ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಕ್ಕೆ ಜಕಣಾಚಾರಿ ಹೆಸರು, ಅನುದಾನ

ಅಮರಶಿಲ್ಪಿಯ ಸಂಸ್ಮರಣೆಯಲ್ಲಿ ಮೇಯರ್‌ ಶಿವಕುಮಾರ್ ಭರವಸೆ
Last Updated 1 ಜನವರಿ 2023, 14:07 IST
ಅಕ್ಷರ ಗಾತ್ರ

ಮೈಸೂರು: ‘ನಗರದ ಹೆಬ್ಬಾಳದ ವೃತ್ತವೊಂದಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರು ನಾಮಕರಣ ಮತ್ತು ಪ್ರಸಕ್ತ ಸಾಲಿನ ನಗರಪಾಲಿಕೆ ಬಜೆಟ್‌ನಲ್ಲಿ ವಿಶ್ವಕರ್ಮ ಸಮುದಾಯಕ್ಕೆ ಅನುದಾನ ಮೀಸಲಿಡಲಾಗುವುದು’ ಎಂದು ಮೇಯರ್‌ ಶಿವಕುಮಾರ್ ಭರವಸೆ ನೀಡಿದರು.

ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಜಕಣಾಚಾರಿ ತಮ್ಮ ಅಮೋಘ ಶಿಲ್ಪಕಲೆಯಿಂದ ಜಗತ್ತೇ ಕರ್ನಾಟಕದ ಕಲಾವೈಭವವನ್ನು ಕೊಂಡಾಡುವಂತೆ ಮಾಡಿದವರು. ಸಮಾಜವನ್ನು ನಿರ್ಮಿಸುವುದರಲ್ಲಿ ಕಾಯಕ ಸಮಾಜಗಳ ಕೊಡುಗೆಯನ್ನು ಇದು ತೋರಿಸುತ್ತದೆ. ಸತಾನತ ಹಿಂದೂ ದೇವಾಲಯಗಳಿಗೆ ಸಿಗುವ ಗೌರವವು ವಿಶ್ವಕರ್ಮ ಸಮುದಾಯಕ್ಕೂ ದೊರೆಯಬೇಕು’ ಎಂದರು.

ಕಲಾವಿದ ವೀರಣ್ಣ ಎಂ.ಅರ್ಕಸಾಲಿ ಮಾತನಾಡಿ, ‘ಭಾರತವು ಶಿಲ್ಪಕಲೆಯಲ್ಲಿ ವಿಶ್ವಕ್ಕೆ ಗುರುಸ್ಥಾನದಲ್ಲಿದ್ದು, ಅದರಲ್ಲಿ ರಾಜ್ಯದ ಮುಖ್ಯವಾಗಿ ಜಕಣಚಾರಿಯ ಕೊಡುಗೆ ಅಪಾರ. ಲಕ್ಕುಂಡಿ, ಅಮೃತಪುರ ಮೊದಲಾದ ದೇವಸ್ಥಾನಗಳು ಆತನನ್ನು ಮಹಾಶಿಲ್ಪಿಯಾಗಿಸಿವೆ. ಜಕಣಾಚಾರಿ ಕಾಲ್ಪನಿಕ ವ್ಯಕ್ತಿ ಎಂಬ ವಾದವಿದೆ. ಇದೊಂದು ಸುಳ್ಳು. ಎಷ್ಟೋ ಮಹಾನುಭಾವರ ಹೆಸರು ಜನಪದರ ಬಾಯಿಂದ ಮಾತ್ರ ಉಳಿದಿವೆ, ಹಾಗೆಂದು ಅವರಾರು ಇಲ್ಲವೆಂದಲ್ಲ. ಇದರ ಬಗ್ಗೆ ಸಂಶೋಧನೆಯಾಗಲಿ’ ಎಂದರು.

ಉಪ ಮೇಯರ್‌ ಡಾ.ಜಿ.ರೂಪಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್‌, ಸಮಾಜದ ಪ್ರಮುಖರಾದ ಎಂ.ಎಂ.ಮಂಜು, ಬಿ.ಮಹೇಶ್, ಪುಟ್ಟಸೋಮಚಾರ್, ಕೆಂಪರಾಜು, ಸುರೇಶ್‌, ಚಿಕ್ಕಾಡೆ ಶಿವಕುಮಾರ್‌ ಇದ್ದರು.

‘ಜಾತಿ ವ್ಯವಸ್ಥೆ: ಮಹನೀಯರಿಗೆ ಮಾರಕ’

ಮೈಸೂರು: ‘ನಮ್ಮ ದೇಶದಲ್ಲಿ ಸಾಧನೆಗಿಂತ ಜಾತಿಯೇ ದೊಡ್ಡದು. ಹೀಗಾಗಿ ವಿಶ್ವಮಟ್ಟದಲ್ಲಿ ಗುರುತಿಸಬೇಕಾದ ಅಮರಶಿಲ್ಪಿ ಜಕಣಾಚಾರಿ ಸಣ್ಣ ಕಾರ್ಯಕ್ರಮಕ್ಕಷ್ಟೆ ಸೀಮಿತರಾಗುವಂತಾಗಿದೆ’ ಎಂದು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.

‘ಸ್ವರ್ವಜ್ಞನ ತ್ರಿಪದಿಗಳು ವಿಶ್ವಶ್ರೇಷ್ಠವಾದರೂ ಕುಂಬಾರನೆಂಬ ಕಾರಣಕ್ಕೆ ಆತನೂ ತ್ರಿಪದಿಗಷ್ಟೇ ಗುರುತಿಸಲ್ಪಡುತ್ತಿದ್ದಾನೆ. ಕಾಯಕ ಜಾತಿಗಳ ಕೂಗಿನಿಂದ ಇಷ್ಟಾದರೂ ಆಗುತ್ತಿದೆ. ಇಲ್ಲದಿದ್ದರೆ ಮರೆಯಾಗಿ ಹೋಗುತ್ತಿದ್ದರು’ ಎಂದರು.

‘ರಾಜರ ಕಾಲದಲ್ಲಿ ಮೈಸೂರಿನ ರಸ್ತೆಯೊಂದಕ್ಕೆ ಪುರಂದರ ದಾಸರ ಹೆಸರನ್ನು ನಾಮಕರಣ ಮಾಡಲಾಗಿತ್ತು. ಆದರೆ, ಜನಪ್ರತಿನಿಧಿಗಳು ಅದನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಿಲ್ಪಕಲೆ, ಮಣ್ಣಿನ ಕಲೆ, ಕೇಶಾಲಂಕಾರ ಕಲೆಗೆ ಪದವಿಯಂತಹ ಗೌರವ ಸಿಗಬೇಕು. ಆದರೆ, ಅದು ಸಾಧ್ಯವಾಗಿಲ್ಲ. ಪ್ರತ್ಯೇಕ ಜಾತಿ ನಿಗಮ–ಮಂಡಳಿಗಳಿಂದ ಸೂಕ್ಷ್ಮ ಸಮುದಾಯಗಳಿಗೆ ಅನಾನುಕೂಲವೇ ಹೆಚ್ಚು. ಅವುಗಳನ್ನು ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದೊಂದಿಗೆ ವಿಲೀನಗೊಳಿಸುವಂತೆ ಸಣ್ಣ ಸಮಾಜದವರು ಕೋರಬೇಕು’ ಎಂದು ಸಲಹೆ ನೀಡಿದರು.

ಸ್ಥಾಪಿಸಲಿ

ತನ್ನ ಕಾಲಘಟ್ಟಕ್ಕೂ ಮೀರಿ ಆಧುನಿಕ ಜಗತ್ತಿನ ವಿಶೇಷತೆಗಳನ್ನು ತೋರುವ ಚಮತ್ಕಾರಿ ಕೆತ್ತನೆಯಳ್ಳ ಬೇಲೂರು, ಹಳೇಬೀಡಿನ ದೇಗುಲದೆದುರು ಅಮರಶಿಲ್ಪಿ ಜಕಣಾಚಾರಿಯ ಕಂಚಿನ ಮೂರ್ತಿಯನ್ನು ಸರ್ಕಾರ ಸ್ಥಾಪಿಸಬೇಕು.

–ವೀರಣ್ಣ ಎಂ.ಅರ್ಕಸಾಲಿ, ಕಲಾವಿದ

ಸಣ್ಣ ತಪ್ಪುಗಳು ವರ್ಷದ ಶ್ರಮವನ್ನು ನುಂಗಿಹಾಕುವ ಸೂಕ್ಷ್ಮ ಕೆಲಸ ಶಿಲ್ಪಿಗಳದು ಹಾಗೂ ಬಹುತೇಕ ಕಾಯಕ ಸಮಾಜಗಳದ್ದು. ಈ ವೃತ್ತಿಯ ಜೊತೆಗೆ ಶಿಕ್ಷಣ ಮತ್ತು ಸರ್ಕಾರಿ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು.

–ಡಾ.ಡಿ.ತಿಮ್ಮಯ್ಯ, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT