ಮೈಸೂರು: ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಒಂದಾದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರನ್ನು ಸೋಲಿಸಲು, ಅವರ ಒಡನಾಟವನ್ನು ಈಚೆಗಷ್ಟೇ ತೊರೆದಿರುವ ‘ಸ್ವಾಭಿಮಾನಿ ಪಡೆ’ ಕಾರ್ಯನಿರ್ವಹಿಸುತ್ತಿದೆ.
ಮೂರು ವರ್ಷಗಳಿಂದ ಜೆಡಿಎಸ್ ವರಿಷ್ಠರೊಂದಿಗೆ ಅಂತರ ಕಾಯ್ದುಕೊಂಡಿದ್ದ, ಪಕ್ಷದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಸೇರ್ಪಡೆಗೆ ಯತ್ನವನ್ನೂ ನಡೆಸಿದ್ದ ಜಿಟಿಡಿ ನಡೆಯಿಂದ ಸಿಟ್ಟಾಗಿರುವ ಮುಖಂಡರು ಅವರ ವಿರುದ್ಧ ಕ್ಷೇತ್ರದಲ್ಲಿ ಕೆಲಸ ಶುರು ಮಾಡಿದ್ದಾರೆ.
ಅಭಿಮಾನಿಗಳೊಂದಿಗೆ ಈಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬೀರಿಹುಂಡಿ ಬಸವಣ್ಣ ಹಾಗೂ ಎಸ್.ಮಾದೇಗೌಡ ಮೊದಲಾದವರು ಜಿಟಿಡಿ ವಿರುದ್ಧ ಸಿಡಿದೆದ್ದಿದ್ದಾರೆ. ಟಿಕೆಟ್ ಯಾರಿಗೇ ಸಿಗಲಿ ಜಿಟಿಡಿ ಸೋಲಿಸುವುದೇ ನಿಮ್ಮ ಗುರಿಯಾಗಬೇಕು ಎಂಬ ಷರತ್ತಿನ ಮೇಲೆಯೇ ಅವರನ್ನು ಸಿದ್ದರಾಮಯ್ಯ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಳ್ಳಾಗಿ ಕಾಡುತ್ತಿದ್ದಾರೆ:
ಮೈಸೂರು ನಗರದ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಇಲ್ಲಿ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದು, ಪ್ರಚಾರವನ್ನೂ ಆರಂಭಿಸಿದ್ದಾರೆ. ಹೋದಲ್ಲೆಲ್ಲಾ ‘ನನ್ನೊಂದಿಗೆ ಇದ್ದವರೇ ಮುಳ್ಳಾಗಿ ಕಾಡುತ್ತಿದ್ದಾರೆ’ ಎಂಬ ಮಾತುಗಳನ್ನು ಆಡುತ್ತಿದ್ದಾರೆ.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ. ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಎರಡೂ ಪಕ್ಷಗಳು ಕಸರತ್ತು ನಡೆಸುತ್ತಲೇ ಇವೆ. ಕಳೆದ ಬಾರಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ 36ಸಾವಿರ ಮತಗಳ ಅಂತರದಿಂದ ಸೋತಿದ್ದರು. ಜಿಟಿಡಿ ಮಣಿಸಿ ಸೇಡು ತೀರಿಸಿಕೊಳ್ಳುವ ಗುರಿ ಸಿದ್ದರಾಮಯ್ಯ ಅವರದ್ದು. ಹೀಗಾಗಿಯೇ, ಜಿಟಿಡಿ ವಿರುದ್ಧ ಸಮರ ಸಾರಿದ್ದವರನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಇವೆ. ಅವರಿಗೆ ತಿರುಗೇಟು ನೀಡುವ ಉದ್ದೇಶದಿಂದಲೇ ಕ್ಷೇತ್ರದ ವ್ಯಾಪ್ತಿಯಲ್ಲೇ ಜೆಡಿಎಸ್‌ನಿಂದ ‘ಪಂಚರತ್ನ’ ರಥಯಾತ್ರೆಯ ಸಮಾರೋಪ ಸಮಾರಂಭವನ್ನು ಮಾರ್ಚ್ 26ರಂದು ನಡೆಸಲಾಗುತ್ತಿದೆ. ಇದಕ್ಕೆ ಜಿಟಿಡಿಗೇ ನೇತೃತ್ವ ವಹಿಸಲಾಗಿದೆ.
ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ!:
ಕಾಂಗ್ರೆಸ್‌ನಿಂದ ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್, ಮಾಜಿ ಸದಸ್ಯರಾದ ಲೇಖಾ ವೆಂಕಟೇಶ್, ಎಸ್.ಅರುಣ್‌ಕುಮಾರ್, ರಾಕೇಶ್ ಪಾಪಣ್ಣ, ಮುಖಂಡರಾದ ಎಚ್.ಸಿ.ಕೃಷ್ಣಕುಮಾರ್ ಸಾಗರ್, ಮೆಲ್ಲಹಳ್ಳಿ ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಜೆ.ಜೆ.ಆನಂದ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ‘ಜಿಟಿಡಿ ಸೋಲಿಸುವುದೇ ನಮ್ಮ ಧ್ಯೇಯ’ ಎಂದು ತೊಡೆ ತಟ್ಟಿರುವ ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ, ಜಿ.ಪಂ. ಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಎಸ್.ಮಾದೇಗೌಡ ಕೂಡ ಆಕಾಂಕ್ಷಿಗಳಾಗಿದ್ದಾರೆ. ಟಿಕೆಟ್ ಅನ್ನು ಒಕ್ಕಲಿಗರಿಗೆ ನೀಡಬೇಕೋ, ಕುರುಬರಿಗೋ ಎಂಬ ಜಿಜ್ಞಾಸೆಯಲ್ಲಿ ವರಿಷ್ಠರಿದ್ದಾರೆ.
ಬಿಜೆಪಿಯಿಂದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಹೇಮಂತಕುಮಾರ್ ಗೌಡ, ಬೋಗಾದಿ ಗ್ರಾ.ಪಂ. ಸದಸ್ಯ ಎನ್.ಅರುಣ್‌ಕುಮಾರ್ ಗೌಡ, ಕ್ಷೇತ್ರದ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್ ಹೆಸರು ಕೇಳಿಬರುತ್ತಿದೆ. ಈಚೆಗೆ ಬಿಜೆಪಿ ಸೇರಿರುವ ಕಾಂಗ್ರೆಸ್‌ನ ಮಾಜಿ ಶಾಸಕ ವಾಸು ಅವರ ಪುತ್ರ ವಿ.ಕವೀಶ್‌ಗೌಡ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.
ಕ್ಷೇತ್ರದಲ್ಲಿ 3,11,286 ಮತದಾರರಿದ್ದಾರೆ. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬರು, ವೀರಶೈವ- ಲಿಂಗಾಯತರು ನಂತರದ ಸ್ಥಾನದಲ್ಲಿದ್ದಾರೆ.
ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಒಂದು ಉಪ ಚುನಾವಣೆ ಸೇರಿ 5 ಬಾರಿ ಗೆದ್ದು, 3 ಬಾರಿ ಸೋತಿದ್ದಾರೆ. 2013 ಹಾಗೂ 2018ರಲ್ಲಿ ಜಿ.ಟಿ.ದೇವೇಗೌಡ ಗೆದ್ದಿದ್ದಾರೆ.
ಉತ್ತರ ಕೊಡುತ್ತೇನೆ
ನನ್ನೊಂದಿಗೆ ಇದ್ದವರೇ ತೊಂದರೆ ಕೊಡುವುದನ್ನು ಹಿಂದಿನಿಂದಲೂ ಎದುರಿಸಿದ್ದೇನೆ. ಅಭ್ಯರ್ಥಿಗಳು ಯಾರೇ ಆಗಲಿ. ಎಲ್ಲದಕ್ಕೂ ಚುನಾವಣೆಯಲ್ಲಿ ಉತ್ತರ ಕೊಡುತ್ತೇನೆ.
-ಜಿ.ಟಿ.ದೇವೇಗೌಡ, ಶಾಸಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.