ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎಸ್‌ಎಸ್‌ ಎಎಚ್‌ಇಆರ್‌ ಘಟಿಕೋತ್ಸವ 6ರಂದು

2,339 ವಿದ್ಯಾರ್ಥಿಗಳಿಗೆ ಪದವಿ, ಡಿಪ್ಲೊಮೊ ಪ್ರದಾನ; ದತ್ತಾತ್ರೇಯ ಹೊಸಬಾಳೆ ಭಾಗಿ
Last Updated 3 ಫೆಬ್ರುವರಿ 2023, 12:33 IST
ಅಕ್ಷರ ಗಾತ್ರ

ಮೈಸೂರು: ‘ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ(ಎಎಚ್‌ಇಆರ್)ಯ 13ನೇ ಘಟಿಕೋತ್ಸವವನ್ನು ಫೆ.6ರಂದು ಬೆಳಿಗ್ಗೆ 11ಕ್ಕೆ ನಗರದ ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

‘ಅಕಾಡೆಮಿಯ ಕುಲಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಘಟಿಕೋತ್ಸವ ಭಾಷಣ ಮತ್ತು ಪ್ರಶಸ್ತಿ–ಪದಕಗಳನ್ನು ಪ್ರದಾನ ಮಾಡಲಿದ್ದಾರೆ’ ಎಂದು ಕುಲಪತಿ ಡಾ.ಸುರೀಂದರ್ ಸಿಂಗ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ವಿವಿಧ ನಿಕಾಯಗಳ ಒಟ್ಟು 2,339 ಅಭ್ಯರ್ಥಿಗಳು ಪದವಿ ಮತ್ತು ಡಿಪ್ಲೊಮೊ ಪಡೆಯಲಿದ್ದಾರೆ. 65 ವಿದ್ಯಾರ್ಥಿಗಳಿಗೆ ಡಾಕ್ಟರ್‌ ಆಫ್‌ ಫಿಲಾಸಫಿ ಪದವಿ, 25 ಮಂದಿಗೆ ಮಾಸ್ಟರ್‌ ಆಫ್‌ ಫಿಲಾಸಫಿ, 6 ಮಂದಿ ಡಾಕ್ಟರೇಟ್‌ ಆಫ್‌ ಮೆಡಿಸಿನ್‌ (ಡಿಎಂ) ಮತ್ತು ಎಂಸಿಎಚ್‌ ಪದವಿ ಪಡೆಯಲಿದ್ದಾರೆ. 60 ಟಾಪರ್‌ಗಳಿಗೆ ಅವರವರ ಶೈಕ್ಷಣಿಕ ಸಾಧನೆಗಾಗಿ 83 ಪದಕಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುವುದು’ ಎಂದು ವಿವರ ನೀಡಿದರು.

ಕುಲಸಚಿವ ಡಾ.ಬಿ.ಮಂಜುನಾಥ ಮಾತನಾಡಿ, ‘ಪದವಿ, ಸ್ನಾತಕೋತ್ತರ, ಡಾಕ್ಟರೇಟ್‌ (ಪಿ.ಎಚ್.ಡಿ) ಮತ್ತು ವೃತ್ತಿಪರ ಶಿಕ್ಷಣ ನೀಡುವಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿರುವ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಗುಣಮಟ್ಟ ಮತ್ತು ಉತ್ಕೃಷ್ಟತೆಯಲ್ಲಿ ಪ್ರಗತಿ ಕಂಡಿದೆ. ಈ ಅಕಾಡೆಮಿಯನ್ನು ವಿಶ್ವವಿದ್ಯಾಲಯ ಧನ ಸಹಾಯ ಅಯೋಗವು (ಯುಜಿಸಿ) ಪರಿಗಣಿತ ವಿಶ್ವವಿದ್ಯಾಲಯವೆಂದು ಘೋಷಿಸಿದೆ’ ಎಂದರು.

‘ಕ್ಯೂಎಸ್ ಏಷ್ಯ ವಿಶ್ವವಿದ್ಯಾಲಯಗಳ ಶ್ರೇಯಾಂಕ-2022ರಲ್ಲಿ ಜೆಎಸ್‌ಎಸ್‌ ಎಎಚ್‌ಇಆರ್‌ 261–270ರ ಶ್ರೇಣಿಯ ಬ್ಯಾಂಡ್‌ನಲ್ಲಿ ಸ್ಥಾನ ಪಡೆದಿದೆ ಮತ್ತು ಏಷ್ಯಾದ ಅಗ್ರ 300ರಲ್ಲಿ ಗುರುತಿಸಿಕೊಂಡಿದೆ. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು(ಎನ್‌ಐಆರ್‌ಎಫ್‌)ನಲ್ಲಿ ಏಳು ವರ್ಷಗಳಿಂದಲೂ ಸತತವಾಗಿ ದೇಶದ ಅಗ್ರ 50ರಲ್ಲಿ ಸ್ಥಾನ ಉಳಿಸಿಕೊಂಡಿದ್ದು, ಪ್ರಸ್ತುತ 34ನೇ ಶ್ರೇಯಾಂಕ ಗಳಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ–2020 ಅನುಷ್ಠಾನಕ್ಕೆ ಕ್ರಮ ವಹಿಸಿದ್ದು, 4 ವರ್ಷಗಳ ಬಿಎಸ್‌ಸಿ ಪದವಿ ಕೋರ್ಸ್‌ ಆರಂಭಿಸಿದೆ’ ಎಂದು ತಿಳಿಸಿದರು.

‘ಪ್ರಸ್ತುತ ಒಟ್ಟು 8,795 ವಿದ್ಯಾರ್ಥಿಗಳು, 640 ಅಧ್ಯಾಪಕರು ಮತ್ತು 418 ಸಿಬ್ಬಂದಿಯನ್ನು ಹೊಂದಿದೆ. 2022ನೇ ಸಾಲಿನಲ್ಲಿ ಒಟ್ಟು 193 ವಿದ್ಯಾರ್ಥಿಗಳು ಸಂಶೋಧನೆಗೆ ನೋಂದಾಯಿಸಿದ್ದಾರೆ. ಈ ಘಟಿಕೋತ್ಸವದಲ್ಲಿ 65 ಮಂದಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುತ್ತಿದೆ ಮತ್ತು ಒಟ್ಟು 610 ವಿದ್ಯಾರ್ಥಿಗಳು ಪಿಎಚ್‌ಡಿಗೆ ನೋಂದಾಯಿಸಿಕೊಂಡಂತಾಗಿದೆ’ ಎಂದರು.

‘2022ನೇ ಸಾಲಿನಲ್ಲಿ ಜೆಎಸ್‌ಎಸ್‌ ಎಎಚ್‌ಇಆರ್‌ಗೆ ಅತಿ ಹೆಚ್ಚಿನ ಸಂಶೋಧನಾ ಅನುದಾನ ಅಂದರೆ ₹ 35.63 ಕೋಟಿ ಮಂಜೂರಾಗಿದೆ. 2022ರಲ್ಲಿ ಹಕ್ಕುಸ್ವಾಮ್ಯಕ್ಕಾಗಿ (ಪೇಟೆಂಟ್‌) ಒಟ್ಟು 38 ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಪ್ರಕಟಿಸಲಾಗಿದೆ. ಇದರಲ್ಲಿ 4 ಪೇಟೆಂಟ್‌ಗಳನ್ನು ನೀಡಿದೆ. ಇದುವರೆಗೆ ಒಟ್ಟಾರೆ 77 ಪೇಟೆಂಟ್‌ಗಾಗಿ ಸಲ್ಲಿಸಲಾಗಿದೆ– ಪ್ರಕಟಿಸಲಾಗಿದೆ’ ಎಂದು ಹೇಳಿದರು.

‘ನೂತನವಾಗಿ ಹೊರಹೊಮ್ಮುವ ಕ್ಷೇತ್ರಗಳಲ್ಲಿ ಬಹುಶಿಸ್ತೀಯ ಕಾರ್ಯಕ್ರಮಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಕಾನೂನು ಶಾಲೆಯನ್ನು ತೆರೆಯುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT