ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕನ್ನಡಕ್ಕೆ ಸಾಹಿತ್ಯಕ್ಕೆ ಜನಪದ ಮೂಲ ಪ್ರೇರಣೆ’

ಕೊಡಗಿನ ಸಾಹಿತ್ಯ ಬೆಳವಣಿಗೆ ಕುರಿತ ದತ್ತಿನಿಧಿ ಉಪನ್ಯಾಸ
Published 11 ಆಗಸ್ಟ್ 2024, 7:36 IST
Last Updated 11 ಆಗಸ್ಟ್ 2024, 7:36 IST
ಅಕ್ಷರ ಗಾತ್ರ

ಕುಶಾಲನಗರ: ಕನ್ನಡ ಸಾಹಿತ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಸಮೃದ್ಧವಾದ ಸಾಹಿತ್ಯ ಬೆಳವಣಿಗೆಗೆ ಅನೇಕರ ಕೊಡುಗೆ ಅಪಾರ’ ಎಂದು ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಕನ್ನಡ ಶಿಕ್ಷಕ ಮೆ.ನಾ.ವೆಂಕಟ್ ನಾಯಕ್ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಭಾರತಿ ಕಾಲೇಜಿನಲ್ಲಿ ಬೆಂಗಳೂರಿನ ಈಚೆಗೆ ಹಮ್ಮಿಕೊಂಡಿದ್ದ ಎಂ.ಜಿ.ನಾಗರಾಜ್ ಮತ್ತು ಸುಲೋಚನಾ ದಂಪತಿ ಸ್ಥಾಪಿಸಿರುವ ಕೊಡಗಿನ ಸಾಹಿತ್ಯ ಬೆಳವಣಿಗೆ ವಿಷಯದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ‌ಅವರು ಮಾತನಾಡಿದರು.

ಕವಿಗಳು, ನಾಟಕಕಾರರು, ಲೇಖಕರು, ಕಾದಂಬರಿಕಾರರು, ವಿಮರ್ಶಕರು, ಇತಿಹಾಸ ತಜ್ಞರು ಸೇರಿದಂತೆ ಅನೇಕರು ನೀಡಿದ ಕೊಡುಗೆಯಿಂದ ಕನ್ನಡ ಸಾಹಿತ್ಯ ಉತ್ತುಂಗಕ್ಕೆ ಬೆಳೆದಿದೆ ಎಂದರು.

ಕನ್ನಡ ಸಾಹಿತ್ಯಕ್ಕೆ ಜನಪದ ಸಾಹಿತ್ಯವೇ ಮೂಲ ಪ್ರೇರಣೆ. ಕನ್ನಡದ ಮೊದಲ ಕವಿ ಪಂಪನಿಂದ ಸಾವಿರಾರು ಕವಿಗಳು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಚಂಪೂ ಕವಿಗಳಾದ ಪಂಪ, ಪೊನ್ನ, ರನ್ನ, ಷಡಕ್ಷರಿ, ದೇವ ನಾಗಚಂದ್ರ, ನಾಗವರ್ಮ, ಕುಮಾರವ್ಯಾಸ ಇಂತಹ ಕವಿ ಪುಂಗವರಿಂದ ಕನ್ನಡವು ಬಹಳ ಮಹತ್ವ ಪಡೆದುಕೊಂಡಿತ್ತು. ವಚನಕಾರರಾದ ಬಸವಣ್ಣ, ಅಲ್ಲಮಪ್ರಭು, ದೇವರ ದಾಸಿಮಯ್ಯ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಆಯ್ದಕ್ಕಿ ಮಾರಯ್ಯ ಹೀಗೆ ನೂರಾರು ವಚನಕಾರರಿಂದ ಕನ್ನಡ ಭಾಷೆಯ ಕನ್ನಡದ ಕಾವ್ಯ ಪಸರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.

ದಾಸ ಶ್ರೇಷ್ಠರು ಎನಿಸಿದ ಪುರಂದರದಾಸ, ಕನಕದಾಸರು, ಜಗನ್ನಾಥದಾಸ, ಶ್ರೀವಿಜಯರು ಇವರಿಂದ ಕನ್ನಡ ಸಾಹಿತ್ಯ ಸಮೃದ್ಧವಾದ ಸಾಹಿತ್ಯವಾಗಿ ಹೊರಹೊಮ್ಮಿದೆ. ನವೋದಯ ಕವಿಗಳಾದ ಬಿ.ಎಂ.ಶ್ರೀಕಂಠಯ್ಯ, ತೀ.ನಂ.ಶ್ರೀಕಂಠಯ್ಯ, ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಪ್ರಗತಿಶೀಲ ಸಾಹಿತಿಗಳಾದ ಬಸವರಾಜ ಕಟ್ಟಿಮನಿ, ಅ.ನ.ಕೃಷ್ಣರಾಯರು, ನಿರಂಜನ ಇವರ ಸಾಹಿತ್ಯ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಹೆಚ್ಚು ಮಹತ್ವ ನೀಡಿದೆ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಯುವ ಜನರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಕಸಾಪ ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಭಾರತಿ ಕಾಲೇಜಿನ ಪ್ರಾಂಶುಪಾಲ ನಾಗೇಂದ್ರ ಸ್ವಾಮಿ, ‘ಕನ್ನಡ ಸಾಹಿತ್ಯ ಪರಿಷತ್ತು ಮೊದಲಿನಿಂದಲೂ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಸಾಹಿತ್ಯದ ಗೀಳು ಹಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮ ಮಾಡಲು ನಾವು ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು.

ಕಸಾಪ ಕೋಶಾಧಿಕಾರಿ ಕೆ.ವಿ.ಉಮೇಶ್, ಸೇರಾ ಮೊನೆಸ್ಟರಿಯ ಲೊಬಸಾಂಗ್, ನಿರ್ದೇಶಕರಾದ ಬಿ.ಬಿ.ಹೇಮಲತಾ, ಡಿ.ಆರ್.ಸೋಮಶೇಖರ್, ಕನ್ನಡ ಭಾರತಿ ಕಾಲೇಜಿನ ಉಪನ್ಯಾಸಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT