ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 150 ಭಾಷೆಗಳು ಮರೆಯಾಗುವ ಸಾಧ್ಯತೆ; ಮಹೇಶ್ ಜೋಶಿ ಆತಂಕ

Published 26 ಏಪ್ರಿಲ್ 2023, 8:36 IST
Last Updated 26 ಏಪ್ರಿಲ್ 2023, 8:36 IST
ಅಕ್ಷರ ಗಾತ್ರ

ಮೈಸೂರು: '10 ಸಾವಿರಕ್ಕಿಂತ ಕಡಿಮೆ ಜನ ಮಾತನಾಡುವ ಭಾಷೆಯನ್ನು ಅವನತಿಯ ಅಂಚಿನಲ್ಲಿರುವ ಭಾಷೆಯೆಂದು ಗುರುತಿಸುವ ಕಾರಣದಿಂದ ದೇಶವು 220 ಭಾಷೆಗಳನ್ನು ಕಳೆದುಕೊಂಡಿದ್ದು, 150 ಭಾಷೆಗಳು ಮರೆಯಾಗುವ ಹಾದಿಯಲ್ಲಿವೆ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಆತಂಕ ವ್ಯಕ್ತಪಡಿಸಿದರು.

ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವು 'ಶಾಸ್ತ್ರೀಯ ಕನ್ನಡ- ಸಾಂಸ್ಕೃತಿಕ ಪರಿಶೋಧನೆ' ಕುರಿತು ಬುಧವಾರದಿಂದ ಆಯೋಜಿಸಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

'ಶಾಸ್ತ್ರೀಯ ಸ್ಥಾನಮಾನ ಪಡೆದ 6 ಭಾಷೆಗಳ ಪೈಕಿ ದಕ್ಷಿಣ ಭಾರತದ ನಾಲ್ಕು ಭಾಷೆಗಳಿವೆ ಎಂಬುದು ನಮ್ಮ ಹೆಮ್ಮೆ. ಆದರೆ ಕನ್ನಡ ಮಾತನಾಡುವವರು ಶೇಕಡಾ 64ರಷ್ಟಿರುವುದು ಬೇಸರದ ವಿಚಾರ. ಇತರೆ ಭಾಷೆಗಳಿಗೆ ಹೋಲಿಸಿದರೆ ಶಾಸ್ತ್ರೀಯ ಸ್ಥಾನಮಾನ ಪಡೆಯಲು ಬೇಕಾದ ಮಾನ್ಯತೆಗಳೆಲ್ಲವನ್ನೂ ಹೊಂದಿದ ಪರಿಪೂರ್ಣ ಭಾಷೆ ಕನ್ನಡ. ಅದನ್ನು ಮಾತನಾಡಲು ನಮಗೆ ಪ್ರತಿಷ್ಠೆ ಅಡ್ಡಿಯಾಗಬಾರದು' ಎಂದು ತಿಳಿಸಿದರು.

'ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ. ಅದು ಸಮುದಾಯದ ಜೀವಂತಿಕೆಯ ದ್ಯೋತಕ. ಅದು ಅಳಿದರರೆ ಸಮಾಜದ ಸಂಸ್ಕೃತಿ ನಶಿಸುತ್ತದೆ. ಜೀವನದ ವೈವಿಧ್ಯತೆಯನ್ನು ಕಾಪಾಡುವಲ್ಲಿರುವ ಆಸಕ್ತಿ ಮತ್ತು ಕಾಳಜಿ ಭಾಷೆಯ ವಿಚಾರದಲ್ಲೂ ಇರಲಿ' ಎಂದು ಸಲಹೆ ನೀಡಿದರು.

ಪ್ರೊ.ಹಂ.ಪ.ನಾಗರಾಜಯ್ಯ ಮಾತನಾಡಿ 'ವ್ಯಾಕರಣದ ಬದಲಿಗೆ ಸಿಡಿ ಮತ್ತು ಕೋಡ್ ಗಳ ಬಳಕೆ ಅಪಾಯಕಾರಿ. ತಲೆತಲಾಂತರದಿಂದ ಬಂದ ವ್ಯಾಕರಣವನ್ನು ಉಳಿಸಬೇಕು. ಕೋಡ್ ಬಳಕೆಯಿಂದಾಗುವ ಸಾಧಕ- ಬಾಧಕಗಳ ಬಗೆಗೂ ವಿಶ್ಲೇಷಣೆ ಮಾಡಬೇಕು' ಎಂದರು.

'ಹಳೆಗನ್ನಡ ಕಾವ್ಯಗಳ ಕಲಿಕೆ ಕಷ್ಟಕರವೆಂದು, ಸುಲಭವಾದ ಜ್ಞಾನಶಾಖೆಗಳಿಗೆ ಯುವ ಶಕ್ತಿ ಮಾರುಹೋಗುತ್ತಿದೆ. ಆದರೆ ಹೊಸ ಬದಲಾವಣೆಗಳು ಎಷ್ಟೇ ಬಂದರೂ ನಾವು ನಮ್ಮ ಮೂಲವನ್ನು ಮರೆಯಬಾರದು. ವರ್ತಮಾನದ ಜೊತೆಗೆ ಪ್ರಾಚೀನತೆ ಸಮ್ಮಿಳಿತವಾದಾಗ ಕಾವ್ಯದ ಮೌಲ್ಯ ಹೆಚ್ಚುತ್ತದೆ' ಎಂದರು.

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಉಪನಿರ್ದೇಶಕ ಪ್ರೊ.ಸಿ.ವಿ.ಶಿವರಾಮಕೃಷ್ಣ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ‌ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT