ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯದಿಂದ ತಮಿಳುನಾಡಿಗೆ 13 ಟಿಎಂಸಿ ಅಡಿಗೂ ಹೆಚ್ಚಿನ ನೀರನ್ನು ಹರಿಸಿದ್ದು, ಸದ್ಯ ನೀರಿನ ಮಟ್ಟ 2,274 ಅಡಿಗೆ ಕುಸಿದಿದೆ. ಜಲಾಶಯ ಬರಿದಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಮತ್ತು ಸ್ಥಳೀಯರು ಆತಂಕಗೊಂಡಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಕೇರಳದ ವಯನಾಡು ಪ್ರದೇಶ ವ್ಯಾಪ್ತಿಯಲ್ಲಿ ಪ್ರತಿ ಸಾಲಿನಲ್ಲೂ ಉತ್ತಮ ಮಳೆಯಾಗಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿತ್ತು. ಈ ವರ್ಷ ಜೂನ್‌ನಲ್ಲಿ ಮಳೆಯಾಗಲಿಲ್ಲ. ಜುಲೈನಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೇವಲ ಎರಡು ವಾರಗಳಲ್ಲಿ ಜಲಾಶಯ ಭರ್ತಿಯಾಗಿತ್ತು. ಆಗಸ್ಟ್‌ನಲ್ಲಿ ಮಳೆ ಇಲ್ಲದೆ ಒಳಹರಿವು ಕುಂಠಿತಗೊಂಡಿದೆ.
ಜಲಾಶಯದ ಗರಿಷ್ಠ ಮಟ್ಟ (ಸಮುದ್ರ ಮಟ್ಟದಿಂದ) 2,284 ಅಡಿ ಹೊಂದಿದ್ದು, ಸದ್ಯ ಜಲಾಶಯಕ್ಕೆ 750 ಕ್ಯುಸೆಕ್ ನೀರಿನ ಒಳಹರಿವಿದೆ. ಜಲಾಶಯದಿಂದ 2 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡುತ್ತಿದ್ದು, ಈ ಪೈಕಿ 700 ಕ್ಯುಸೆಕ್ ನೀರನ್ನು ಉಲ್ಲಹಳ್ಳಿ ರಾಂಪುರ ನಾಲೆ ಹಾಗೂ ಬೆಂಗಳೂರು, ಮೈಸೂರು ನಗರಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಹರಿಸಲಾಗುತ್ತಿದೆ. 1,300 ಕ್ಯುಸೆಕ್ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಜಲಾಶಯದ ಎಡ ಮತ್ತು ಬಲದಂಡೆ ನಾಲೆಗಳ ರೈತರಿಗೆ 2,200 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಕಳೆದ ಬಾರಿ ಇದೇ ಸಾಲಿನಲ್ಲಿ ಜಲಾಶಯದ 2,283 ಅಡಿ ಭರ್ತಿಯಾಗಿ 19 ಟಿಎಂಸಿ ಅಡಿ ನೀರು ಸಂಗ್ರಹವಿತ್ತು.
ಈ ಬಾರಿ ಮಳೆಯ ಅಭಾವದಿಂದ ರೈತರ ಬೆಳೆಗಳು ಒಣಗುತ್ತಿವೆ. ಜಲಾಶಯವೂ ಬರಿದಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಪ್ರಾಧಿಕಾರದ ಆದೇಶ ಪಾಲಿಸುವ ನಿಟ್ಟಿನಲ್ಲಿ ಕಳೆದ 10 ದಿನಗಳಿಂದ ನದಿಯ ಮೂಲಕ ತಮಿಳುನಾಡಿಗೆ ಪ್ರತಿನಿತ್ಯ ನೀರು ಹರಿಸಿರುವುದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಯನಾಡು ಮತ್ತು ಎಚ್.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆಯಾದರೆ ಮಾತ್ರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರಲಿದ್ದು, ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ರೈತರ ಜಮೀನಿಗೆ ನೀರು
‘ಕಬಿನಿ ಎಡ ಮತ್ತು ಬಲದಂಡೆ ನಾಲೆಗಳ ಮೂಲಕ ರೈತರ ಜಮೀನುಗಳಿಗೆ ನಿಗದಿ ಮಾಡಿರುವಂತೆ ನೀರನ್ನು ಹರಿಸಲಾಗುವುದು. ಸದ್ಯಕ್ಕೆ ರೈತರಿಗೆ ನೀರು ಹರಿಸಲು ಸಮಸ್ಯೆ ಆಗುವುದಿಲ್ಲ. ನದಿ ಹರಿಸುತ್ತಿದ್ದ ನೀರನ್ನು ಕಳೆದ 2–3 ದಿನಗಳಿಂದ ಕಡಿಮೆ ಮಾಡಲಾಗಿದೆ ಎಂದು ಕಬಿನಿ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.