ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ

Last Updated 7 ಜನವರಿ 2023, 9:03 IST
ಅಕ್ಷರ ಗಾತ್ರ

ಮೈಸೂರು: ‘ಇದು ವಿಧಾನಸಭೆ ಚುನಾವಣೆಯ ವರ್ಷವಾದ್ದರಿಂದ ಬಿಜೆಪಿಯವರು ತಮ್ಮ ರಹಸ್ಯ ಕಾರ್ಯಸೂಚಿಗಳ ಜಾರಿಗೆ ಜನರ ದಿಕ್ಕು ತಪ್ಪಿಸುವ ಕೆಲಸದಲ್ಲಿ ವ್ಯಾಪಕವಾಗಿ ತೊಡಗಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ವಾಗ್ದಾಳಿ ನಡೆಸಿದರು.

ರಂಗಾಯಣದಲ್ಲಿ ಈಚೆಗೆ ನಡೆದ ನಾಟಕದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಅವಹೇಳನ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಸಂಬಂಧ ಇಲ್ಲಿನ ಪುರಭವನದಲ್ಲಿ ಸ್ವಾಭಿಮಾನ ಹೋರಾಟ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಬಿಜೆಪಿ ಅವಕಾಶ ಇಲ್ಲ. ಆದ್ದರಿಂದಲೇ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದು, ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದಂತೆ ಮಾಡುವುದು ಅವರ ಉದ್ದೇಶವಾಗಿದೆ. ಆದ್ದರಿಂದ ನಾವು ಪಕ್ಷಾತೀತವಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಹೋರಾಡಬೇಕೇ‌ ಹೊರತು ಸಣ್ಣಪುಟ್ಟವರ ವಿರುದ್ಧವಲ್ಲ. ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬಗ್ಗೆ ಮಾತನಾಡಿದರೆ ಅವರು ಹೀರೊ ಆಗುತ್ತಾರೆ; ವಿಧಾನಪರಿಷತ್‌ ಸದಸ್ಯ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ. ಅದಕ್ಕಾಗಿ ನಮ್ಮ ಹೋರಾಟ ಬಿಜೆಪಿ ವಿರುದ್ಧ ಇರಬೇಕು’ ಎಂದರು.

ಮುತ್ತಿಗೆ ಹಾಕೋಣ:

‘ರಂಗಾಯಣಕ್ಕೆ ಮುತ್ತಿಗೆ ಹಾಕಬೇಕು. ನಾಯಕರ ವಿರುದ್ಧ ಕೇವಲವಾಗಿ ಮಾತನಾಡುವವರಿಗೆ ಬುದ್ಧಿ ಕಲಿಸಬೇಕು. ಇಲ್ಲದಿದ್ದರೆ, ಅವಹೇಳನ ಮುಂದುವರಿಯುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಬೇಕು’ ಎಂದು ಕೋರಿದರು.

‘ಸಿದ್ದರಾಮಯ್ಯ ಅವರಿಂದ ಲಾಭ ಪಡೆದವರು, ಪರವಾಗಿ ಮಾತನಾಡುತ್ತಿಲ್ಲದಿರುವುದನ್ನು ನೋಡಿದರೆ ಕಣ್ಣೀರು ಬರುತ್ತದೆ’ ಎಂದು ಹೇಳಿದರು.

‘ಒಕ್ಕಲಿಗರು- ಕುರುಬರ ನಡುವೆ ದ್ವೇಷ ಹರಡುವ ವ್ಯವಸ್ಥಿತ ಸಂಚನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಎಲ್ಲರೂ ಒಟ್ಟಾಗಬೇಕು’ ಎಂದು ತಿಳಿಸಿದರು.

ಹೋರಾಟಕ್ಕೆ ಬೆಂಬಲ:

ರಂಗ ಸಂಘಟಕ ಗೋಪಾಲ್ ಮಾತನಾಡಿ, ‘ರಂಗಭೂಮಿಯು ಕಟ್ಟುವ ಮಾಧ್ಯಮ. ಸಾಂಸ್ಕೃತಿಕ ಆಯಾಮದ ಪ್ರಜ್ಞೆ. ಯಾರನ್ನೋ ಅವಹೇಳನ ಮಾಡುವುದು ರಂಗಭೂಮಿಯ ಪ್ರಜ್ಞೆ ಅಲ್ಲ. ಆದರೆ, ರಂಗಾಯಣವು ಅದನ್ನು ಬಳಸಿಕೊಂಡು ವೈದಿಕ‌ ಹುನ್ನಾರ ಬಿತ್ತುವ ಕೆಲಸ ಮಾಡಿದೆ. ಇದನ್ನು ವಿರೋಧಿಸಿ ನಡೆಯುವ ಹೋರಾಟಕ್ಕೆ ನಮ್ಮ ಬೆಂಬಲವಿದೆ’ ಎಂದರು.

ರಂಗ ಕಲಾವಿದ ಕೃಷ್ಣಪ್ರಸಾದ್ ಮಾತನಾಡಿ, ‘ರಂಗಾಯಣವು ಸಿದ್ದರಾಮಯ್ಯ ಬೆಂಬಲದಿಂದ ತಲೆ ಎತ್ತಿ ನಿಂತಿತು. ಕಲಾವಿದರಿಗೆ ನೆರಳು- ಅನ್ನ ಕೊಟ್ಟಿದ್ದು ಅವರ ಸರ್ಕಾರ. ಅವರಿಂದ ಲಾಭ ಪಡೆದವರಲ್ಲಿ ಬ್ರಾಹ್ಮಣ ಕಲಾವಿದರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗ, ರಂಗಾಯಣವೇ ಅವರನ್ನು ಅವಹೇಳನ ಮಾಡಿರುವುದು ಖಂಡನೀಯ’ ಎಂದು ತಿಳಿಸಿದರು.

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ಸಮಾಜವಾದಿ ಹಿನ್ನೆಲೆಯಿಂದ ಬಂದ ಸಾಂಸ್ಕೃತಿಕ ನಾಯಕರನ್ನು ಅವಹೇಳನ‌ ಮಾಡುವುದು, ಸರ್ಕಾರಿ ಸಂಸ್ಥೆಗಳನ್ನು ರಾಜಕೀಯಕ್ಕೆ ಬೆಳೆಸಿಕೊಳ್ಳುವುದು ಆತಂಕಕಾರಿ ಸಂಗತಿ’ ಎಂದರು.

ಪಾಠ ಕಲಿಸಬೇಕು:

‘ನಿರ್ದೇಶಕರು ರಂಗಾಯಣಕ್ಕೆ ಕಪ್ಪುಚುಕ್ಕೆಯನ್ನು ಇಟ್ಟಿದ್ದಾರೆ. ಕೋಮು ಸಂಘರ್ಷಕ್ಕೆ ಎಡೆಮಾಡುವ ಕೆಲಸ ರಂಗಾಯಣದಲ್ಲಿ ನಡೆಯುತ್ತಿದೆ. ಅವರಿಗೆ ಎಲ್ಲ ಸಮುದಾಯದವರೂ ಸೇರಿ ಪಾಠ ಕಲಿಸಬೇಕು’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಡಾ.ಎಂ.ತಿಮ್ಮಯ್ಯ ಮಾತನಾಡಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ, ಕುರುಬರ ಸಂಘ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ಮುಖಂಡರಾದ ವಾಸು, ಹರೀಶ್‌ ಗೌಡ, ಎಂ.ಶಿವಣ್ಣ, ಮಂಜುಳಾ ಮಾಸನ, ಪುಷ್ಪಲತಾ ಚಿಕ್ಕಣ್ಣ, ಲತಾ ಸಿದ್ದಶೆಟ್ಟಿ, ಗೋಪಿನಾಥ್, ಮೈಸೂರು ಸ್ಲಂಗಳ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ದಾಸ್, ಬಸವಣ್ಣ ಹಾಗೂ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT