ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ನುಂಗಲು ‘ಕತ್ತೆ ಕಿವಿ’ ಸಜ್ಜು

ಕೆಲವೇ ದಿನದಲ್ಲೇ ದುಪ್ಪಟ್ಟಾಗುವ ಕಳೆ ಸಸ್ಯ; ನಿರ್ಲಕ್ಷಿಸಿದರೆ ಕೆರೆಯೇ ನಾಶ
Published 23 ಮೇ 2023, 21:52 IST
Last Updated 23 ಮೇ 2023, 21:52 IST
ಅಕ್ಷರ ಗಾತ್ರ

ಸುಧೀರ್‌ಕುಮಾರ್‌ ಎಚ್‌.ಕೆ.

ಮೈಸೂರು: ಗಂಟೆ ಹೂವಿನ ಜೊಂಡು, ಅಂತರ ತಾವರೆ, ಅಂತರಗಂಗೆ, ಕತ್ತೆ ಕಿವಿ ಎಂದು ನಾನಾ ಹೆಸರಿನಲ್ಲಿ ಕರೆಯಲ್ಪಡುವ ‘ವಾಟರ್‌ ಹಯಸಿಂತ್‌’ ಸಸ್ಯ ಕುಕ್ಕರಹಳ್ಳಿ ಕೆರೆಯನ್ನು ಆವರಿಸಲು ಸಜ್ಜಾಗಿದೆ.

ಐದರಿಂದ ಹದಿನೈದು ದಿನಗಳಲ್ಲಿಯೇ ದುಪ್ಪಟ್ಟಾಗಿ ಬೆಳೆಯುವ ಈ ಕಳೆಸಸ್ಯಕ್ಕೆ ಕೊಳಚೆ ನೀರು ದೊರೆತರಂತೂ ಅತಿಯಾಗಿ ಹಬ್ಬುತ್ತದೆ.

‘ಪಾಂಟಿಡೇರಿಯೇಸಿ’ ಕುಟುಂಬದ ಐಕಾರ್ನಿಯ ತಳಿಗೆ ಸೇರಿದ ಸಸ್ಯ ದಕ್ಷಿಣ ಅಮೆರಿಕದ ಅಮೆಜಾನ್‌ ನದಿ ಪಾತ್ರದಲ್ಲಿ ಮೊದಲು ಕಂಡಿದ್ದು, ಇಂದು ಆಸ್ಟ್ರೇಲಿಯಾ, ಪಾಕಿಸ್ತಾನ, ಜಾವಾ, ಭಾರತ ಮುಂತಾದ ದೇಶಗಳಲ್ಲಿ ಬೃಹತ್ ಕಳೆಯಾಗಿ ವ್ಯಾಪಿಸಿ ತೊಂದರೆ ನೀಡುತ್ತಿದೆ. ಕೆರೆ, ಕಾಲುವೆಗಳಲ್ಲಿ ಒತ್ತಾಗಿ ಬೆಳೆದು ಸೊಳ್ಳೆಗಳಿಗೆ ಆಶ್ರಯ ತಾಣವಾಗಿದೆ.

ಕೆರೆಯ ಹುಣಸೂರು ರಸ್ತೆ ಬದಿಯ ಕೊಳಚೆ ನೀರು ಸಂಗ್ರಹಗೊಳ್ಳುವ ಜಾಗದಲ್ಲಿ ವಿಪರೀತ ಆವರಿಸಿರುವ ಈ ಕಳೆ ಸಸ್ಯ ನೀರಿನ ಕೊಳಚೆ ಮಟ್ಟವನ್ನು ತೋರುತ್ತಿದೆ. ಕೆರೆ ದಂಡೆಯ ಬದಿಗಳಲ್ಲಿ ಚಪ್ಪರದಂತೆ ಹರಡಿ ನೀರಿನ ಆರೋಗ್ಯಕ್ಕೆ ಕಂಟಕ ಪ್ರಾಯವಾಗುತ್ತಿದೆ.

ಪೂರ್ಣಯ್ಯ ಕಾಲುವೆ ಸೇರುವ ಪಾದಚಾರಿ ಮಾರ್ಗದ ಸೇತುವೆ ಬಳಿ, ಮಾನವ ಸಂಪನ್ಮೂಲ ಕೇಂದ್ರದ ಕಾಲುವೆ ಬಳಿ, ಕೊಳಚೆ ನೀರು ಬೇರ್ಪಡಿಸುವ ದಂಡೆ ಬದಿಯಲ್ಲಿ, ರಂಗಾಯಣದ ಬದಿಯ ಕೆರೆ ಪಾತ್ರವನ್ನೇ ಈ ಸಸ್ಯ ನುಂಗಿ ನೀರು ಕುಡಿದಂತೆ ಕಾಣುತ್ತದೆ.

ಇದರ ವಿಪರೀತ ಬೆಳವಣಿಗೆ ನೀರಿನ ಆಮ್ಲಜನಕ ಮಟ್ಟವನ್ನು ಕುಸಿಯುವಂತೆ ಮಾಡುವುದಲ್ಲದೇ, ಜಲಚರಗಳ ಜೀವಕ್ಕೂ ಕುತ್ತು ತರುತ್ತದೆ. ಸಹಜವಾದ ನೀರಿನ ಹರಿವಿಗೆ ತೊಂದರೆ ಉಂಟುಮಾಡಿ, ಕೆರೆಯಲ್ಲಿಯೇ ಭಿನ್ನ ವಾತಾವರಣ ಸೃಷ್ಟಿಗೆ ಕಾರಣವಾಗುತ್ತಿದೆ. ಕೊನೆಯಲ್ಲಿ ನೀರಿನ ಗುಣಮಟ್ಟವೇ ನಾಶವಾಗಿ ಕೊಳೆತು ನಾರುವಂತೆ ಮಾಡುತ್ತದೆ.

ಆಲ್ಗಲ್‌ ಬ್ಲೂಮಿಂಗ್‌ ಜೀವಂತ: ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ಹಸಿರು ಪಾಚಿಯು (ಆಲ್ಗೆ) ಇನ್ನೂ ಜೀವಂತವಾಗಿದೆ. ನೀರಿನಲ್ಲಿ ಕೊಳಚೆ ಸೇರಿ ಹಠಾತ್‌ ಪೋಷಕಾಂಶಗಳು ಹೆಚ್ಚಾದರೆ ಅದು ಸಾಂಕ್ರಾಮಿಕಗೊಳ್ಳಲಿದೆ. 2015ರಲ್ಲಿ ಉಂಟಾದಂತೆ ಇಡೀ ಕೆರೆಗೆ ಟಾರ್ಪಲ್‌ ಹಾಸಿದಂತಾಗಿ ಜಲಚರಗಳ ಸಾವು ಮತ್ತು ದುರ್ನಾತಕ್ಕೆ ಕಾರಣವಾಗಲಿದೆ.

‘ಶುದ್ಧ ನೀರು ಕೆರೆಗೆ ಸೇರಿದರೆ, ಕೊಳಚೆ ನೀರು ಬರುವುದನ್ನು ತಡೆದರೆ ಮಾತ್ರ ಇಂಥ ಕಳೆ ಸಸ್ಯಗಳನ್ನು ನಿಯಂತ್ರಿಸಬಹುದು. ಮಳೆ ನೀರಿನೊಂದಿಗೆ ಬರುವ, ದನಗಳ ಮೈತೊಳೆದ ನೀರು, ವಾಹನ ಹಾಗೂ ಬಟ್ಟೆ ತೊಳೆದ ಸೋಪಿನ ನೀರು ಕೆರೆಯತ್ತ ಬರುತ್ತಿದ್ದು, ಅದರಲ್ಲಿರುವ ಪಾಸ್ಫೇಟ್‌ ಅಂಶ ಕಳೆ ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸಿದೆ’ ಎಂದು ರಾಜ್ಯ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಯ ಉತ್ತರ ದಿಬ್ಬ ಮತ್ತು ಹುಣಸೂರು ರಸ್ತೆ ನಡುವೆ ಎರಡು ದ್ವೀಪಗಳನ್ನು ರಚಿಸಬೇಕು. ಪಡುವಾರಹಳ್ಳಿ ಕಡೆಯಿಂದ ಬರುವ ಚರಂಡಿ ತ್ಯಾಜ್ಯವೂ ಅವುಗಳ ಮಧ್ಯೆ ಸಾಗಿ ದಟ್ಟ ಗಿಡಗಳನ್ನು ಹಾದು ಕೆರೆ ಸೇರುವಂತಾದರೆ ಮಾತ್ರ, ಕಳೆ ಸಸ್ಯದ ಬೆಳವಣಿಗೆಯನ್ನು ನಿಯಂತ್ರಿಸಬಹುದು. ಕೆರೆಯಲ್ಲಿ ಕೇವಲ ಒಂದು ಕಳೆ ಸಸ್ಯವಿದ್ದರೂ ಅಪಾಯಕಾರಿಯೇ’ ಎಂದು ಆತಂಕ ವ್ಯಕ್ತಪಡಿಸಿದರು.

ಕೆರೆ ದಂಡೆ ಬದಿಯಲ್ಲಿಯೇ ಹರಡಿಕೊಂಡಿರುವ ಕಳೆಸಸ್ಯಗಳನ್ನು ತೆರವುಗೊಳಿಸದಿದ್ದರೆ ಇಡೀ ಕೆರೆಯನ್ನೇ ಆವರಿಸಿ ಜಲಚರಗಳಿಗೆ ಆಪತ್ತು ತರುತ್ತದೆ
ಪಲ್ಲವಿ ಸರಸ್ವತಿಪುರಂ
ಕೆರೆಗೆ ‌ಕೊಳಚೆ ನೀರು ಸೇರುವುದನ್ನು ಮೊದಲು ತಡೆಯಬೇಕು. ನಿರಂತರ ಕಳೆ ತೆರವು ಆದ್ಯತೆಯ ಕೆಲಸವಾಗಬೇಕು
ಅರವಿಂದ್‌ ಬೃಂದಾವನ ಬಡಾವಣೆ

‘ನಿಯಮಿತವಾಗಿ ಕಳೆ ತೆರವು’

‘ಕೆರೆಯಲ್ಲಿರುವ ಕಳೆಯ ಜೊಂಡುಗಳನ್ನು ನಿಯಮಿತವಾಗಿ ತೆರವುಗೊಳಿಸುತ್ತಿದ್ದೇವೆ. ಮುಂಚೆ ಇನ್ನೂ ಹೆಚ್ಚಿತ್ತು‌’ ಎಂದು ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಎಸ್‌.ಕೆ.ಮುಜಾವರ್‌ ಪ್ರತಿಕ್ರಿಯಿಸಿದರು. ‘ಜೊಂಡು ತೆಗೆಯಲೆಂದೇ ಎರಡು ಶಿಥಿಲವಾದ ಬೋಟ್‌ಗಳನ್ನು ದುರಸ್ತಿ ಮಾಡಿಸಲಾಗಿದೆ. ಲಭ್ಯ ಸಿಬ್ಬಂದಿ ಬಳಸಿ ಕಳೆ ತೆರವು ಕಾರ್ಯಾಚರಣೆ ನಡೆಸಿದ್ದೇವೆ. ಬೋಟ್‌ಗಳು ಹೋಗದ ಜಾಗದಲ್ಲಿ ಸಮಸ್ಯೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT