ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶೇ 90ರಷ್ಟು ಭರವಸೆ ಈಡೇರಿಸಿಲ್ಲ, ಬಜೆಟ್‌ ಭಾಷಣಕ್ಕಷ್ಟೇ ಸೀಮಿತ: ಡಿಕೆಶಿ

Last Updated 16 ಫೆಬ್ರುವರಿ 2023, 10:12 IST
ಅಕ್ಷರ ಗಾತ್ರ

ಮೈಸೂರು: ‘ಪ್ರಣಾಳಿಕೆಯ ಶೇ 90ರಷ್ಟು ಭರವಸೆಗಳನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈಡೇರಿಸಿಲ್ಲ. ಅಂತಿಮ ಬಜೆಟ್‌ ಕೂಡ ಭಾಷಣಕ್ಕಾಗಿಯೇ ಹೊರತು ಯಾವುದೂ ಅನುಷ್ಠಾನಗೊಳ್ಳುವುದಿಲ್ಲ’ ಎಂದು ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘2022ರ ಬಜೆಟ್‌ ಕೂಡ ಘೋಷಣೆಗಷ್ಟೇ ಸೀಮಿತವಾಯಿತು. ಡಬಲ್ ಎಂಜಿನ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ವೇಗಗೊಳಿಸಬೇಕಿತ್ತು. ಆದರೆ, ಎಂಜಿನ್‌ ಮುಂದೆ ಹೋಗಲೇ ಇಲ್ಲ. ಬಂದಿದ್ದು ಕೇವಲ ಹೊಗೆ’ ಎಂದು ಟೀಕಿಸಿದರು.

‘ಬೊಮ್ಮಾಯಿ ನುಡಿದಂತೆ ನಡೆಯಲಿಲ್ಲ. ಕಳೆದ ಬಾರಿ ಬಜೆಟ್‌ನಲ್ಲಿ ಎಷ್ಟು ಅನುಷ್ಠಾನಗೊಳಿಸಿದ್ದಾರೆಂಬ ಪ್ರಗತಿ ಪತ್ರ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

‘ಪ್ರಣಾಳಿಕೆಯಲ್ಲಿ ಸುಳ್ಳುಗಳೇ ತುಂಬಿವೆ. ಪ್ರತಿ ರೈತನ ₹1 ಲಕ್ಷ ಬೆಳೆ ಸಾಲ ಮನ್ನಾ ಮಾಡುತ್ತೇವೆಂದರು, ಕನಿಷ್ಠ ಬೆಂಬಲ ಯೋಜನೆಯಡಿ ರೈತರ ಆದಾಯ ದ್ವಿಗುಣವಾಗುತ್ತದೆ ಎಂದಿದ್ದರು, ₹5 ಸಾವಿರ ಕೋಟಿ ರೈತಬಂಧು ಆವರ್ತ ನಿಧಿ ಎಲ್ಲಿಟ್ಟಿದ್ದೀರಿ? ಪಂಪ್‌ಸೆಟ್‌ಗಳಿಗೆ 10 ಗಂಟೆ ತ್ರಿಫೇಸ್‌ ವಿದ್ಯುತ್ ಎಲ್ಲಿ’ ಎಂದು ಪ್ರಶ್ನಿಸಿದರು.

‘ಎಲ್ಲ ಕೆರೆಗಳನ್ನು ಪುನಶ್ಚೇತನಗೊಳಿಸುವ ಮಿಷನ್‌ ಕಲ್ಯಾಣ ಯೋಜನೆ ಜಾರಿಗೊಂಡಿದೆಯೇ? ₹10 ಸಾವಿರ ಕೋಟಿ ಶ್ರೀ ಉನ್ನತ ನಿಧಿ ಏನಾಯಿತು? ಸ್ಮಾರ್ಟ್‌ ಫೋನ್‌ ಹೆಣ್ಣು ಮಕ್ಕಳಿಗೆ ಕೊಡಯತ್ತೇವೆಂದರು– ಒಂದೂ ಬಂದಿಲ್ಲ. ಇಂಥ 170 ಪ್ರಶ್ನೆಗಳಿಗೆ ವಿಧಾನಸಭೆಯಲ್ಲಿ ಬಿಜೆಪಿಗರು ಉತ್ತರ ಕೊಡಲಿಲ್ಲ. ಮೂರುವರ್ಷದ ಅಧಿಕಾರದ ಅವಧಿಯಲ್ಲಿ ಸುಳ್ಳಿನ ಸರಮಾಲೆಯನ್ನು ಪೋಣಿಸಿದ್ದಾರೆ. ‌ಕಾರ್ಮಿಕರು, ರೈತರು, ಯುವಕರು, ವಿದ್ಯಾರ್ಥಿಗಳ ಮೇಲೆ ಬದ್ಧತೆ ಇಲ್ಲವೆಂದ ಮೇಲೆ ಸಂಕಲ್ಪ ಯಾತ್ರೆಯೇಕೆ ಮಾಡುತ್ತೀರಿ’ ಎಂದು ಕಿಡಿಕಾರಿದರು.

‘ಸಾಲವನ್ನು ಮಾಡಿ ಬಜೆಟ್‌ ಮಾಡುವಂತಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳಲಾಗದವರು ಅಧಿಕಾರದಲ್ಲಿರಲು ಲಾಯಕ್ಕಿಲ್ಲ. ಮಂಡಿಸುವ ಬಜೆಟ್‌ ಕೂಡ ಭಾಷಣಕ್ಕಷ್ಟೇ. ವಚನ ವಂಚನೆ ಮಾಡಿರುವುದೇ ಇವರ ಸಾಧನೆ. ₹ 4.5 ಸಾವಿರ ಕೋಟಿ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ಕೊಡದೇ ವಂಚಿಸಿದ್ದಾರೆ. ಶೇ 40 ಕಮಿಷನ್‌ ಸರ್ಕಾರ’ ಎಂದು ಹರಿಹಾಯ್ದರು.

‘ಕಾರ್ಪೊರೇಷನ್‌ ಬಿಲ್ಡಿಂಗ್‌ ಸೇರಿದಂತೆ ಎಲ್ಲ ಪಾರಂಪರಿಕ ಕಟ್ಟಡಗಳನ್ನು ಅಡಮಾನ ಇಟ್ಟಿದ್ದರು. ಬಿಜೆಪಿಗೆ ಆಡಳಿತ ಮಾಡಲು ಬರುವುದಿಲ್ಲ. ಭ್ರಷ್ಟಾಚಾರ ನಡೆಸುವುದಷ್ಟೇ ಗೊತ್ತು’ ಎಂದರು.

‘ಬಸವಣ್ಣ, ಶಿವಕುಮಾರ ಸ್ವಾಮೀಜಿ, ಅಂಬೇಡ್ಕರ್, ಬಾಲಗಂಗಾಂಗಧರನಾಥ ಸ್ವಾಮೀಜಿ, ನಾರಾಯಣಗುರು ಸೇರಿದಂತೆ ಎಲ್ಲರ ಇತಿಹಾಸವನ್ನು ತಿರುಚಿದರು’ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮುಖಂಡರಾದ ರಾಣಿ ಸತೀಶ್, ಸೂರಜ್‌ಹೆಗ್ಡೆ, ಮಂಜುಳಾ ರಾಜ್, ಎಚ್.ಎಂ.ರೇವಣ್ಣ, ಎಂ.ಕೆ.ಸೋಮಶೇಖರ್, ರೋಸಿ‌ಜಾನ್, ವಕ್ತಾರರಾದ ಎಂ.ಲಕ್ಷ್ಮಣ, ಎಚ್.ಎ.ವೆಂಕಟೇಶ್, ಕಾಂಗ್ರೆಸ್‌ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT