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಪ್ರಾಂಶುಪಾಲ ಬಿ.ಸದಾಶಿವೇಗೌಡ, ಉಪ ಪ್ರಾಂಶುಪಾಲರಾದ ಶೋಭಾ ಶಂಕರ್ ಉಪಸ್ಥಿತರಿದ್ದರು.