ಮೈಸೂರು: ಮಾನವ ಮಂಟಪ ಆಶ್ರಯದಲ್ಲಿ ನಗರದ ಗೋಕುಲಂನ ಶ್ಯಾಗಲೆ ಶಿವರುದ್ರಮ್ಮ ಟ್ರಸ್ಟ್‌ನಲ್ಲಿ ಆರ್.ರಂಜಿತಾ ಹಾಗೂ ಆರ್.ಎನ್. ಪ್ರದೀಪ್ ಅವರ ಅಂತರ್ಜಾತಿ ವಿವಾಹ ಭಾನುವಾರ ಸರಳವಾಗಿ ನಡೆಯಿತು.
ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಹೋಬಳಿಯ ರಾಗಿಮುದ್ದನಹಳ್ಳಿಯ ಒಕ್ಕಲಿಗ ಜನಾಂಗದ ಪ್ರದೀಪ್ ಹಾಗೂ ಮೈಸೂರು ತಾಲ್ಲೂಕಿನ ಕಡಕೊಳದ ಕುರುಬ ಜನಾಂಗದ ರಂಜಿತಾ ಅವರು ಅಜೀಂ ಪ್ರೇಮ್‌ಜಿ ಫೌಂಡೇಶನ್ ಯೋಜನೆಯೊಂದರ ಸಂಪನ್ಮೂಲ ವ್ಯಕ್ತಿಗಳಾಗಿ ಕೊಳ್ಳೇಗಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾನವ ಮಂಟಪ ವೇದಿಕೆಯ ಕಾಳಚನ್ನೇಗೌಡ ಅವರು ವಿವಾಹ ಪ್ರಮಾಣ ವಚನ ಬೋಧಿಸಿದರು. ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹ ಸಂಹಿತೆಯನ್ನು ಈ. ಧನಂಜಯ್ ಎಲಿಯೂರು ಓದಿದರು.
ಅಜೀಂ ಪ್ರೇಮ್‌ಜಿ ಫೌಂಡೇಶನ್ ಪ್ರಾಧ್ಯಾಪಕ ಉಮಾಶಂಕರ್ ಪೆರಿಯೂರು ಮಾತನಾಡಿ, ‘ಪ್ರೀತಿಸುವುದರ ಜೊತೆಗೆ ಮದುವೆ ಆಗುವವರೆಗೆ ಸಂಯಮ, ತಿಳಿವಳಿಕೆ, ಪರಸ್ಪರ ವಿಶ್ವಾಸ ಬೇಕು. ಜೀವನಪರ್ಯಂತ ಒಟ್ಟಿಗೆ ಬದುಕುತ್ತೇವೆ ಎಂಬ ನಂಬಿಕೆ ಇರಬೇಕು’ ಎಂದು ಕಿವಿಮಾತು ಹೇಳಿದರು.
ವಿಶ್ರಾಂತ ಪ್ರಾಧ್ಯಾಪಕಿ ವನಜಾ ಕಾಳಚನ್ನೇಗೌಡ ಮಾತನಾಡಿ, ‘ಪ್ರೀತಿಸಿದವರನ್ನೆಲ್ಲ ಮದುವೆಯಾಗಲು ಆಗುವುದಿಲ್ಲ. ಮದುವೆಯಾದ ಮೇಲೆ ಪ್ರೀತಿ ಉಳಿಯಬೇಕು, ಗಟ್ಟಿಯಾಗಬೇಕು’ ಎಂದರು.
ಲೇಖಕ ಕಾಳೇಗೌಡ ನಾಗವಾರ ಮಾತನಾಡಿ, ‘ಬಡವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಆರೋಗ್ಯದ ಕಡೆ ಗಮನಹರಿಸಬೇಕು. ಶೌಚಾಲಯಗಳನ್ನು ಕಟ್ಟಿಸಿಕೊಳ್ಳಬೇಕು. ಆದರೆ, ಸಾಲ ಮಾಡಿ ಮದುವೆ, ತಿಥಿ ಮಾಡುತ್ತಾರೆ. ಇದಕ್ಕಾಗಿ ಸರಳ ಮದುವೆಗಳು ಹೆಚ್ಚಬೇಕು’ ಎಂದು ಸಲಹೆ ನೀಡಿದರು.
ಪ್ರದೀಪ್ ಮಾತನಾಡಿ, ‘ಬೆಂಗಳೂರಿನ ಅಬ್ದುಲ್ ವಾಜೀರ್ ಅವರ ಔಷಧ ಅಂಗಡಿಯಲ್ಲಿ ಕೆಲಸ ಮಾಡುತ್ತ ಎಂ.ಎ. ಓದಿದೆ. ನಂತರ ಕಲಬುರಗಿಯ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪದವಿ ಪಡೆದೆ. ಈಗ ನಮ್ಮ ಸಂಬಳದಲ್ಲಿ ಶೇ 10ರಷ್ಟನ್ನು ಬಡಮಕ್ಕಳ ಓದಿಗೆ ತೆಗೆದಿಡುವೆ. ಪತ್ನಿ ರಂಜಿತಾ ಕೂಡ ಸರ್ಕಾರಿ ಶಾಲೆಗಳಿಗೆ ನೆರವಾಗುತ್ತಾಳೆ’ ಎಂದರು.
ಪ್ರದೀಪ್ ಅವರ ‘ಲಿಯೋ ಟಾಲ್‌ಸ್ಟಾಯ್ ಸಾಹಿತ್ಯದ ನೆಲೆಗಳು’ ಕೃತಿ ಬಿಡುಗಡೆ ಮಾಡಲಾಯಿತು. ಉಗ್ರನರಸಿಂಹೇಗೌಡ, ಲತಾ ಮೈಸೂರು, ಹರೀಶಕುಮಾರ್, ಸತೀಶ್ ಜವರೇಗೌಡ ಹಾಜರಿದ್ದರು. ಪ್ರತಾಪ್, ಅಶ್ವಿನಿ ಹಾಗೂ ಅವಿನಾಶ್ ಮದುವೆ ಆಯೋಜಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.