ಮೈಸೂರು: ತಾಲ್ಲೂಕಿನ ನಾಗನಹಳ್ಳಿ ಗ್ರಾಮದ ಬಿ.ಕಾಂ. ಪದವೀಧರ ಚೆಲುವರಾಜು, ಖಾಸಗಿ ಕಂಪನಿಯ ಕೆಲಸ ತೊರೆದು ಕೃಷಿಗೆ ಹಿಂತಿರುಗಿ ಅದರಲ್ಲಿ ಖುಷಿ ಕಾಣುತ್ತಿದ್ದಾರೆ.
48 ವರ್ಷದ ಅವರು, ಓದುವಾಗಿನಿಂದಲೂ ಕೃಷಿಯಲ್ಲಿ ತೊಡಗುತ್ತಿದ್ದರು. ಪದವಿ ನಂತರ 10 ವರ್ಷಗಳವರೆಗೆ ಖಾಸಗಿ ಕಂಪನಿಯಲ್ಲಿ ಕ್ಯಾಷಿಯರ್ ಆಗಿದ್ದರು. ಕೃಷಿಯಲ್ಲಿನ ಆಸಕ್ತಿಯ ಕಾರಣ ಗ್ರಾಮಕ್ಕೆ ವಾಪಸಾದರು. ತಮ್ಮ 4 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ತೋಟಗಾರಿಕೆ ಬೆಳೆಗಳಾದ ಟೊಮೆಟೊ, ಮೆಣಸಿನಕಾಯಿ, ತೆಂಗು, ಶುಂಠಿ ಹಾಗೂ ಕೃಷಿ ಬೆಳೆಯಾದ ಭತ್ತವನ್ನು ಬೆಳೆಯುತ್ತಿದ್ದಾರೆ.
ಟೊಮೆಟೊ ಬೇಸಾಯ ಮಾಡಿ, ಹೆಚ್ಚಿನ ಇಳುವರಿ ಪಡೆದು ಗಮನಸೆಳೆದಿದ್ದಾರೆ.ಮಾದರಿಯೂ ಆಗಿದ್ದಾರೆ. ಅವರಿಗೆ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ವಿಜ್ಞಾನಿಗಳು ಮಾರ್ಗದರ್ಶನ ನೀಡಿದ್ದಾರೆ.
‘ಶಿಫಾರಸು ಮಾಡಿದ ಗೊಬ್ಬರಗಳನ್ನು ಹಾಕಿ ಸಿದ್ಧಪಡಿಸಿ ಏರುಮಡಿಗಳನ್ನು ತಯಾರಿಸಿದ್ದರು. ತೇವಾಂಶ ಸಂರಕ್ಷಣೆ, ಕಳೆಗಳ ನಿಯಂತ್ರಣ ಹಾಗೂ ಮಣ್ಣಿನ ಉಷ್ಣಾಂಶ ಕಡಿಮೆ ಮಾಡಲು ಸುಧಾರಿತ ತಾಂತ್ರಿಕ ವಿಧಾನವಾದ ಹೊದಿಕೆ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.ಬೆಳೆಗಳಿಗೆ ಸಾಂಪ್ರದಾಯಿಕವಾಗಿ ನೀರು ಹಾಯಿಸುತ್ತಿದ್ದಾರೆ. ಇದರಿಂದ ನುಸಿ ಹುಳುಗಳ ಬಾಧೆಯನ್ನು ತಕ್ಕ ಮಟ್ಟಿಗೆ ತಡೆಗಟ್ಟಬಹುದು’ ಎಂದು ಕೇಂದ್ರದ ವಿಜ್ಞಾನಿಗಳು ತಿಳಿಸಿದರು.
ಹೈಬ್ರಿಡ್ ತಳಿಯ 3ಸಾವಿರ ಸಸಿಗಳನ್ನು 1.2 ಮೀ x 0.6 ಮೀ. ಅಂತರದಲ್ಲಿ ನಾಟಿ ಮಾಡಿದ್ದರು. ಅವರು ಉತ್ತಮ ಕೃಷಿ ಮಾಡುವುದನ್ನು ಗುರುತಿಸಿ, ವಿಸ್ತರಣಾ ಶಿಕ್ಷಣ ಘಟಕದಿಂದ ಕೆಲ ಕೃಷಿ ಪರಿಕರಗಳಾದ ಹಳದಿ ಹಾಗೂ ನೀಲಿ ಅಂಟು ಬಲೆಗಳು (15/ಎಕರೆಗೆ) ಮತ್ತು ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿಪಡಿಸಿದ ಸೂಕ್ಷ್ಮ ಪೋಷಕಾಂಶಗಳ ಮಿಶ್ರಣವಾದ ತರಕಾರಿ ಸ್ಪೆಶಲ್ (3 ಕೆ.ಜಿ) ಕೊಟ್ಟು, ತಾಂತ್ರಿಕ ಮಾಹಿತಿಯನ್ನೂ ನೀಡಲಾಗಿದೆ.
‘ಅವರ ಜಮೀನಿನಲ್ಲಿ, ತಾಂತ್ರಿಕತೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ವ್ಯತ್ಯಾಸವನ್ನು ತಿಳಿಸಲು ಪ್ರಾತ್ಯಕ್ಷಿಕೆ ತಾಕು ಮತ್ತು ಹೋಲಿಕೆ ತಾಕುವಾಗಿ ವಿಂಗಡಿಸಲಾಗಿದೆ. ಒಂದು ತಾಕುವಿನಲ್ಲಿ ವಿಸ್ತರಣಾ ಶಿಕ್ಷಣ ಘಟಕದಿಂದ ನೀಡಿದ ಹಳದಿ ಹಾಗೂ ನೀಲಿ ಅಂಟು ಬಲೆಗಳನ್ನು ಅಳವಡಿಸಿ ನುಸಿ ಕೀಟಗಳ ಅಥವಾ ಇತರ ಹುಳುಗಳ ನಿಯಂತ್ರಣದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ‘ಟೂಟ ಆಬ್ಸಲೂಟ’ (ಊಜಿ ಹುಳು) ನಿಯಂತ್ರಣಕ್ಕಾಗಿ ಡೆಲ್ಟಾ ಬಲೆಗಳನ್ನು (15/ಎಕರೆಗೆ) ಕೂಡ ನೀಡಲಾಯಿತು. ಇದರಿಂದ ಶೇ.50ರಿಂ 60 ರಷ್ಟು ಹಣ್ಣುಗಳನ್ನು ಹುಳುವಿನ ಬಾಧೆಯಿಂದ ರಕ್ಷಿಸಲಾಯಿತು’ ಎನ್ನುತ್ತಾರೆ ವಿಜ್ಞಾನಿಗಳು.
‘ನಾಟಿ ಮಾಡಿದ 30ನೇ, 45ನೇ ಹಾಗೂ 60ನೇ ದಿನ ‘ತರಕಾರಿ ಸ್ಪೆಷಲ್’ ಅನ್ನು ಕ್ರಮವಾಗಿ ಮೊದಲನೇ, 2ನೇ ಮತ್ತು 3ನೇ ಬಾರಿಗೆ (3ಗ್ರಾಂ./ಲೀ.) ಸಿಂಪಡಿಸಲಾಯಿತು. ಇದರಿಂದ ಹೂ ಮತ್ತು ಕಾಯಿ ಕಚ್ಚುವ ಪ್ರಮಾಣ ಹೆಚ್ಚಾಗುವುದಲ್ಲದೇ, ಅಧಿಕ ಇಳುವರಿ ಸಾಧ್ಯವಾಯಿತು’ ಎಂದು ಚೆಲುವರಾಜು ತಿಳಿಸಿದರು.
‘ನಾಟಿ ಮಾಡಿದ 45ರಿಂದ 60 ದಿನಗಳೊಳಗೆ ಕಾಯಿ ಬಿಡಲು ಪ್ರಾರಂಭವಾಯಿತು. ಮೊದಲ 3–4 ಪ್ರತಿ ಕಟಾವಿನವರೆಗೂ 330ರಿಂದ 440 ಕೆ.ಜಿ ಇಳುವರಿ ಪಡೆದು ನಂತರ 5ರಿಂದ 11ನೇ ಕಟಾವಿನವರೆಗೂ 1,650ರಿಂದ -1800 ಕೆ.ಜಿ. ಇಳುವರಿಯನ್ನು ಪಡೆದೆ. ಒಟ್ಟು ಬೆಳೆಯ ಅವಧಿಯಲ್ಲಿ 15 ಬಾರಿ ಕಟಾವಿನಿಂದ 22 ಟನ್ (ಸಾವಿರ ಕ್ರೇಟ್) ಇಳುವರಿಯನ್ನು ಪಡೆದಿದ್ದೇನೆ. ಪ್ರತಿ ಕೆ.ಜಿ.ಗೆ ₹ 25ರಿಂದ ₹ 30ರವರೆಗೂ ಮಾರಿದೆ. 20 ಗುಂಟೆ ಪ್ರದೇಶದ ಕೃಷಿಗೆ ₹ 35ಸಾವಿರ ವೆಚ್ಚವಾಯಿತು’ ಎಂದು ಹೇಳಿದರು.
‘ವಿಜ್ಞಾನಿಗಳು 8ರಿಂದ 10 ದಿನಕ್ಕೆ ಬಂದು ಮಾರ್ಗದರ್ಶನ ಮಾಡುತ್ತಿದ್ದರು. ಇದರಿಂದ ಸಹಾಯವಾಯಿತು’ ಎಂದು ನೆನೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.