ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್‌

ಮುಡಾ ಜಮೀನು ಒತ್ತುವರಿ ಮಾಡಿ ಆಶ್ರಯ ಬಡಾವಣೆ ನಿರ್ಮಾಣ
Published : 11 ಸೆಪ್ಟೆಂಬರ್ 2024, 0:46 IST
Last Updated : 11 ಸೆಪ್ಟೆಂಬರ್ 2024, 0:46 IST
ಫಾಲೋ ಮಾಡಿ
Comments

ಮೈಸೂರು: ತಾಲ್ಲೂಕಿನ ಹಿನಕಲ್‌ ಗ್ರಾಮದ ಸರ್ವೆ ಸಂಖ್ಯೆ 89ರಲ್ಲಿ ಮುಡಾಕ್ಕೆ ಸೇರಿದ 7 ಎಕರೆ 18 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಿ 350ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿದ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಹಾಲಿ ಹಾಗೂ ನಿವೃತ್ತ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಮುಡಾದ ಹಿಂದಿನ ಕಾರ್ಯದರ್ಶಿಗಳಾದ ಸವಿತಾ, ಕುಸುಮಾಕುಮಾರಿ, ವೆಂಕಟರಾಜು, ಶೇಖರ್, ವಿಶೇಷ ಭೂಸ್ವಾಧೀನ ಅಧಿಕಾರಿಗಳಾಗಿದ್ದ ಚಂದ್ರಮ್ಮ, ಹರ್ಷವರ್ಧನ್, ವಿಷ್ಣುವರ್ಧನ್ ಹಾಗೂ ವಿವಿಧ ದರ್ಜೆಯ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಸೆ. 9ರಂದು ನೋಟಿಸ್ ನೀಡಿದ್ದಾರೆ. ಆ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಕೈಗೊಂಡ ಕ್ರಮಗಳ ಮಾಹಿತಿ ಸಮೇತ, ನೋಟಿಸ್‌ ನೀಡಿದ ದಿನಾಂಕದಿಂದ ಮೂರು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಏನಿದು ಪ್ರಕರಣ?:

ವಿಜಯನಗರ 2ನೇ ಹಂತ ಬಡಾವಣೆ ನಿರ್ಮಾಣಕ್ಕಾಗಿ ಮುಡಾ ಈ ಜಮೀನನ್ನು ಭೂಸ್ವಾಧೀನಪಡಿಸಿಕೊಂಡಿತ್ತು. ಆದರೆ,  1990–1992ರ ಅವಧಿಯಲ್ಲಿ ಅಂದಿನ ಹಿನಕಲ್ ಮಂಡಲ ಪಂಚಾಯಿತಿಯ ಆಡಳಿತ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಜೊತೆಗೂಡಿ ಅದೇ ಜಮೀನಿನಲ್ಲಿ ಬಡಜನರಿಗೆ ಆಶ್ರಯ ನಿವೇಶನ ರಚಿಸಿ ಹಂಚುವುದಾಗಿ ಹೇಳಿ 25x25 ಚ.ಅಡಿ ಅಳತೆಯ 350ಕ್ಕೂ ಹೆಚ್ಚು ನಿವೇಶನಗಳನ್ನು ನಿರ್ಮಿಸಿ ಹಂಚಿದ್ದರು. ಇದಕ್ಕೆ ಮುಡಾ ಅನುಮತಿ ಪಡೆದಿರಲಿಲ್ಲ.

‘ಮುಡಾದ ಅನುಮತಿ ಇಲ್ಲದೆಯೇ ಜಮೀನು ಅತಿಕ್ರಮಿಸಿ ಬಡಾವಣೆ ನಿರ್ಮಿಸಿ ಅಕ್ರಮ ಎಸಗಲಾಗಿದೆ. ಈ ನಿವೇಶನಗಳನ್ನು ಬಡವರಿಗೆ ನೀಡದೇ ಸರ್ಕಾರಿ ಸಿಬ್ಬಂದಿಯೂ ಸೇರಿದಂತೆ ಉಳ್ಳವರಿಗೆ ಮಾರಿಕೊಂಡು ಭ್ರಷ್ಟಾಚಾರ ಎಸಗಲಾಗಿದೆ. ಇದನ್ನು ಮುಡಾ ಅಧಿಕಾರಿಗಳ ಗಮನಕ್ಕೆ ತಂದರೂ ತೆರವಿಗೆ ಕ್ರಮ ಕೈಗೊಂಡಿಲ್ಲ. ಅವರೂ ಭ್ರಷ್ಟಾಚಾರಕ್ಕೆ ಕೈ ಜೋಡಿಸಿರುವ ಸಾಧ್ಯತೆ ಇದೆ’ ಎಂದು ಆರೋಪಿಸಿ ಮಾಹಿತಿಹಕ್ಕು ಕಾರ್ಯಕರ್ತ ಗಂಗರಾಜು 2017ರಲ್ಲಿ ಎಸಿಬಿಗೆ (ಭ್ರಷ್ಟಾಚಾರ ನಿಗ್ರಹ ದಳ) ದೂರು ನೀಡಿದ್ದರು. 2022ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಪ್ರಕರಣವು ಲೋಕಾಯುಕ್ತಕ್ಕೆ ವರ್ಗಾವಣೆ ಆಗಿದೆ.

‘ಅಧಿಕಾರಿಗಳಿಗೆ ನೋಟಿಸ್ ನೀಡಿರುವ ಜೊತೆಗೆ ಮಂಡಲ ಪಂಚಾಯಿತಿಯಲ್ಲಿ ಅಂದು ಸದಸ್ಯರಾಗಿದ್ದವರ ಮೇಲೂ ಕಾನೂನು ಕ್ರಮ ಜರುಗಿಸಬೇಕು. ಹಿನಕಲ್‌ ಸುತ್ತಮುತ್ತ ₹250 ಕೋಟಿ ಮೌಲ್ಯದ ಸರ್ಕಾರಿ ಆಸ್ತಿ ಕಬಳಿಕೆ ಆಗಿದ್ದು, ಅತಿಕ್ರಮವನ್ನು ತೆರವುಗೊಳಿಸಬೇಕು’ ಎಂದು ದೂರುದಾರ ಗಂಗರಾಜು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT