ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಅಗ್ಗ!

ಪ್ರತಿ ತರಗತಿಯಲ್ಲಿ 14 ವಿದ್ಯಾರ್ಥಿಗಳು, ಗುಣಮಟ್ಟದ ಬೋಧನೆ ಲಭ್ಯ
Last Updated 25 ಫೆಬ್ರುವರಿ 2022, 20:45 IST
ಅಕ್ಷರ ಗಾತ್ರ

ಮೈಸೂರು: ಭಾರತಕ್ಕಿಂತ ತೀರಾ ಅಗ್ಗದ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ದೊರೆಯುತ್ತದೆ ಎಂಬ ಕಾರಣಕ್ಕೆ ದೇಶದ ಬಹಳಷ್ಟು ವಿದ್ಯಾರ್ಥಿಗಳು ಉಕ್ರೇನ್‌ ದೇಶಕ್ಕೆ ಹೋಗುತ್ತಾರೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಆ ದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ.

ಅಲ್ಲಿನ ವೈದ್ಯಕೀಯ ಶಿಕ್ಷಣದ ಶುಲ್ಕವು, ಇಲ್ಲಿನ ಸಾಮಾನ್ಯ ದರ್ಜೆಯ ವೈದ್ಯಕೀಯ ಕಾಲೇಜುಗಳ ಶುಲ್ಕಕ್ಕಿಂತಲೂ ಕಡಿಮೆ. ಇಲ್ಲಿನ ಪ್ರತಿಷ್ಠಿತ ಕಾಲೇಜು

ಗಳ ಒಂದು ವರ್ಷದ ಶುಲ್ಕ ಹಾಗೂ ವಂತಿಗೆಯಲ್ಲಿ ಇಡೀ ವೈದ್ಯಕೀಯ ಶಿಕ್ಷಣವನ್ನೇ ಅಲ್ಲಿ ಪೂರ್ಣಗೊಳಿಸಬಹುದು!

ಅಲ್ಲಿ ಏಕರೂಪದ ಶುಲ್ಕವಿಲ್ಲ. ಪ್ರತಿ ವಿಶ್ವವಿದ್ಯಾಲಯದಲ್ಲೂ ಭಿನ್ನ. ಹಲವು ವೆಬ್‌ಸೈಟ್‌ಗಳಲ್ಲೂ ಹಲವು ರಿಯಾಯಿತಿಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯಲಾಗುತ್ತಿದೆ. ಉಕ್ರೇನ್‌ನ 15ಕ್ಕೂ ಹೆಚ್ಚು ವೈದ್ಯಕೀಯ ವಿಶ್ವವಿದ್ಯಾಲಯಗಳ ಪೈಕಿ, ಬಹುತೇಕ ಜಾಗತಿಕ ಮನ್ನಣೆ ಗಳಿಸಿವೆ. ಅಲ್ಲಿ ಶಿಕ್ಷಣ ಪಡೆಯುವುದೂ ಪ್ರತಿಷ್ಠೆಯ ವಿಷಯ ಎನಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ, ಉಕ್ರೇನ್‌ನ ಬಿಕೊನೊವಿನಿಯನ್ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಕೆ.ಆರ್‌.ನಗರ ಮೂಲದ ಚಂದನ್, ‘ಭಾರತದಲ್ಲಿ ಖಾಸಗಿ ಕಾಲೇಜುಗಳ ಕೋಟಾದಡಿ ಆಗುವ ವೆಚ್ಚಕ್ಕಿಂತ ಅರ್ಧದಷ್ಟು ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬಹುದು. ಹಾಗಾಗಿ, ನೀಟ್‌ ಪರೀಕ್ಷೆಯಲ್ಲಿ ಸರ್ಕಾರಿ ಕೋಟಾದಡಿ ಅವಕಾಶ ದೊರೆಯದವರು ಹೆಚ್ಚಿನ ಸಂಖ್ಯೆಯಲ್ಲಿ ಉಕ್ರೇನ್‌ನಲ್ಲಿ ಶಿಕ್ಷಣ ಪಡೆಯುತ್ತಾರೆ’ ಎಂದರು.

‘ಒಟ್ಟು ಆರುವರ್ಷದ ವೈದ್ಯಕೀಯ ಶಿಕ್ಷಣ ಕೋರ್ಸಿಗೆ ₹ 30 ಲಕ್ಷ ವೆಚ್ಚವಾಗುತ್ತದೆ. ಭಾರತದಲ್ಲಾದರೆ ₹ 70 ಲಕ್ಷ ಬೇಕಾಗುತ್ತದೆ’ ಎಂದರು.

‘ಶಿಕ್ಷಣ ಅಗ್ಗ ಎಂದಷ್ಟೇ ಅಲ್ಲ, ಉತ್ತಮ ಗುಣಮಟ್ಟದ ಶಿಕ್ಷಣವೂ ದೊರಕುತ್ತದೆ ಎಂಬ ಕಾರಣಕ್ಕೂ ಉಕ್ರೇನ್‌ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ಭಾರತದಲ್ಲಿ ಪ್ರತಿ ತರಗತಿಯಲ್ಲಿ ಸರಾಸರಿ 50 ವಿದ್ಯಾರ್ಥಿಗಳಿದ್ದರೆ, ಅಲ್ಲಿ 14 ಮಂದಿಗಷ್ಟೇ ಪಾಠ ನಡೆಯುವುದರಿಂದ ಪ್ರತಿಯೊಬ್ಬರ ಮೇಲೂ ವೈಯಕ್ತಿಕವಾಗಿ ನಿಗಾ ಇಡಲು ಉಪನ್ಯಾಸಕರಿಗೆ ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಕೀರ್ತನಾ ತಂದೆ, ಹಾಸನದ ನಿವಾಸಿ ಚಿನ್ನಪ್ಪಗೌಡರೂ ಇದೇ ಅಭಿಪ್ರಾಯವನ್ನು ಧ್ವನಿಸಿದರು.

‘ಪ್ರತಿ ವರ್ಷಗರಿಷ್ಠ ₹ 13 ಲಕ್ಷ ವ್ಯಯಿಸಿದರೆ ಅತ್ಯುತ್ತಮ ವೈದ್ಯಕೀಯ ಶಿಕ್ಷಣವನ್ನೇ ಪಡೆಯಬಹುದು. ಮೊದಲ ವರ್ಷ ಉಚಿತ ಹಾಸ್ಟೆಲ್‌ ಸೌಲಭ್ಯವಿದ್ದು, ನಂತರ ಅಪಾರ್ಟ್‌ಮೆಂಟ್‌ನಲ್ಲಿರಬೇಕಾಗುತ್ತದೆ. ಐದಾರು ವಿದ್ಯಾರ್ಥಿಗಳು ಒಂದೇ ಕಡೆ ವಾಸಿಸುವ ಮೂಲಕ ಬಾಡಿಗೆ ಹಣವನ್ನೂ ಉಳಿಸಬಹುದು. ಊಟಕ್ಕೆ ತಿಂಗಳಿಗೆ ಗರಿಷ್ಠ ₹ 5 ಸಾವಿರ ಖರ್ಚಾಗುತ್ತದೆ. ಹಾಗಾಗಿ ಹೆಚ್ಚಿನವರು ಉಕ್ರೇನಿಗೆ ಹೋಗುತ್ತಾರೆ. ನಾನೂ ಮಗಳನ್ನು ಕಳಿಸಿರುವೆ’ ಎಂದು ಚಾಮರಾಜನಗರ ಜಿಲ್ಲೆಯ ಹನೂರಿನ ಪೋಷಕರೊಬ್ಬರು ತಿಳಿಸಿದರು.

‘ಭಾರತದ ಖಾಸಗಿ ಕಾಲೇಜುಗಳ ಮ್ಯಾನೇಜ್‌ಮೆಂಟ್‌ ಕೋಟಾದ ಪ್ರವೇಶ ಶುಲ್ಕಕ್ಕಿಂತಲೂ ಅಗ್ಗದ ದರದಲ್ಲಿ ಉಕ್ರೇನ್‌ ಮಾತ್ರವಲ್ಲದೆ, ಫಿಲಿಪೀನ್ಸ್‌, ಉಜ್ಬೇಕಿಸ್ತಾನ, ಮಾಲ್ಡೀವ್ಸ್‌ನಲ್ಲೂ ವೈದ್ಯಕೀಯ ಶಿಕ್ಷಣ ದೊರೆಯುತ್ತದೆ’ ಎಂದು ಕೆ.ಆರ್.ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT