ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಭೆ: ಹಣ ವಸೂಲಿ ಆರೋಪ

ಮಾಲಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ
Last Updated 22 ಫೆಬ್ರುವರಿ 2023, 5:43 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ‘ಶೇ 10ರಷ್ಟು ಕಮಿಷನ್ ಇಲ್ಲದೆ ಯಾವುದೇ ಕಾಮಗಾರಿಗಳಿಗೆ ಚಾಲನೆ ನೀಡದ ಜೆಡಿಎಸ್ ಶಾಸಕ ಕೆ.ಮಹದೇವ್, ನಾನು ಈ ಹಿಂದೆ ಚಾಲನೆ ನೀಡಿದ್ದ ಕಾಮಗಾರಿಗಳಿಗೆ ಮತ್ತೆ ಪೂಜೆ ಮಾಡಿಸಿ ಹಣ ವಸೂಲಿಗೆ ನಿಂತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಕೆ.ವೆಂಕಟೇಶ್ ಆರೋಪಿಸಿದರು.

ತಾಲ್ಲೂಕಿನ ಪಂಚವಳ್ಳಿಯಲ್ಲಿ ಮಂಗಳವಾರ ನಡೆದ ಕಿರನಲ್ಲಿ, ಪಂಚವಳ್ಳಿ, ಮಾಲಂಗಿ ಗ್ರಾ.ಪಂ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯದ ವಿಚಾರವಾಗಿ ಕೆ.ಮಹದೇವ್‌ ಅವರ ಸವಾಲು ಸ್ವೀಕರಿಸಲು ನಾನು ತಯಾರಿದ್ದೇನೆ. ಸೂಕ್ತ ವೇದಿಕೆಗೆ ಕರೆತನ್ನಿ. ಅಂಕಿ– ಅಂಶಗಳೊಂದಿಗೆ ಹಾಜರಾಗಿ ಉತ್ತರಿಸುವೆ. ಮುಖ್ಯ ರಸ್ತೆಯೊಂದರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ, ಮಾರ್ಗ ಮಧ್ಯೆ ಸಿಗುವ ಎಲ್ಲಾ ಹಳ್ಳಿಗಳಲ್ಲೂ ಪ್ರಚಾರಕ್ಕಾಗಿ ಪೂಜೆ ಮಾಡುವ ಶಾಸಕನಿಂದ ನಾನು ಕಲಿಯಬೇಕಿಲ್ಲ’ ಎಂದು ಟೀಕಿಸಿದರು.

‘ಜೆಡಿಎಸ್‌ಗೆ ತತ್ವ ಸಿದ್ಧಾಂತಗಳಿಲ್ಲ. ಕುಟುಂಬದ ಅಧಿಕಾರ ಮುಖ್ಯವೇ ಹೊರತು ಜನರ ಹಿತವಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕದ ತಟ್ಟುವ ಅವಕಾಶವಾದಿ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು’ ಎಂದು ಸಲಹೆ ನೀಡಿದರು.

‘ಸರ್ವಾಧಿಕಾರಿ ಧೋರಣೆಯ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಕಿತ್ತೊಗೆದು ಸರ್ವ ಜನಾಂಗದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ‘ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ್ದೇ ಸಾಧನೆ ಎನ್ನುವ ಬಿಜೆಪಿ ಹಾಗೂ ಕುಟುಂಬ ರಾಜಕಾರಣದ ಜೆಡಿಎಸ್ ಪಕ್ಷವನ್ನು ಮತದಾರರು ತಿರಸ್ಕರಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಸಹಕರಿಸಬೇಕು’ ಎಂದು ಕೋರಿದರು.

ಕಾಂಗ್ರೆಸ್ ಮುಖಂಡ ಎಚ್.ಡಿ.ಗಣೇಶ್ ಮಾತನಾಡಿ, ‘ಶಾಸಕ ಕೆ.ಮಹದೇವ್‌ ಅವರಿಗೆ ತಾಲ್ಲೂಕಿನ ಮೂಲಸೌಕರ್ಯದ ಬಗ್ಗೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪಂಚಾಯಿತಿಗಳು ಮಾಡುವ ಕೆಲಸಕ್ಕೆ ಗುದ್ದಲಿ, ಹಾರೆ ಹಿಡಿಯುವುದೇ ಶಾಸಕನ ಜವಾಬ್ದಾರಿ ಎಂದು ತಿಳಿದು ಪುಕ್ಕಟೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಇದಕ್ಕೂ ಮುನ್ನ ತಾತನಹಳ್ಳಿ ಗೇಟ್‌ನಿಂದ ಸತ್ಯಗಾಲ ಮೂಲಕ ಪಂಚವಳ್ಳಿಗೆ ಬೈಕ್ ಮೆರವಣಿಗೆ ಮೂಲಕ ಆಗಮಿಸಿದ ಪಕ್ಷದ ಮುಖಂಡರಿಗೆ ಹೂಮಳೆ ಸುರಿಸುವ ಮೂಲಕ ಸ್ವಾಗತ ಕೋರಲಾಯಿತು. ತೆರೆದ ವಾಹನದಲ್ಲಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಹಲವರು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.

ತಾ.ಪಂ ಮಾಜಿ ಸದಸ್ಯ ಟಿ.ಈರಯ್ಯ, ವಕೀಲ ಬಿ.ವಿ. ಜವರೇಗೌಡ, ಬೆಕ್ಕರೆ ನಂಜುಂಡಸ್ವಾಮಿ, ಸೀಗೂರು ವಿಜಯ್ ಕುಮಾರ್, ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಎಸ್‌ಸಿ ಘಟಕದ ಅಧ್ಯಕ್ಷ ಪಿ.ಮಹದೇವ್, ಗ್ರಾ.ಪಂ. ಅಧ್ಯಕ್ಷರಾದ ಗೋವಿಂದರಾಜ್, ರವಿ, ಮಂಜುನಾಥ್, ಮುಖಂಡರಾದ ಲಕ್ಷ್ಮಣೆಗೌಡ, ಈ.ಪಿ. ಲೋಕೇಶ್, ಕರಿಗೌಡ, ಆರ್.ಎಸ್ ಮಹದೇವ್, ಮೋಹನ್ ಮಾಸ್ಟರ್, ತಮ್ಮಣ್ಣಯ್ಯ, ಗಿರೀಶ್, ಲೋಹಿತ್, ಪುರುಷೋತ್ತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT