ಮೈಸೂರು: ‘ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಬಂದೆರಗಿರುವ ಅಪಾಯವನ್ನು ತಪ್ಪಿಸಲು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ (ದಂಸಸ) ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ತಿಳಿಸಿದರು.
‘ಡಾ.ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನ’ದ ಅಂಗವಾಗಿ ದಸಂಸ ಜಿಲ್ಲಾ ಶಾಖೆಯಿಂದ ಇಲ್ಲಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಬುಧವಾರ ಆಯೋಜಿಸಿದ್ದ ‘ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಕೋಮುವಾದಿ ರಾಜಕಾರಣ- ಸಂಸದೀಯ ಪ್ರಜಾಪ್ರಭುತ್ವದ ಸವಾಲುಗಳು’ ವಿಷಯ ಕುರಿತ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕೊತ್ತೊಗೆಯಬೇಕು ಎಂಬ ಐತಿಹಾಸಿಕ ತೀರ್ಮಾನವನ್ನು ಹೋದ ವರ್ಷ ಪ್ರಗತಿಪರ ಸಂಘಟನೆಗಳವರೆಲ್ಲ ಕೈಗೊಂಡಿದ್ದೆವು. ಅದರಲ್ಲಿ ಯಶಸ್ವಿಯಾಗಿದ್ದೇವೆ. ಇದು ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಬೇಕು. ಸಂಸದೀಯ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಇದು ಅತ್ಯಗತ್ಯವಾಗಿದೆ’ ಎಂದು ಹೇಳಿದರು.
‘ಆರ್‌ಎಸ್‌ಎಸ್, ವಿಎಚ್‌ಪಿ ಮೊದಲಾದ ಮತೀಯ ಸಂಘಟನೆಗಳು ನರೇಂದ್ರ ಮೋದಿ ಎಂಬ ಬ್ರಾಂತಿಯನ್ನು ಬಿತ್ತಿವೆ. ಜಾತಿ ಧರ್ಮದ ಹೆಸರಿನಲ್ಲಿ ಅಸೂಯೆ, ದ್ವೇಷ ಬಿತ್ತಿ ಅವರನ್ನು ಎರಡು ಬಾರಿ ಪ್ರಧಾನಿ ಮಾಡಿವೆ. ಹ್ಯಾಟ್ರಿಕ್ ಮಾಡುತ್ತೇವೆ ಎಂದೂ ಹೇಳಿಕೊಳ್ಳುತ್ತಿವೆ. ಆದ್ದರಿಂದ ಬಿಜೆಪಿ ಕಟ್ಟಿ ಹಾಕುವ ನಿರ್ಣಯವನ್ನು ಶೋಷಿತರು, ಹಿಂದುಳಿದವರು, ಕಾರ್ಮಿಕರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಮಾಡಬೇಕು’ ಎಂದು ಕೋರಿದರು.
ಸಮಾವೇಶದಲ್ಲಿ ಪಾಲ್ಗೊಂಡಿದ್ದವರು
ಆತಂಕವಿದೆ: ‘ಮೋದಿ ಮತ್ತೆ ಪ್ರಧಾನಿಯಾದರೆ, ಅಧ್ಯಕ್ಷೀಯ ಮಾದರಿಯ ಪ್ರಜಾಪ್ರಭುತ್ವ ತರುವ ಆತಂಕವಿದೆ. ದಲಿತರಿಗೆ ಸೌಲಭ್ಯಗಳು ಹಾಗೂ ಮೀಸಲಾತಿ ಮುಂದುವರಿಯುವುದಿಲ್ಲ ಎಂಬ ಅನುಮಾನವೂ ಇದೆ’ ಎಂದರು.
‘ಸಮಾಜವನ್ನು ಹೀಯಾಳಿಸುವ ಪ್ರತಾಪ ಸಿಂಹನನ್ನು ಸೋಲಿಸುವ ಶಪಥವನ್ನು ಮೈಸೂರು–ಕೊಡಗಿನ ದಲಿತರೆಲ್ಲರೂ ಮಾಡಬೇಕು. ಬಿಜೆಪಿಗೆ ಹಾಗೂ ಜೆಡಿಎಸ್‌ಗೆ ಮತ ಹಾಕುವವರೆಲ್ಲರೂ ವಾಪಸ್ ಬನ್ನಿ. ಈ ಚುನಾವಣೆ ನಮ್ಮ ಅಳಿವು ಉಳಿವಿನ ಪ್ರಶ್ನೆ ಹಾಗೂ ನಿರ್ಣಾಯಕವಾದುದು ಎಂಬುದನ್ನು ಮರೆಯಬೇಡಿ’ ಎಂದು ಕೋರಿದರು.
‘ಬಿಜೆಪಿ ಸರ್ಕಾರ ಮಾಡಿದ್ದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರ ಆರು ತಿಂಗಳಾದರೂ ಈಡೇರಿಸಿಲ್ಲ. ಇದಕ್ಕಿರುವ ತಕರಾರೇನು? ಎಂದು ಆಕ್ರೋಶದಿಂದ ಕೇಳಿದರು. ‘ಭರವಸೆ ಈಡೇರಿಸದಿದ್ದರೆ ನಿಮ್ಮ ಪರವಾಗಿ ಬೆಂಬಲ ಕೇಳುವುದು ಹೇಗೆ? ನಮ್ಮ ಹಿತಾಸಕ್ತಿಗೆ ಧಕ್ಕೆಯಾದರೆ ಸಹಿಸುವುದಿಲ್ಲ’ ಎಂಬ ಎಚ್ಚರಿಕೆಯನ್ನೂ ನೀಡಿದರು.
‘ಪ್ರತಿ ಜಿಲ್ಲೆಯಲ್ಲಿ ವರ್ಷಕ್ಕೆ ಕನಿಷ್ಠ 500 ಮಂದಿ ಪರಿಶಿಷ್ಟರನ್ನು ಉದ್ಯಮಿಗಳನ್ನಾಗಿ ರೂಪಿಸುವ ಸಮರ್ಪಕ ಯೋಜನೆ ಜಾರಿಗೊಳಿಸಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.
ಸಂವಿಧಾನ ಅಪ್ರಸ್ತುತಗೊಳಿಸಲಾಗಿದೆ: ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಮಾತನಾಡಿ, ‘ಅಂಬೇಡ್ಕರ್ ಹಿಂದೂ ಧರ್ಮದ ವಿರೋಧಿ ಆಗಿರಲಿಲ್ಲ ಹಾಗೂ ಅದನ್ನು ಸುಧಾರಣೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದರು. ವರ್ಣಾಶ್ರಮ, ಜಾತಿ ವ್ಯವಸ್ಥೆ, ಅಸಮಾನತೆ ಹಾಗೂ ಅಸ್ಪೃಶ್ಯತೆಯನ್ನಷ್ಟೆ ವಿರೋಧಿಸಿದ್ದರು. ಮನುಪ್ರಣೀತ ಹಿಂದೂ ಧರ್ಮವನ್ನು ವಿರೋಧಿಸಿದ್ದರು. ಅಲಿಖಿತ ಸಂವಿಧಾನವಾದ ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು. ಆದರೆ, ಸುಧಾರಣೆಗೆ ಶ್ರಮಿಸಿದವರನ್ನೆಲ್ಲಾ ಹಿಂದೂ ಧರ್ಮದ ವಿರೋಧಿ ಎಂದು ಕರೆಯಲಾಗಿದೆ’ ಎಂದು ಹೇಳಿದರು.
‘ಈಗಿರುವುದು ಅಂಬೇಡ್ಕರ್ ಅವರು ಬಯಸಿದ ನಿಜವಾದ ಆಶಯದ ಸಂವಿಧಾನವಲ್ಲ. ಬಹಳಷ್ಟು ಹೊಂದಾಣಿಕೆ ಮಾಡಿಕೊಂಡಿದ್ದರು. ಇಲ್ಲದಿದ್ದರೆ ಈಗ ಇರುವ ಸಂವಿಧಾನವನ್ನೂ ನೀಡಲು ಅವರಿಗೆ ಆಗುತ್ತಿರಲಿಲ್ಲ’ ಎಂದು ತಿಳಿಸಿದರು.
‘ಸಂವಿಧಾನವನ್ನು ಬಲಹೀನ ಮಾಡಿ, ಅಪ್ರಸ್ತುತಗೊಳಿಸಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನೆಲ್ಲ ದುರ್ಬಲ ಮಾಡಿದ್ದಾರೆ. ಮೀಸಲಾತಿಯ ಮೇಲೆ ಬಹಳ ದೊಡ್ಡ ದಾಳಿ ನಡೆಯುತ್ತಿದೆ. ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ಮೀಸಲಾತಿ ಇರುವುದಿಲ್ಲ. ಇದೆಲ್ಲವನ್ನೂ ಅರಿಯಬೇಕು’ ಎಂದು ಹೇಳಿದರು.
ನ್ಯಾಯಾಧೀಶರ ನೇಮಕದಲ್ಲೂ ಮೀಸಲಾತಿ ಬೇಕು: ‘ನ್ಯಾಯಾಧೀಶರ ನೇಮಕದಲ್ಲೂ ಮೀಸಲಾತಿ ಬೇಕು. ನೋವುಂಡವರು ಮಾತ್ರ ನೋವು ಅರ್ಥ ಮಾಡಿಕೊಳ್ಳಬಲ್ಲರು’ ಎಂದು ಪ್ರತಿಪಾದಿಸಿದರು.
‘ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು ಕೋಮುವಾದಿಗಳನ್ನು ವಿರೋಧಿಸಬೇಕು. ಹಿಂದೂ ರಾಷ್ಟ್ರದಲ್ಲಿ ಸಂವಿಧಾನಕ್ಕೆ ಜಾಗವಿಲ್ಲ’ ಎಂದರು.
ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಸಂಚಾಲಕ ಎನ್. ವೆಂಕಟೇಶ್, ಜಿಲ್ಲಾ ಸಂಚಾಲಕರಾದ ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ ಮೈಸೂರು ವಿವಿ ಮಾನಸಗಂಗೋತ್ರಿಯ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಉಪನ್ಯಾಸಕಿ ಪದ್ಮಶ್ರೀ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.