ಗುರುವಾರ , ಡಿಸೆಂಬರ್ 1, 2022
21 °C
ರೈತ ದಸರಾದಲ್ಲಿ ಹಾಲು ಕರೆಯುವ ಸ್ಪರ್ಧೆ: ಅತಿ ಹೆಚ್ಚು ಹಾಲು ಕರೆದವರಿಗೆ ಕುತ್ತಾದ ನಿಯಮ

ನಾಗರಬಾವಿಯ ಸತೀಶ್‌ ಕುಮಾರ್‌ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬೆಂಗಳೂರಿನ ಪಾದರಾಯನಪುರದ ರಿಷಿತ ಎಸ್‌ ಲವಲೀಷಾ ಬೆಳಿಗ್ಗೆ ಮತ್ತೆ ಸಂಜೆ ಸೇರಿ 40.96 ಲೀಟರ್‌ ಹಾಲು ಕರೆದು ಗೆಲುವಿನ ಖುಷಿಯಲ್ಲಿದ್ದರು. ಆದರೆ ಎರಡೂ ಅವಧಿಯಲ್ಲಿ ಕರೆಯುವ ಹಾಲಿನ ಪ್ರಮಾಣದಲ್ಲಿ 2.50 ಲೀಟರ್‌ ವ್ಯತ್ಯಾಸವಷ್ಟೆ ಇರಬೇಕೆಂಬ ನಿಯಮದಿಂದ ಅವರು ಸ್ಪರ್ಧೆಯಿಂದ ಹೊರಬೀಳಬೇಕಾಯಿತು!

ಬೆಳಿಗ್ಗೆ ಅವರು 22.100 ಲೀಟರ್‌ ಹಾಗೂ ಸಂಜೆ 18.860 ಲೀಟರ್‌ ಹಾಲು ಹಿಂಡಿದ್ದರು. ಈ ಎರಡರ ನಡುವೆ 3.24 ಲೀಟರ್‌ನಷ್ಟು ವ್ಯತ್ಯಾಸವಿತ್ತು. ಹೀಗಾಗಿ, 39.370 ಲೀಟರ್‌ ಹಾಲು ಕರೆದ ನಾಗರಬಾವಿಯ ಬೆಣಚಕಲ್‌ ಪಾಳ್ಯ ಡಿ ಗ್ರೂಪ್‌ ಬಡಾವಣೆಯ ಸತೀಶ್‌ಕುಮಾರ್‌ ಚಾಂಪಿಯನ್ ಆಗಿ ಹೊರಹೊಮ್ಮಿ, ₹ 50 ಸಾವಿರ ನಗದು ಬಹುಮಾನ ಗಳಿಸಿದರು.

 ‘ರೈತ ದಸರಾ’ದ ಅಂಗವಾಗಿ ಜೀವರಾಯನಕಟ್ಟೆಯಲ್ಲಿ ಶನಿವಾರ ನಡೆದ ‘ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ’ ಇಂಥ ಕ್ಷಣಗಳಿಗೆ ಸಾಕ್ಷಿಯಾಯಿತು. ನಿಯಮದ ಬಗ್ಗೆ ಸಾಕಷ್ಟು ವಾಗ್ವಾದಗಳೂ ನಡೆದವು.

ನಿಯಾಮವಳಿ–ಕಣ್ಣೀರು: ಬೆಂಗಳೂರಿನ ಸೌತಡ್ಕ ಗಣಪತಿ ಡೇರಿ ಫಾರಂ ತಂಡವು (36.820 ಲೀಟರ್) ದ್ವಿತೀಯ ಸ್ಥಾನ ಪಡೆದು ₹40 ಸಾವಿರ, ಚನ್ನಪಟ್ಟಣದ ಅಭಿಷೇಕ್‌ (34.300 ಲೀಟರ್) ಅವರು ಮೂರನೇ ಸ್ಥಾನ ಪಡೆದು, ₹30 ಸಾವಿರ ಪ್ರಶಸ್ತಿ ಪಡೆದುಕೊಂಡರು. ಪ್ರಶಸ್ತಿ ಪ‍ತ್ರ ಹಾಗೂ ಫಲಕಗಳನ್ನು ನೀಡಿ ಸನ್ಮಾನಿಸಲಾಯಿತು.

ಸ್ಫರ್ಧೆಯಲ್ಲಿ 8 ತಂಡಗಳು ಭಾಗವಹಿಸಿದ್ದು, ಮೈಸೂರಿನಿಂದ ಮೂವರು ಭಾಗವಹಿಸಿದ್ದರು. ಬೆಳಿಗ್ಗೆ ಮತ್ತು ಸಂಜೆ ವೇಳೆ ತಲಾ 20 ನಿಮಿಷದಲ್ಲಿ ಹಾಲು ಹಿಂಡಿ, ಅದನ್ನು ಎಲ್ಲರ ಸಮ್ಮಖದಲ್ಲಿ ಡಿಜಿಟಲ್‌ ತೂಕಯಂತ್ರದಲ್ಲಿ ಅಳತೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು.

ರೈತ ದಸರಾದ ಉಪವಿಶೇಷಾಧಿಕಾರಿ ಕೃಷ್ಣಂರಾಜು, ಸಮಿತಿಯ ಅಧ್ಯಕ್ಷ ಮಹೇಶ್‌ ಕುಮಾರ್‌, ಉಪಾಧ್ಯಕ್ಷ ಎಚ್‌.ಎಂ.ಕೃಷ್ಣಮೂರ್ತಿ, ಸ್ವಾಮಿಗೌಡ, ರಮೇಶ್‌ ಕುಮಾರ್‌, ಎಚ್‌.ಎಂ. ಪರಶಿವಮೂರ್ತಿ, ಸದಸ್ಯ ಕಾರ್ಯದರ್ಶಿ ಡಾ.ಷಡಕ್ಷರಮೂರ್ತಿ ಇದ್ದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು