ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುತ್ತಲೇ ಕಣ್ಮುಚ್ಚಿದ ಮೂಲ ಆದಿವಾಸಿ ಸಂಶೋಧನಾ ಕೇಂದ್ರ

ಮುಖ್ಯಮಂತ್ರಿ ಆದೇಶಕ್ಕೂ ಕಿಮ್ಮತ್ತು ನೀಡದ ಅಧಿಕಾರಿಗಳು!
Last Updated 23 ನವೆಂಬರ್ 2022, 13:52 IST
ಅಕ್ಷರ ಗಾತ್ರ

ಮೈಸೂರು: ಮೂಲ ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಸದುದ್ದೇಶದಿಂದ ಮೈಸೂರಿನ ಬುಡುಕಟ್ಟು ಸಂಶೋಧನಾ ಸಂಸ್ಥೆಯಲ್ಲಿ 2016ರಲ್ಲಿ ಆರಂಭಿಸಿದ್ದ ಒಂದು ಘಟಕವಾಗಿ ಆರಂಭಿಸಿದ್ದ ‘ಮೂಲ ಆದಿವಾಸಿ ಅಧ್ಯಯನ ಕೇಂದ್ರ’ ಹುಟ್ಟುತ್ತಲೇ ಕಣ್ಮುಚ್ಚಿದೆ.

ಕೇಂದ್ರವನ್ನು ಕೇವಲ ಎರಡು ವರ್ಷಗಳಷ್ಟೆ ನಡೆಸಿ, ನಂತರ ಮುಚ್ಚಲಾಗಿದೆ. ಪರಿಣಾಮ, ಜೇನು ಕುರುಬ, ಕೊರಗ, ಇರುಳಿಗ, ಸೋಲಿಗ, ಬೆಟ್ಟ ಕುರುಬ, ಗೌಡಲು, ಸಿದ್ದಿ, ಕುಡಿಯ, ಎರವ, ಪಣಿಯ, ಮಲೆಕುಡಿಯ, ಸಿದ್ದಿ ಪಣಿಯ, ಹಸಲರು ಮೊದಲಾದ ಅರಣ್ಯ ಆಧಾರಿತ ಬುಡಕಟ್ಟು ಸಮುದಾಯಗಳಿಗೆ ಧ್ವನಿ ಇಲ್ಲದಂತಾಗಿದೆ. ಆದಿವಾಸಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮೂಲ ಆದಿವಾಸಿಗಳಿದ್ದಾರೆ. ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ರಾಮನಗರ, ಶಿವಮೊಗ್ಗ, ಚಿಕ್ಕಮಂಗಳೂರು ಮೊದಲಾದ ಜಿಲ್ಲೆಗಳಲ್ಲಿರುವ 12 ಬುಡಕಟ್ಟು ಸಮುದಾಯಗಳ ಕುರಿತು ವರದಿ ತಯಾರಿಸಿ ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕೇಂದ್ರ ತೆರೆಯಲಾಗಿತ್ತು.

ನೇಮಕವೂ ನಡೆದಿತ್ತು:

ಈ ಸಮುದಾಯಗಳ ಪರಿಸ್ಥಿತಿಯ ಅರಿವಿರುವ, ಸೋಲಿಗ ಜನಾಂಗದ ಪಿಎಚ್‌ಡಿ ಪದವಿ ಪಡೆದಿದ್ದ ಡಾ.ಸಿ.ಮಾದೇಗೌಡ ಅವರನ್ನು ಸಂಶೋಧನಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು.

‘ಕೇಂದ್ರವನ್ನು ಪುನರಾರಂಭಿಸಿ, ಈ ಮೂಲ ಅದಿವಾಸಿಗಳಲ್ಲಿ ಸಂಶೋಧನೆ ಮಾಡಿರುವ ಇರುಳಿಗ ಸಮುದಾಯದ ಪಿಎಚ್‌ಡಿ ಪದವೀಧರ ಡಾ.ಕೃಷ್ಣಮೂರ್ತಿ ಕೆ.ವಿ. ಅವರನ್ನು ಸಂಶೋಧನಾಧಿಕಾರಿಯನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿ ವರ್ಷವೇ ಕಳೆದಿದ್ದರೂ ಕ್ರಮವಾಗಿಲ್ಲ. ಇದು, ಮೂಲ ಆದಿವಾಸಿ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಮೂಲ ಆದಿವಾಸಿಗಳ ಬಗ್ಗೆ ಕಾಳಜಿ ವಹಿಸದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಸಬಲೀಕರಣಕ್ಕೆ ಹಿನ್ನಡೆ:

ಇದರಿಂದ, ಬುಡಕಟ್ಟುಗಳು ಮತ್ತು ಮೂಲ ಆದಿವಾಸಿ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಭಾಷೆಗಳಿಗೆ ಸಂಬಂಧಿಸಿದ ಅಧ್ಯಯನಕ್ಕೆ–ಸಬಲೀಕರಣಕ್ಕೆ ಹಿನ್ನಡೆಯಾಗಿದೆ. ಈ ವಿಷಯದಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಯೂ ಆದ್ಯತೆ ನೀಡುತ್ತಿಲ್ಲ. ಇದೆಲ್ಲದರ ಪರಿಣಾಮ, ಸರ್ಕಾರದ ಆಶಯ ಈಡೇರುತ್ತಿಲ್ಲ ಎನ್ನುತ್ತಾರೆ ಮುಖಂಡರು.

‘ಕಾಡಿನಲ್ಲಿ ಬದುಕಿ ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದೆ ನರಕಯಾತನೆ ಅನುಭವಿಸುತ್ತಿರುವ ಆದಿವಾಸಿ ಮತ್ತು ಅರಣ್ಯ ಆಧಾರಿತ ಬುಡಕಟ್ಟು ಸಮುದಾಯಗಳ ಗೋಳು ಅರಣ್ಯರೋದನವಾಗಿದೆ. ಅವರ ಭಾಷೆ, ಕಲೆ, ಸಂಸ್ಕೃತಿ ಆಚಾರ–ವಿಚಾರಗಳು ದಾಖಲಾಗದೇ ನಶಿಸುವ ಹಂತಕ್ಕೆ ತಲುಪಿವೆ. ಇತ್ತೀಚಿನ ದಿನಗಳಲ್ಲಿ ಅನೇಕ ಮಾರಣಾಂತಿಕ ಕಾಯಿಲೆಗಳಿಗೂ ಒಳಗಾಗುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಿದ್ದ ಕೇಂದ್ರವನ್ನು ಮುಚ್ಚಿರುವುದು ವಿಷಾದದ ಸಂಗತಿಯಾಗಿದೆ’ ಎಂದು ಮುಖಂಡ ಡಾ.ಕೃಷ್ಣಮೂರ್ತಿ ಕೆ.ವಿ. ಹೇಳಿದರು.

ಕೇಂದ್ರವನ್ನು ಮುಚ್ಚಲು ಕಾರಣವೇನು ಎಂಬ ಬಗ್ಗೆ ಪ್ರತಿಕ್ರಿಯೆಗೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ರಾಜೇಶ್ ಗೌಡ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT