ಮೈಸೂರು: ನಗರದ ಆಯ್ದ ಉದ್ಯಾನಗಳಲ್ಲಿ ಕಿರು ಅರಣ್ಯ (ಮಿಯಾವಾಕಿ ಪದ್ಧತಿ) ಅಭಿವೃದ್ಧಿಪಡಿಸುವ ಯೋಜನೆಗೆ ಮಹಾನಗರ ಪಾಲಿಕೆ ಶನಿವಾರ ಚಾಲನೆ ನೀಡಿದೆ.
ಮೊದಲಿಗೆ ಬಿಡದಿಯ ಟೊಯೊಟ ಕಿರ್ಲೋಸ್ಕರ್ ಆಟೊ ಪಾರ್ಟ್ಸ್ ಕಂಪನಿಯ ಸಹಯೋಗವನ್ನು ಪಡೆದುಕೊಂಡು ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮ ವಹಿಸಲಾಗಿದೆ. ಇದರ ಭಾಗವಾಗಿ ವಿಜಯನಗರ 3ನೇ ಹಂತದ ಹಿನಕಲ್ ರಸ್ತೆಯ ಉದ್ಯಾನದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಲ್ಲಿನ 1.2 ಎಕರೆ ಪ್ರದೇಶದಲ್ಲಿ ಹಂತ ಹಂತವಾಗಿ 12 ಸಾವಿರ ಸಸಿಗಳನ್ನು ನೆಟ್ಟು ಬೆಳೆಸಿ ಕಿರು ಅರಣ್ಯ ಸೃಷ್ಟಿಸುವ ಯೋಜನೆ ಹಾಕಿಕೊಳ್ಳಲಾಗಿದೆ. 10 ವರ್ಷಗಳಲ್ಲಿ ಅಲ್ಲಿ ದಟ್ಟ ಅರಣ್ಯ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ‘ಗಿಡ–ಮರಗಳನ್ನು ಮಕ್ಕಳಂತೆ ಬೆಳೆಸಿ ಪರಿಸರ ಸಂರಕ್ಷಿಸಬೇಕು. ನಗರಗಳು ವೇಗವಾಗಿ ಬೆಳೆಯುತ್ತಿರುವ ಪರಿಣಾಮ ಗಿಡ–ಮರಗಳು ನಾಶವಾಗಿ ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಹೆಚ್ಚಾಗುತ್ತಿದೆ; ಮಾಲಿನ್ಯವೂ ಜಾಸ್ತಿಯಾಗುತ್ತಿದೆ. ಇದನ್ನು ತಡೆಯುವುದಕ್ಕೆ ಎಲ್ಲರೂ ಕ್ರಮ ಕೈಗೊಳ್ಳಬೇಕಾಗಿದೆ’ ಎಂದರು.
ಮುಂದುವರಿಸಬೇಕು: ‘ಮೈಸೂರು ಮಹಾರಾಜರು ನಗರದ ಸುತ್ತ ಹಸಿರೀಕರಣದ ಮೂಲಕ ಪರಿಸರ ಸಂರಕ್ಷಣೆ ಮಾಡಿದ್ದರು. ಇದನ್ನು ನಾವು ಕಾಪಾಡಿಕೊಂಡು ಹೋಗಬೇಕಾಗಿದೆ. ಖಾಸಗಿ ಕಂಪನಿಗಳು ಕೂಡ ಹಸಿರೀಕರಣದಲ್ಲಿ ಕೈಜೋಡಿಸುವ ಜವಾಬ್ದಾರಿ ಹೊರಬೇಕು’ ಎಂದು ಹೇಳಿದರು.
‘ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಒಂದೇ ದಿನ ಮೈಸೂರು ನಗರದಲ್ಲಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮವನ್ನು ನಡೆಸಿದ್ದೆ. ಅಂತಹ ಕೆಲಸವನ್ನು ಈಗಲೂ ಮಾಡಬೇಕಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವ್ಯಾವ ಸಸಿಗಳು?: ಮಹಾನಗರ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಶರೀಫ್ ಮಾತನಾಡಿ, ‘ಈ ಉದ್ಯಾನದಲ್ಲಿ ಬಾಗೆ, ಬನ್ನಿ, ಹಲಸು, ಬೇವು, ಅಶೋಕ, ಬಸವನಪಾದ, ಬಸರಿ, ಕಕ್ಕೆ ಬಯಾ, ಬೀಟೆ, ನಲ್ಲಿ, ಬೇಲಾ, ಆಲ, ಅರಳಿ, ಹತ್ತಿ, ಗೋನಿ, ಸೀತಾಫಲ, ಶಿವಾನಿ, ತಪಸಿ, ಆಕಾಶ ಮಲ್ಲಿಗೆ ಮೊದಲಾದ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಹುಚ್ಚ ಬೇವು, ಮಾವು, ಹೊಂಗೆ, ಹೊನ್ನೆ, ಶ್ರೀಗಂಧ, ಸೀಬೆ, ನೇರಳೆ, ತೋರೆಮತಿ, ತಾರೆ, ತೇಗ, ಹಾಲೆ, ಮಧುಕಾ, ಗೋಡಂಬಿ, ಬುಗರಿ ಮೊದಲಾದವುಗಳನ್ನು ಹಾಕಲಾಗುವುದು. ಬರಡಾಗಿರುವ ಉದ್ಯಾನವನ್ನು ಹಸಿರುಗೊಳಿಸಲಾಗುವುದು’ ಎಂದು ತಿಳಿಸಿದರು.
ಟೊಯೊಟ ಕಿರ್ಲೋಸ್ಕರ್ ಆಟೊಪಾರ್ಟ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಪ್ರಸಾದ್ ಮಾತನಾಡಿದರು. ಪಾಲಿಕೆ ಹಾಗೂ ಕಂಪನಿಯ ಸಿಬ್ಬಂದಿ ಪಾಲ್ಗೊಂಡಿದ್ದರು.
Highlights - ವಿಜಯನಗರ 3ನೇ ಹಂತದ ಹಿನಕಲ್ ರಸ್ತೆಯ ಉದ್ಯಾನ ಆಯ್ಕೆ ಹಂತ ಹಂತವಾಗಿ 12 ಸಾವಿರ ಸಸಿ ನೆಡುವ ಯೋಜನೆ ಟೊಯೊಟ ಕಿರ್ಲೋಸ್ಕರ್ ಆಟೊ ಪಾರ್ಟ್ಸ್ ಕಂಪನಿಯ ಸಹಯೋಗ
Quote - ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮವನ್ನು ತಡೆಯಲು ಗಿಡ ಮರ ಬೆಳೆಸಿ ಅರಣ್ಯ ಪ್ರದೇಶ ವಿಸ್ತಾರ ಮಾಡುವುದೇ ನಮ್ಮ ಮುಂದಿರುವ ಪರಿಹಾರ ಮಾರ್ಗವಾಗಿದೆ ಜಿ.ಟಿ. ದೇವೇಗೌಡ ಶಾಸಕ
Cut-off box - ‘300 ಉದ್ಯಾನ ನಿರ್ವಹಣೆ ಮಾಡಲಾಗುತ್ತಿಲ್ಲ’ ‘ನಗರದಲ್ಲಿ 569 ಉದ್ಯಾನಗಳಿವೆ. ಅದರಲ್ಲಿ 300 ಉದ್ಯಾನಗಳನ್ನು ನಾವು ನಿರ್ವಹಣೆ ಮಾಡಲು ಸಾಧ್ಯವಾಗಿಲ್ಲ. ಖಾಸಗಿ ಕಂಪನಿಗಳು ಮುಂದೆ ಬಂದರೆ ಸಹಕಾರ ಕೊಡಲಾಗುವುದು’ ಎಂದು ಪಾಲಿಕೆ ಆಯುಕ್ತ ಶರೀಫ್ ತಿಳಿಸಿದರು. ‘ನಗರದ ಸರ್ಕಾರಿ ಶಾಲೆಗಳನ್ನೂ ನವೀಕರಣ ಮಾಡಬೇಕಿದೆ. ಕಂಪ್ಯೂಟರ್ ಮೊದಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಇದಕ್ಕೆ ಕೈಜೋಡಿಸಲು ಖಾಸಗಿ ಕಂಪನಿಗಳು ಸಿಎಸ್‌ಆರ್ ನಿಧಿಯಲ್ಲಿ ಆರ್ಥಿಕ ನೆರವು ಒದಗಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.