ಮೈಸೂರು: ನೀರಿನ ತೆರಿಗೆ ಬಾಕಿಯನ್ನು ಪಾವತಿಸಲು ಒಂದು ಬಾರಿ ಪರಿಹಾರದ ಪ್ರಸ್ತಾವ ಸಲ್ಲಿಸುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ (ಬೈರತಿ) ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿಗೆ ಸಂಬಂಧಿಸಿದಂತೆ ಗುರುವಾರ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ನೀರಿನ ತೆರಿಗೆ ಬಾಕಿ ಇಲ್ಲಿವರೆಗೂ ₹200 ಕೋಟಿ ಇದೆ (ಅಸಲು–ಬಡ್ಡಿ ಸೇರಿ). ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದವರೇ ಬಾಕಿ ಉಳಿಸಿಕೊಂಡಿರುವುದರಿಂದ ಬಡ್ಡಿಯನ್ನು ಮನ್ನಾ ಮಾಡಿ ಅಸಲು ಕಟ್ಟಿಸಿಕೊಳ್ಳುವುದಕ್ಕೆ (ಒಂದೇ ಬಾರಿ) ಸರ್ಕಾರ ಅನುಮತಿ ನೀಡುವ ಚಿಂತನೆ ನಡೆಸಿದ್ದು, ಇದಕ್ಕಾಗಿ ಪ್ರಸ್ತಾವ ಸಲ್ಲಿಸಬೇಕು’ ಎಂದು ಹೇಳಿದರು.
‘ಪಾಲಿಕೆಯಲ್ಲಿ ಇರುವ ವಾಹನಗಳ ವಾರ್ಷಿಕ ದುರಸ್ತಿಗೆ 5 ವರ್ಷಗಳಿಂದ ಟೆಂಡರ್ ಕರೆಯದೇ ಒಬ್ಬರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಟೆಂಡರ್ ಕರೆಯದೆ ಏಕೆ ನೀಡುತ್ತಿದ್ದೀರಿ’ ಎಂದು ಸಚಿವರು ಕೇಳಿದರು.
‘ಟೆಂಡರ್ ಕರೆಯದೇ ಏಕ ವ್ಯಕ್ತಿಗೆ ನೀಡಿರುವುದು ಲೋಪವಾಗಿದೆ. ಇದಕ್ಕೆ ಸಂಬಂಧಿಸಿದಂತೆ 15 ದಿನಗಳೊಳಗೆ ವರದಿ ಸಲ್ಲಿಸಬೇಕು’ ಎಂದು ಆಯುಕ್ತರಿಗೆ ಸೂಚಿಸಿದರು.
‘ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ನೀಡಬೇಕು. ಪಾಲಿಕೆಯಲ್ಲಿ 158 ಪೌರಕಾರ್ಮಿಕರಿಗೆ ಜಿ+3 ಮಾದರಿಯಲ್ಲಿ ಸಮುಚ್ಚಯ ನಿರ್ಮಾಣ ಕಾಮಗಾರಿಯಲ್ಲಿ ಶೇ 45ರಷ್ಟು ಮುಗಿದಿದೆ. ಇದು ತೃಪ್ತಿಕರವಲ್ಲ. ಹಣಕಾಸಿನ ಕೊರತೆ ಇಲ್ಲದಿದ್ದರೂ ಕಾಮಗಾರಿ ಬೇಗ ಮುಗಿಸಲು ಏನು ಅಡೆತಡೆಗಳಿವೆ? ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ 2.27 ಲಕ್ಷ ಆಸ್ತಿಗಳಿದ್ದು, ಇವುಗಳಿಗೆ ಸರಿಯದ ಕರ ನಿರ್ಧಾರವಾಗಬೇಕು. ಪ್ರಸಕ್ತ ಸಾಲಿನಲ್ಲಿ ತಾವು ಹಾಕಿಕೊಂಡಿರುವ ₹162 ಕೋಟಿಗಳಿದ್ದು, ನಿಯಮಾನುಸಾರ ತೆರಿಗೆ ನಿರ್ಧಾರಣೆ ಮತ್ತು ವಸೂಲಾತಿ ಮಾಡಿದರೆ ಅದು ₹180 ಕೋಟಿ ದಾಟುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆಯ ಎಲ್ಲ ವಲಯ ಅಧಿಕಾರಿಗಳೂ ಕಾರ್ಯನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ ಎಂ.ಎನ್., ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಎನ್. ಮಂಜುಶ್ರೀ, ಮಹಾನಗರ ಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಶರೀಫ್, ಹೆಚ್ಚುವರಿ ಆಯುಕ್ತೆ ರೂಪಾ, ಸೂಪರಿಂಟೆಂಡೆಂಟ್ ಎಂಜಿನಿಯರ್ ಸಿಂಧೂ ಭಾಗವಹಿಸಿದ್ದರು.
‘ಮೈಸೂರು ಬೆಂಗಳೂರಿನಷ್ಟೇ ವೇಗವಾಗಿ ಬೆಳೆಯುತ್ತಿದೆ. ಪಾರಂಪರಿಕ ನಗರಿ ಅರಮನೆ ನಗರಿ ಎಂದು ಕರೆಯುತ್ತಾರೆ. ಪ್ರವಾಸಿಗರ ಭೇಟಿಯ ಸಂಖ್ಯೆಯು ಹೆಚ್ಚಾಗಿದ್ದು 2023-24ನೇ ಸಾಲಿಗೆ ಕೇವಲ ₹70 ಕೋಟಿಯನ್ನು ಜಾಹೀರಾತಿನಿಂದ ಆದಾಯ ಎಂದು ಅಂದಾಜಿಸಿರುವುದು ಸರಿಯಲ್ಲ. ನಗರದಲ್ಲಿ ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಜಾಹೀರಾತು ಫಲಕಗಳು ಕಾಣುತ್ತವೆ. ಹೀಗಿದ್ದರೂ ಆದಾಯದ ಅಂದಾಜನ್ನು ಕಡಿಮೆ ನಿರ್ಧಾರಿಸುವುದು ಸರಿಯಲ್ಲ. ಇದನ್ನು ಹೆಚ್ಚಿಸಬೇಕು’ ಎಂದು ಸಚಿವರು ಸೂಚಿಸಿದರು. ‘9 ಜಾಹೀರಾತು ಏಜೆನ್ಸಿಗಳು ಮೈಸೂರಿನಲ್ಲಿದ್ದು ಕೇವಲ ಒಬ್ಬರೆ ಭಾಗವಹಿಸುವುದು ಅಥವಾ ಅವರಿಗೇ ನೀಡುವುದು ಸರಿಯಾದ ಕ್ರಮವಲ್ಲ. ಟೆಂಡರ್ ಪ್ರಕ್ರಿಯೆ ನಿಯಮಾನುಸಾರ ನಡೆದು ಎಲ್ಲರಿಗೂ ಸಿಗುವಂತೆ ಆಗಬೇಕು’ ಎಂದು ಸಚಿವರು ಸೂಚಿಸಿದರು.
‘ಪಾಲಿಕೆ ವ್ಯಾಪ್ತಿಯಲ್ಲಿ 11 ಇಂದಿರಾ ಕ್ಯಾಂಟೀನ್‌ಗಳಿವೆ. ಹೆಚ್ಚುವರಿಯಾಗಿ ಮತ್ತೆರಡು ನಿರ್ಮಿಸಲು ಅವಕಾಶ ಕೊಡಬೇಕು’ ಎಂದು ಅಧಿಕಾರಿಗಳು ಕೋರಿದರು. ಪ್ರತಿಕ್ರಿಯಿಸಿದ ಸಚಿವರು ‘ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುತ್ತದೆ. ನಾವು ಬಡವರ ಪರವಾಗಿದ್ದು ಇಂದಿರಾ ಕ್ಯಾಂಟೀನ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ‘ಬೀದಿದೀಪಗಳ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ಲೋಪಗಳು ಕಂಡುಬಂದಲ್ಲಿ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಹಿಂಜರಿಯಬಾರದು. ನಗರದ ಕೆಲವೆಡೆ ಗುಂಡಿಗಳು ಬಿದ್ದಿದ್ದು ಅವುಗಳನ್ನು ಮುಚ್ಚುವ ಕಾರ್ಯ ಅದಷ್ಟು ಬೇಗ ಆಗಬೇಕು’ ಎಂದು ತಿಳಿಸಿದರು. ‘ಸಾರ್ವಜನಿಕರ ಅಹವಾಲು ಹಾಗೂ ಕುಂದುಕೊರತೆಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಇ-ಆಫೀಸ್ ಅನ್ನು ಅದಷ್ಟು ಬೇಗ ಅನುಷ್ಠಾನಕ್ಕೆ ತರಬೇಕು’ ಎಂದ ಅವರು ‘ವಾರದೊಳಗೆ ಈ ಕೆಲಸವಾಗಬೇಕು’ ಎಂದು ಗಡುವು ನೀಡಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಕಾಮಗಾರಿಗಳನ್ನು ಅದಷ್ಟು ಬೇಗ ಪೂರ್ಣಗೊಳಿಸಲು ಶೀಘ್ರ ಟೆಂಡರ್ ಪ್ರಕ್ರಿಯೆ ಮುಗಿಸಬೇಕು-ಬಿ.ಎಸ್. ಸುರೇಶ್ ನಗರಾಭಿವೃದ್ಧಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.