ಮೈಸೂರು: ಬೆಂಗಳೂರು ಹೊರತುಪಡಿಸಿ, ರಾಜ್ಯದ ಬಹುತೇಕ ಕೇಂದ್ರ ಕಾರಾಗೃಹಗಳ ಮೊಬೈಲ್ ಜಾಮರ್‌ಗಳು ಬಂದ್ ಆಗಿದ್ದು, ಜೈಲಿನಲ್ಲಿದ್ದುಕೊಂಡೇ ಅಕ್ರಮ ಎಸಗುವವರಿಗೆ ವರದಾನವಾಗಿದೆ.
ಬಹುತೇಕ ಜೈಲುಗಳಲ್ಲಿ ಹತ್ತಾರು ವರ್ಷ ಹಳೆಯ 2ಜಿ–3ಜಿ ತಂತ್ರಜ್ಞಾನವುಳ್ಳ ಜಾಮರ್‌ಗಳನ್ನೇ ಬಳಸಲಾಗುತ್ತಿದೆ. ಜೈಲುಗಳಲ್ಲೇ 5ಜಿ ತಂತ್ರಜ್ಞಾನದ ಸ್ಮಾರ್ಟ್ ಫೋನ್‌ಗಳು ಪತ್ತೆಯಾಗುತ್ತಿದ್ದರೂ, ಬಂಧಿಖಾನೆ ಇಲಾಖೆ ಮಾತ್ರ ಅಪ್‌ಡೇಟ್ ಆಗಿಲ್ಲ. ಶಿವಮೊಗ್ಗದಂತಹ ಕಾರಾಗೃಹಗಳಲ್ಲಿ ಜಾಮರ್ ಬಳಕೆಯೇ ಶುರುವಾಗಿಲ್ಲ. ಇದು, ಜೈಲುಗಳಲ್ಲಿ ತಂತ್ರಜ್ಞಾನ ಸೌಲಭ್ಯ ಕೊರತೆ ಹಾಗೂ ಅದೇ ಕಾರಣಕ್ಕೆ ಮುಂದುವರಿದಿರುವ ಅಕ್ರಮಕ್ಕೆ ಕನ್ನಡಿ ಹಿಡಿದಿದೆ.
ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಿದ್ದ ಜಾಮರ್ ನಿಷ್ಕ್ರಿಯಗೊಂಡಿದೆ. 4ಜಿ– 5ಜಿ ತಂತ್ರಜ್ಞಾನದ ಮೊಬೈಲ್ ನೆಟ್‌ವರ್ಕ್ ತುಂಡರಿಸುವ ಸಾಮರ್ಥ್ಯವೂ ಇಲ್ಲ. ಹೀಗಾಗಿ, ದುರಸ್ತಿ ಮಾಡಿಸಿದರೂ ಉಪಯೋಗಕ್ಕೆ ಬಾರದೆಂಬ ಕಾರಣಕ್ಕೆ ಹಾಗೆಯೇ ಬಿಡಲಾಗಿದೆ. ಜೈಲಿನ ಅಧಿಕಾರಿಗಳು ನಿತ್ಯವೂ ಜೈಲಿನೊಳಗೆ ಶೋಧ ನಡೆಸುತ್ತಿದ್ದಾರೆ.
‘ಸಿಬ್ಬಂದಿಯನ್ನೂ ಯಾಮಾರಿಸಿ ಮೊಬೈಲ್ ಬಳಸುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿದ್ದು, ಈ ವರ್ಷ ಐದಾರು ಎಫ್‌ಐಆರ್ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರತಿದಿನ ಬೆಳಿಗ್ಗೆ–ಸಂಜೆ ಜೈಲಿನ ಎಲ್ಲ ಬ್ಯಾರಕ್‌ಗಳು, ಅಡುಗೆ ಮನೆ, ಶೌಚಾಲಯ, ಕೈ ತೋಟ ಸೇರಿದಂತೆ ಎಲ್ಲ ಮೂಲೆಗಳನ್ನೂ ಸಿಬ್ಬಂದಿ ಶೋಧಿಸುತ್ತಿದ್ದಾರೆ. ಆದಾರೂ ಕಣ್ಣು ತಪ್ಪಿಸಿ ಮೊಬೈಲ್‌ಫೋನ್ ಪೂರೈಕೆ ಹಾಗೂ ಬಳಕೆ ಸಾಮಾನ್ಯವಾಗಿದೆ. ಕೆಲವು ಜೈಲುಗಳಲ್ಲಿ ಸಿಬ್ಬಂದಿಯೇ ಮೊಬೈಲ್ ಬಳಕೆಗೆ ಸಹಕರಿಸುತ್ತಿರುವ ಆರೋಪವೂ ಇದೆ.
‘ಜೈಲಿನಲ್ಲಿದ್ದುಕೊಂಡೇ ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದು, ಬ್ಲಾಕ್‌ಮೇಲ್– ಬೆದರಿಕೆ ಹಾಕುವುದು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಅಪರಾಧ ನಿಯಂತ್ರಿಸಲು ಪ್ರತಿ ಕೇಂದ್ರ ಕಾರಾಗೃಹದಲ್ಲೂ ನೂತನ ತಂತ್ರಜ್ಞಾನವುಳ್ಳ ಜಾಮರ್ ಅಳವಡಿಸಬೇಕು’ ಎಂಬ ಆಗ್ರಹ ಕೇಳಿಬಂದಿದೆ.
ಶೀಘ್ರ ಅಳವಡಿಕೆ:
‘5ಜಿ ತಂತ್ರಜ್ಞಾನದ ಜಾಮರ್‌ಗಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಅಳವಡಿಸುವ ನಿರೀಕ್ಷೆ ಇದೆ’ ಎಂದು ಮೈಸೂರು ಕೇಂದ್ರ ಕಾರಾಗೃಹದ ಚೀಫ್ ಸೂಪರಿಂಟೆಂಡೆಂಟ್ ಪಿ.ಎಸ್.ರಮೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಜಾಮರ್ ಅಳವಡಿಸಲಾಗಿದೆ. ಮೈಸೂರು ಕಾರಾಗೃಹದಲ್ಲೂ ಅಳವಡಿಕೆ ಸಂಬಂಧ ಸಂಬಂಧಿಸಿದ ಕಂಪನಿಯ ಪ್ರತಿನಿಧಿಗಳು ಸಮೀಕ್ಷೆ ನಡೆಸಿ ಹೋಗಿದ್ದಾರೆ’ ಎಂದು ಮಾಹಿತಿ ನೀಡಿದರು.
ನಾಲ್ಕೈದು ವರ್ಷದಿಂದ ಮೈಸೂರು ಜೈಲಿನ ಜಾಮರ್ ಸ್ಥಗಿತ ಪ್ರತಿ ದಿನ ಬೆಳಿಗ್ಗೆ–ಸಂಜೆ ಜೈಲು ಸಿಬ್ಬಂದಿಯಿಂದ ತಪಾಸಣೆ
ಶಿವಮೊಗ್ಗ ಜೈಲಿನಲ್ಲಿ ಸದ್ಯ ಜಾಮರ್ ಅಳವಡಿಸಿಲ್ಲ. ಜಾಮರ್ ಅಗತ್ಯದ ಕುರಿತು ಇಲಾಖೆ ಮಾಹಿತಿ ಕೇಳಿದ್ದು ಬೇಕು ಎಂದಿದ್ದೇವೆ. ಶೀಘ್ರ ಅಳವಡಿಸಬಹುದುಅನಿತಾ ಚೀಫ್ ಸೂಪರಿಂಟೆಂಡೆಂಟ್ ಶಿವಮೊಗ್ಗ ಕೇಂದ್ರ ಕಾರಾಗೃಹ
ಮೈಸೂರು ಕೇಂದ್ರ ಕಾರಾಗೃಹದ ಮೊಬೈಲ್ ಜಾಮರ್ ನಾಲ್ಕೈದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಸಿಬ್ಬಂದಿಯೇ ನಿತ್ಯ ಜೈಲಿನೊಳಗೆ ತಪಾಸಣೆ ನಡೆಸುತ್ತಿದ್ದಾರೆಪಿ.ಎಸ್.ರಮೇಶ್ ಚೀಫ್ ಸೂಪರಿಂಟೆಂಡೆಂಟ್ ಮೈಸೂರು ಕೇಂದ್ರ ಕಾರಾಗೃಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.