ಮೈಸೂರು: ಪೋಷಕರಿಲ್ಲದೇ 12 ವರ್ಷಗಳಿಂದ ‘ಒಡನಾಡಿ’ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದ ‘ಎರವ’ ಬುಡಕಟ್ಟು ಸಮುದಾಯದ ಗಂಗೆ ಹಾಗೂ ಪಿರಿಯಾಪಟ್ಟಣ ತಾಲ್ಲೂಕಿನ ಕಿರನಲ್ಲಿ ಗ್ರಾಮದ ಶೆಟ್ಟಿ ಸಮುದಾಯಕ್ಕೆ ಸೇರಿದ ರೈತ ಶಶಿಕುಮಾರ್ ಸರಳ ವಿವಾಹ ಶುಕ್ರವಾರ ನಡೆಯಿತು.
ಹೂಟಗಳ್ಳಿಯ ಒಡನಾಡಿ ಸಂಸ್ಥೆಯ ಆವರಣದಲ್ಲಿರುವ ಮಡಿಲು ಪುನರ್ವಸತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ವಧು ಗಂಗೆಯ ಪೋಷಕರ ಸ್ಥಾನವನ್ನು ಪ್ರೊ.ಶಶಿಕಲಾ ತುಂಬಿದ್ದಲ್ಲದೆ, ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ಪ್ರಮಾಣ ವಚನವನ್ನು ಬೋಧಿಸಿದರು. ಶಶಿಕುಮಾರ್ ತಾಯಿ ಶಾರದಾ ಹಾಗೂ ಅವರ ಸಂಬಂಧಿಕರು ಸಾಕ್ಷಿಯಾದರು.
ಒಡನಾಡಿಯಲ್ಲಿ ಆಶ್ರಯ ಪಡೆದ ಹೆಣ್ಣು ಮಕ್ಕಳು ಮಾದಾರ ಚೆನ್ನಯ್ಯ ಅವರ ‘ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ’ ವಚನ ಹಾಡಿ ಸಂಗಾತಿಯ ಬಾಳು ಚೆನ್ನಾಗಿರಲೆಂದು ಹರಸಿದರು. ಈ ಸಂತಸ ಹಾಗೂ ಭಾವುಕ ಗಳಿಗೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಾಕ್ಷಿಯಾದರು. ದಂಪತಿಗೆ ‘ಮೈಸೂರು ಪಾಕ್’ ತಿನ್ನಿಸಿ ಆಶೀರ್ವದಿಸಿದರು.
‘ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಬುದ್ಧ–ಬಸವ– ಅಂಬೇಡ್ಕರ್‌ರ ಆಶಯ, ಸಂವಿಧಾನದ ಘನತೆಯನ್ನು ಎತ್ತಿಹಿಡಿಯುವ ಜಾತ್ಯತೀತ ಮದುವೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆ ಎನಿಸುತ್ತದೆ. 12ನೇ ಶತಮಾನದಲ್ಲಿ ಬಸವಾದಿ ವಚನಕಾರರು ನಡೆಸಿದ ಹರಳಯ್ಯ– ಮಧುವರಸರ ಮಕ್ಕಳಿಗೆ ನಡೆಸಿದ ಕ್ರಾಂತಿಕಾರಕ ಮದುವೆಯನ್ನು ಗಂಗೆ– ಶಶಿ ಅವರ ಮದುವೆ ನೆನಪಿಸುತ್ತಿದೆ’ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
‘ದೇಶದಲ್ಲಿ ಅಂತರ್ಜಾತಿ, ಅಂತರ್‌ಧರ್ಮೀಯ ವಿವಾಹಗಳಾಗುತ್ತಿದ್ದರೂ ಮರ್ಯಾದೆಗೇಡು ಹತ್ಯೆಗಳು ನಿಂತಿಲ್ಲ. ಸಂವಿಧಾನದ ಆಶಯದ ಕಡೆ ಹೆಜ್ಜೆಯಿಡುವ ಇಂಥ 110 ಮದುವೆಗಳನ್ನು ಒಡನಾಡಿ ನಡೆಸಿರುವುದು ಶ್ಲಾಘನೀಯ. ಸಂಪ್ರದಾಯ, ಶಾಸ್ತ್ರ, ಕಂದಾಚಾರ, ಮೂಢನಂಬಿಕೆಗಳಿಂದ ತುಂಬಿರುವ ಸಮಾಜಕ್ಕೆ ಕಣ್ಣು ತೆರೆಸುವ ಕಾರ್ಯವಾಗಿದೆ’ ಎಂದು ಶ್ಲಾಘಿಸಿದರು.
‘ಧರ್ಮ– ಜಾತಿಗಳನ್ನು ಮೀರಿ ಕುವೆಂಪು ಅವರ ವಿಶ್ವಮಾನವ ತತ್ವ ಅನುಷ್ಠಾನಗೊಳ್ಳಬೇಕಿದೆ. ಶೋಷಿತ ಸಮುದಾಯಗಳು, ಮಹಿಳೆಯರು ಹಾಗೂ ಸಮಾಜಕ್ಕೆ ವೈಚಾರಿಕ ಆಲೋಚನೆಗಳು ಬರಬೇಕಿದೆ’ ಎಂದರು.
ಪ್ರೊ.ಲತಾ ಕೆ.ಬಿದ್ದಪ್ಪ, ಪ್ರೊ.ಪಿ.ಎನ್.ಶ್ರೀದೇವಿ, ಸಂಸ್ಥೆಯ ಸಂಸ್ಥಾಪಕ ಸಂಚಾಲಕ ಸ್ಟ್ಯಾನ್ಲಿ, ನಿರ್ದೇಶಕ ಎಂ.ಎಲ್.ಪರಶುರಾಮ್, ಪತ್ರಕರ್ತ ಕಮಲ್ ಗೋಪಿನಾಥ್ ಹಾಜರಿದ್ದರು.
ಅಂತರ್ಜಾತಿ ಮದುವೆಗಳಿಗೆ ಸರ್ಕಾರದಿಂದ ₹3 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ. ಸ್ವಾವಲಂಬಿ ಜೀವನಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಲು ಹತ್ತಾರು ಯೋಜನೆಗಳಿವೆಡಾ.ಎಚ್.ಸಿ.ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆ ಸಚಿವ
‘ಎಲ್ಲರ ಕೈ ತುತ್ತಲಿ ಬೆಳೆದ ಮಗು’
‘ರೈತರು ಶ್ರಮಿಕರು ಹಾಗೂ ಕಾರ್ಮಿಕರಿಗೆ ವಧು ಸಿಗುತ್ತಿಲ್ಲ. ಎಷ್ಟೋ ಹೆಣ್ಣು ಮಕ್ಕಳಿಗೆ ಮದುವೆಯಾಗುವ ಸಂದರ್ಭಗಳು ತಪ್ಪಿಹೋಗುತ್ತಿವೆ. ಮುದ್ದಿನ ಮಗಳು ಗಂಗೆಯನ್ನು ರೈತ ಶಶಿ ಮದುವೆಯಾಗುತ್ತಿದ್ದಾರೆ. 12 ವರ್ಷದಿಂದ ಎಲ್ಲರ ಕೈ ತುತ್ತಲಿ ಬೆಳೆದ ಮಗುವಿದು. ಇತರ ಮಕ್ಕಳೊಂದಿಗೆ ಬೆಳೆಯುತ್ತಾ ಸಂಸ್ಥೆಯ ಮಕ್ಕಳಿಗೆ ಅನ್ನವಿಕ್ಕಿದ ಗಂಗೆ ನಮ್ಮ ಸಾಕು ಮಗಳು’ ಎಂದು ಸ್ಲ್ಯಾನ್ಲಿ ಭಾವುಕರಾದರು. ‘ಪೋಷಕರಿಂದ ವಂಚಿತರಾಗಿದ್ದ ಗಂಗೆಯ ಜೊತೆ 12 ಹೆಣ್ಣು ಮಕ್ಕಳು ಸಿಕ್ಕಿದ್ದರು. ಅವರೆಲ್ಲರಿಗೂ ಬೇಕರಿ ಉತ್ಪನ್ನಗಳನ್ನು ತಯಾರಿಸುವ ಕೌಶಲವಿದೆ. ಯುವ ರೈತ ಶಶಿ ನಮಗೆ ಅಳಿಯನಾಗಿ ಬಂದಿರುವುದು ಸಂತಸ ತಂದಿದೆ. ಅವರ ತಾಯಿ ಅಂತರ್ಜಾತಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದು ಸಮಾಜಕ್ಕೆ ಮಾದರಿ ನಿಲುವು. ಅವರು ತಂದೆಯ ಭಾರವನ್ನು ಇಳಿಸಿದ್ದಾರೆ’ ಎಂದು ಪರಶುರಾಮ್ ಕೈಮುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.