ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಅಪ್ಪಂದಿರಿಗೆ ಕ್ಷೇತ್ರ: ಪುತ್ರರು ಅತಂತ್ರ

ನಂಜನಗೂಡಿನಲ್ಲಿ ದರ್ಶನ್‌ಗೆ ಟಿಕೆಟ್‌, ವರುಣಾದಲ್ಲಿ ಸಿದ್ದರಾಮಯ್ಯ, ತಿ.ನರಸೀಪುರಕ್ಕೆ ಮಹದೇವಪ್ಪ
Last Updated 26 ಮಾರ್ಚ್ 2023, 6:30 IST
ಅಕ್ಷರ ಗಾತ್ರ

ಮೈಸೂರು: ಮಕ್ಕಳು ಬಯಸಿದ್ದ ಕ್ಷೇತ್ರದಲ್ಲಿ ಅಪ್ಪಂದಿರಿಗೆ ಅವಕಾಶ, ತಂದೆ ನಿಧನದಿಂದ ಪುತ್ರನಿಗೆ ಅವಕಾಶ. ಬರಲಿರುವ ವಿಧಾನಸಭೆ ಚುನಾವಣೆಗೆ ಶನಿವಾರ ಕಾಂಗ್ರೆಸ್‌ ಪ್ರಕಟಿಸಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯ ವಿಶೇಷಗಳಿವು. ಪಟ್ಟಿ ಬಂದ ಬಳಿಕ ಕೆಲವು ಕ್ಷೇತ್ರಗಳಲ್ಲಿ ಕಣ ಚಿತ್ರಣವೇ ಬದಲಾಗಿದ್ದು, ಎರಡು ಕ್ಷೇತ್ರಗಳಲ್ಲಿ ಇಬ್ಬರು ಅಪ್ಪಂದಿರಿಗೆ ಅಚ್ಚರಿಯ ಅವಕಾಶ ಸಿಕ್ಕಿದೆ. ಅವರ ಮಕ್ಕಳು ಖಾಲಿ ಉಳಿದಿದ್ದಾರೆ.

ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಸಿದ್ದರಾಮಯ್ಯ ಅವರಿಗೆ ವರುಣಾದಲ್ಲಿ ಅವಕಾಶ ಸಿಕ್ಕಿದ್ದು, ಅಲ್ಲಿನ ಶಾಸಕ, ಅವರ ಮಗ ಡಾ.ಯತೀಂದ್ರ ಅತಂತ್ರರಾಗಿದ್ದಾರೆ. ನಂಜನಗೂಡು ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ.ಎಚ್‌.ಸಿ.ಮಹದೇವಪ್ಪ ಅವರಿಗೆ ತಿ.ನರಸೀಪುರದಲ್ಲಿ ಅವಕಾಶ ಸಿಕ್ಕಿದ್ದು, ಅಲ್ಲಿ ಟಿಕೆಟ್‌ ಬಯಸಿದ್ದ ಅವರ ಮಗ ಸುನೀಲ್‌ ಬೋಸ್‌ ಅವರಿಗೆ ಮತ್ತೆ ನಿರಾಸೆಯಾಗಿದೆ. ಅವರು ಕಳೆದ ಬಾರಿಯೂ ಆಕಾಂಕ್ಷಿಯಾಗಿದ್ದರು.

ದರ್ಶನ್‌ ಧ್ರುವನಾರಾಯಣ ಕಣಕ್ಕೆ: ನಂಜನಗೂಡು ಟಿಕೆಟ್‌ಗೆ ಅರ್ಜಿ ಸಲ್ಲಿಸಿ ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರ ನಿಧನದಿಂದಾಗಿ, ಅವರ ಪುತ್ರ ದರ್ಶನ್‌ ಧ್ರುವನಾರಾಯಣಗೆ ಟಿಕೆಟ್‌ ಸಿಕ್ಕಿದೆ. ದರ್ಶನ್‌ ಅವರಿಗೇ ಟಿಕೆಟ್‌ ಕೊಡಬೇಕೆಂಬ ಆಗ್ರಹ ದೊಡ್ಡಮಟ್ಟದಲ್ಲಿ ಎದ್ದ ಪರಿಣಾಮ ಇದು.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ, ಕೃಷ್ಣರಾಜ, ಚಾಮರಾಜ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿಲ್ಲ. ಉಳಿದ ಎಂಟು ಕ್ಷೇತ್ರಗಳ ಪೈಕಿ, ಹಾಲಿ ಶಾಸಕರಾದ ಹುಣಸೂರಿನ ಎಚ್‌.ಪಿ.ಮಂಜುನಾಥ್‌, ನರಸಿಂಹರಾಜ ಕ್ಷೇತ್ರದ ತನ್ವೀರ್ ಸೇಠ್ ಮತ್ತು ಎಚ್‌.ಡಿ.ಕೋಟೆಯ ಸಿ.ಅನಿಲ್‌ ಕುಮಾರ್‌ ಅವರಿಗೆ ಮತ್ತೆ ಅವಕಾಶ ದೊರಕಿದೆ. ಕಳೆದ ಬಾರಿ ಸೋತಿದ್ದ ಮಾಜಿ ಶಾಸಕ ಕೆ.ವೆಂಕಟೇಶ್‌ ಅವರಿಗೆ ಪಿರಿಯಾಪಟ್ಟಣದಲ್ಲಿ ಮತ್ತೆ ಅವಕಾಶ ದೊರಕಿದೆ.

ಕಳೆದ ಬಾರಿ ತಿ.ನರಸೀಪುರದಲ್ಲಿ ಜೆಡಿಎಸ್‌ನ ಅಶ್ವಿನ್‌ಕುಮಾರ್ ಎದುರು ಸೋಲು ಕಂಡಿದ್ದ ಡಾ.ಎಚ್‌.ಸಿ.ಮಹದೇವಪ್ಪ ನಂಜನಗೂಡು ಕ್ಷೇತ್ರ ಬಯಸಿದ್ದರು. ಆದರೆ ಅವರಿಗೆ ತಿ.ನರಸೀಪುರದಲ್ಲಿ ಅವಕಾಶ ಸಿಕ್ಕಿದೆ.

ಕಳೆದ ಬಾರಿ ಜೆಡಿಎಸ್‌ನ ಸಾ.ರಾ.ಮಹೇಶ್‌ ಎದುರು ಸೋತಿದ್ದ, ಡಿ.ರವಿಶಂಕರ್‌ ಅವರಿಗೆ ಎರಡನೇ ಬಾರಿ ಕೃಷ್ಣರಾಜನಗರ ಕ್ಷೇತ್ರದಲ್ಲಿ ಅವಕಾಶ ದೊರಕಿದೆ. ಅವರ ತಂದೆ ದೊಡ್ಡಸ್ವಾಮೇಗೌಡ 2013ರಲ್ಲಿ ಕಾಂಗ್ರೆಸ್‌ನಿಂದ
ಸ್ಪರ್ಧಿಸಿದ್ದರು.

ನಂಜನಗೂಡು ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು. ಈ ಬಾರಿ ಮೊದಲ ಬಾರಿಗೆ ಸ್ಪರ್ಧಿಸಲಿರುವ ದರ್ಶನ್‌ ಧ್ರುವನಾರಾಯಣ ಪಕ್ಷವನ್ನು ಗೆಲುವಿನ ದಡ ಮುಟ್ಟಿಸುವರೇ? ಅನುಕಂಪದ ಮತಗಳು ಅವರ ಕೈಹಿಡಿಯಲಿವೆಯೇ ಎಂಬ ಪ್ರಶ್ನೆಯೂ ಮೂಡಿದೆ.

ತನ್ವೀರ್‌ಗೆ ಟಿಕೆಟ್‌: ತಿಂಗಳ ಹಿಂದಷ್ಟೇ ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದ ಶಾಸಕ ತನ್ವೀರ್‌ ಸೇಠ್‌ ಅವರಿಗೆ ಮತ್ತೆ ನರಸಿಂಹರಾಜ ಕ್ಷೇತ್ರದಲ್ಲಿ ಟಿಕೆಟ್‌ ಸಿಕ್ಕಿದೆ. ಕಾರ್ಯಕರ್ತರು ಅವರ ನಿರ್ಧಾರ ವಿರೋಧಿಸಿ ಇತ್ತೀಚೆಗೆ ಆತ್ಮಹತ್ಯೆಗೆ ಯತ್ನಿಸಿದ್ದರು.

ಅಭ್ಯರ್ಥಿಗಳೇನಂತಾರೆ?

ಸಂತಸ ತಂದಿದೆ

ದಶಕದಿಂದಲೂ ಕ್ಷೇತ್ರದ ಜನರೊಂದಿಗೆ ಒಡನಾಟವಿದೆ. ಕಳೆದ ಬಾರಿ ಕಡಿಮೆ ಮತದ ಅಂತರದಲ್ಲಿ ಗೆಲುವು ತಪ್ಪಿತ್ತು. ಸೋಲಿನಿಂದ ಸವಾಲಾಗಿ ಸ್ವೀಕರಿಸಿ ಜನಸೇವೆಯಲ್ಲಿ ನಿರಂತರವಾಗಿ ತೊಡಗಿದ್ದೇನೆ. ಟಿಕೆಟ್‌ಗೆ ಇಬ್ಬರು ಅರ್ಜಿ ಸಲ್ಲಿಸಿದ್ದೆವು. ವರಿಷ್ಠರು ನನಗೆ ಟಿಕೆಟ್‌ ನೀಡಿರುವುದು ಸಂತಸ ತಂದಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಸೇರಿದಂತೆ ಎಲ್ಲರನ್ನೂ ನೆನೆಯುವೆ. ಕ್ಷೇತ್ರದ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸಂಘಟನೆ, ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರೊಂದಿಗೆ ತೊಡಗಿಸಿರುವೆ

ಡಿ.ರವಿಶಂಕರ್, ಕೆ.ಆರ್‌.ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ

ಎಲ್ಲರ ಮಾರ್ಗದರ್ಶನದಲ್ಲಿ ನಡಿಗೆ

ವಕೀಲನಾಗಿ ಜನಸೇವೆ ಮಾಡಬೇಕೆಂದುಕೊಂಡಿದ್ದೆ. ತಂದೆಯವರೇ ಇಂದು ಕಣದಲ್ಲಿರಬೇಕಿತ್ತು. ಪಕ್ಷದ ತೀರ್ಮಾನವನ್ನು ಗೌರವಿಸುವೆ. ನಿತ್ಯ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳನ್ನು ಮಾತನಾಡಿಸುವಾಗೆಲ್ಲ ತಂದೆಯನ್ನೇ ಮಾತನಾಡಿಸುತ್ತಿದ್ದೇನೆ ಎನಿಸುತ್ತದೆ. ಸೇವೆ ಮಾಡುವ ಜವಾಬ್ದಾರಿಯನ್ನು ತಂದೆಯವರೇ ನೀಡಿದ್ದಾರೆನಿಸಿದೆ. ಎಲ್ಲ ಹಿರಿಯರು ಹಾಗೂ ಸ್ನೇಹಿತರ ಮಾರ್ಗದರ್ಶನವೂ ಬೇಕಿದೆ. ಕ್ಷೇತ್ರದ ಎಲ್ಲ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರ ಅಭಿಪ್ರಾಯ ಪಡೆದು ಪ್ರತಿ ಮನೆ–ಮನಗಳತ್ತ ಹೆಜ್ಜೆ ಹಾಕುವೆ

ದರ್ಶನ್‌ ಧ್ರುವನಾರಾಯಣ, ನಂಜನಗೂಡು ಅಭ್ಯರ್ಥಿ

ವರಿಷ್ಠರ ತೀರ್ಮಾನಕ್ಕೆ ಬದ್ಧ

ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೆ. ಕಾರ್ಯಕರ್ತರು ಮತ್ತೆ ನಿಲ್ಲಬೇಕು ಎಂದು ಒತ್ತಡ ಹಾಕಿದ್ದರು. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧವಾಗಿದ್ದು, ಟಿಕೆಟ್‌ ನೀಡಿದ್ದಕ್ಕೆ ಕೃತಜ್ಞತೆ ತಿಳಿಸುತ್ತೇನೆ. ಪ್ರಚಾರ, ಸಂಘಟನೆ ಸೇರಿದಂತೆ ಎಲ್ಲವರನ್ನು ವರಿಷ್ಠರ ಜೊತೆ ಚರ್ಚೆ ಮಾಡಿ ನಿರ್ಧರಿಸುವೆ.

ತನ್ವೀರ್‌ ಸೇಠ್‌, ನರಸಿಂಹರಾಜ ಕ್ಷೇತ್ರದ ಅಭ್ಯರ್ಥಿ

ಮೂರು ಕ್ಷೇತ್ರದಲ್ಲಿ ಆಕಾಂಕ್ಷಿಗಳ ದಂಡು

ಕೃಷ್ಣರಾಜ, ಚಾಮರಾಜ ಹಾಗೂ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ದಂಡೇ ಇದೆ. ತೀವ್ರ ಪೈಪೋಟಿ ಇದ್ದರಿಂದಲೇ ಎರಡನೇ ಪಟ್ಟಿಯಲ್ಲಿ ಈ ಮೂರು ಕ್ಷೇತ್ರದ ಅಭ್ಯರ್ಥಿಗಳ ಘೋಷಣೆಯಾಗಲಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜಿದ್ದಾಜಿದ್ದಿನ ಕಣವಾಗಿದ್ದ ಚಾಮುಂಡೇಶ್ವರಿಯಿಂದ ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸದೇ ಇರುವುದು ಹಾಗೂ ವರುಣದಿಂದ ಸ್ಪರ್ಧಿಸುತ್ತಿರುವುದರಿಂದ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಜೆಡಿಎಸ್‌ನ ಸಂಭಾವ್ಯ ಅಭ್ಯರ್ಥಿ, ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುವುದೇ ಕಾಂಗ್ರೆಸ್‌ಗೆ ಸವಾಲಾಗಿದೆ.

ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ರಾಕೇಶ್‌ ಪಾಪಣ್ಣ, ಮರೀಗೌಡ, ರೇಖಾ ವೆಂಕಟೇಶ್‌, ಕೂರ್ಗಳ್ಳಿ ಮಹದೇವ್‌, ಅರುಣ್ ಕುಮಾರ್‌, ಮುಖಂಡರಾದ ಕೃಷ್ಣಕುಮಾರ್ ಸಾಗರ್‌, ಬೆಳ್ಳುಳ್ಳಿ ಬಸವರಾಜ್‌, ಮೆಲ್ಲಳ್ಳಿ ಮಹದೇವಸ್ವಾಮಿ ಟಿಕೆಟ್‌ ಬಯಸಿದ್ದಾರೆ.

ಅರ್ಜಿ ಸಲ್ಲಿಸುವವರಷ್ಟೇ ಅಲ್ಲದೇ ಜಿ.ಟಿ.ದೇವೇಗೌಡ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ಧೇಗೌಡ, ಕೆಂಪನಾಯಕ ಅವರ ಪೈಕಿ ಮಾವಿನಹಳ್ಳಿ ಸಿದ್ಧೇಗೌಡ ಅವರೂ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.

ಕೃಷ್ಣರಾಜಕ್ಕೆ ನಾಲ್ವರು ಅರ್ಜಿ: ಕೃಷ್ಣರಾಜ ಕ್ಷೇತ್ರದಿಂದ ಸ್ಪರ್ಧಿಸಲು, ಎರಡು ಬಾರಿ ಶಾಸಕರಾಗಿದ್ದ ಎಂ.ಕೆ.ಸೋಮಶೇಖರ್, ಕೆಪಿಸಿಸಿ ಕಾರ್ಯದರ್ಶಿ ಭಾಸ್ಕರ್, ನವೀನ್ ಕುಮಾರ್‌ ಹಾಗೂ ಪ್ರದೀಪ್‌ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜ ಕ್ಷೇತ್ರದಿಂದ ವಾಸು ಹಾಗೂ ಹರೀಶ್‌ಗೌಡ ಆಕಾಂಕ್ಷಿಗಳಾಗಿದ್ದು, ಟಿಕೆಟ್‌ ಹಂಚಿಕೆಯು ಕಗ್ಗಂಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT