ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ, ಪ್ರತಾಪ ವಾಗ್ದಾಳಿ

Published 28 ಏಪ್ರಿಲ್ 2023, 4:05 IST
Last Updated 28 ಏಪ್ರಿಲ್ 2023, 4:05 IST
ಅಕ್ಷರ ಗಾತ್ರ

ಮೈಸೂರು: ವರುಣ ಕ್ಷೇತ್ರದ ಸಿದ್ದರಾಮನಹುಂಡಿ ಗ್ರಾಮದಲ್ಲಿ ಗುರುವಾರ ನಡೆದ ಗಲಾಟೆಯಲ್ಲಿ ಗಾಯಗೊಂಡು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ನಾಗೇಶ್ ಅವರ ಆರೋಗ್ಯವನ್ನು ಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಶುಕ್ರವಾರ ವಿಚಾರಿಸಿ, ಧೈರ್ಯ ತುಂಬಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಸಿದ್ದರಾಮಯ್ಯ ಅವರ ಅಣ್ಣನ‌ ಮನೆ ಮುಂದೆಯೇ ಈ ಗಲಾಟೆ ನಡೆಯಿತು. ಹತಾಶ ಮನೋಭಾವದಿಂದ, ಸೋಲಿನ ಭಯದಿಂದ ಈ ಕೆಲಸ ಮಾಡಿದ್ದಾರೆ. ನಾನು ಎಲ್ಲಿ ಹೋಗುತ್ತೇನೆಯೋ ಅಲ್ಲಿಗೆ ಕೆಲವರು ಬರುತ್ತಾರೆ' ಎಂದು ದೂರಿದರು.

'ಕ್ಷೇತ್ರದಲ್ಲಿ ಒಂದು ಜಾತಿಯ ಜನ ಮಾತ್ರ ದ್ವೇಷ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.

'ನಮ್ಮ ಕಾರ್ಯಕರ್ತನಿಗೆ ಆದ ನೋವು ಸಿದ್ದರಾಮಯ್ಯ ಅವರ ಅಣ್ಣನ ಮಗನಿಗೆ ಆಗಿದ್ದರೆ ನನ್ನನ್ನು ಯಾವ ದೃಷ್ಟಿಯಲ್ಲಿ ನೋಡುತ್ತಿದ್ದರು? ಇದೆಲ್ಲವೂ ಸಿದ್ದರಾಮಯ್ಯ ಘನತೆಗೆ ಒಳ್ಳೆಯದಲ್ಲ. ನನ್ನನ್ನು ಹೆದರಿಸಲು ಸಾಧ್ಯವಿಲ್ಲ. ನಾನು ಯಾವತ್ತಿಗೂ ವಿಚಲಿತನಾಗಲ್ಲ' ಎಂದರು.

'ವರುಣ ಕ್ಷೇತ್ರದ ಸ್ಥಿತಿ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಗುರುವಾರ ನಡೆದ ಘಟನೆಯ ವಿಚಾರದಲ್ಲಿ ಪೊಲೀಸರು ಕೂಡ ಕುತಂತ್ರ ಮಾಡಿದರು' ಎಂದು ಆರೋಪಿಸಿದರು.

ಸಂಸದ ಪ್ರತಾಪ ಸಿಂಹ ಮಾತನಾಡಿ, 'ಸಿದ್ದರಾಮಯ್ಯ ಪಾಳಯದಲ್ಲಿ ಹತಾಶೆ ಮತ್ತು ಸೋಲಿನ ಭಯ ಶುರುವಾಗಿದೆ. ಬಿಜೆಪಿಯವರು ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಕೆಲವರು ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದಾರೆ. ಸಿದ್ದರಾಮಯ್ಯ ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಗುರುವಾರ ನಮ್ಮ ಪ್ರಚಾರ ಮೆರವಣಿಗೆ ವೇಳೆ ಗಲಾಟೆ ಮಾಡಿದ್ದಾರೆ. ಬಕೆಟ್‌ಗಳಲ್ಲಿ ಕಲ್ಲು ಇಟ್ಟುಕೊಂಡಿದ್ದರು. ಗಲಾಟೆ ಮಾಡಲು ಎಲ್ಲಾ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಸೋಲಿನ ಭಯದಿಂದಾಗಿ ಸಿದ್ದರಾಮಯ್ಯ ಟೀಂ ಈ ರೀತಿ ಗಲಾಟೆಗಳನ್ನು ಮಾಡುತ್ತಿದೆ' ಎಂದು ಆರೋಪಿಸಿದರು.

'ಸಿದ್ದರಾಮನಹುಂಡಿಯು ಸಿದ್ದರಾಮಯ್ಯನ ಸಂಸ್ಥಾನವಾ? ಸಿದ್ದರಾಮಯ್ಯ ಪಾಳೇಗಾರಿಕೆ ಮಾಡುತ್ತಿದ್ದಾರಾ? ಅವರು ತಮ್ಮ ಸ್ವಜಾತಿಯವರಿಗೆ ಚಿತಾವಣೆ ನೀಡಿ ಈ ರೀತಿ ತೊಂದರೆ ಕೊಡಿಸುತ್ತಿದ್ದಾರೆ. ಅವರೊಬ್ಬ ಜಾತಿವಾದಿ. ಸಿದ್ದರಾಮಯ್ಯ ಅವರಿಗೆ ಸ್ವಜಾತಿ ಮಾತ್ರ ಮುಖ್ಯ ಎನ್ನುವುದು ವರುಣ ಜನರಿಗೆ ಗೊತ್ತಿದೆ. ಈ ಕಾರಣದಿಂದಾಗಿಯೇ ಎಲ್ಲಾ ವರ್ಗದ ಜನರು ಸೋಮಣ್ಣ ಪರವಾಗಿ ನಿಂತಿದ್ದಾರೆ' ಎಂದರು.

'ಸೋಮಣ್ಣ ಒಂದು ಕರೆ ಕೊಟ್ಟರೆ ನಿಮಗೂ ಎಲ್ಲಾ ಊರುಗಳಲ್ಲೂ ಇದೇ ರೀತಿ ಆಗಬಹುದು. ಆಗ ಪರಿಸ್ಥಿತಿ ಏನಾಗುತ್ತದೆ ಊಹಿಸಿ ಸಿದ್ದರಾಮಯ್ಯನವರೇ' ಎಂದು ಎಚ್ಚರಿಕೆ ನೀಡಿದರು.

'ಇದನ್ನು ನೀವು ಮುಂದುವರಿಸಿದರೆ, ನಮಗೂ ಶಕ್ತಿ ಇರುವುದನ್ನು ಸಾಬೀತು ಮಾಡಬೇಕಾಗುತ್ತದೆ. ಆಗ ವರುಣದಲ್ಲಿ ಶಾಂತಿ ಕೆಡುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT