ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಖತರ್‌ನಾಕ್ ಕಳ್ಳನ ಬಂಧನ, ಒಂಟಿ ಮಹಿಳೆಯರೇ ಗುರಿ

ಒಂಟಿ ಮಹಿಳೆಯರೇ ಗುರಿ; 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಸುರೇಶ್‌
Published 28 ಆಗಸ್ಟ್ 2024, 5:29 IST
Last Updated 28 ಆಗಸ್ಟ್ 2024, 5:29 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆ, ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದ್ದು, ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ಕಬ್ಬಿಣದ ರಾಡು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮಾಹಿತಿ ನೀಡಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುರೇಶ್ ಅಲಿಯಾಸ್‌ ಸೂರಪ್ಪ ಬಂಧಿತ ಆರೋಪಿಯಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ವಿರುದ್ಧ ವಿವಿಧ ಠಾಣೆಗಳಲ್ಲಿ 12ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದು ತಿಳಿಸಿದರು.

ಆ.23ರಂದು ಸಂತೇಮರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯು ಮಹಿಳೆಯೊಬ್ಬರ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ. ಆತನ ಪತ್ತೆಗೆ ಸೆನ್‌ ಠಾಣೆ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆ.26ರಂದು ಬೆಳಗಿನ ಜಾವ ಮೇಗರಹುಂಡಿ ಗ್ರಾಮದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

‘ದೇವಸ್ಥಾನದ ಹುಂಡಿ ಕಳವು, ಬೈಕ್‌ಗಳ ಕಳವು, ಒಂಟಿ ಮಹಿಳೆಯರ ಮೇಲೆ ದಾಳಿ ನಡೆಸಿ ಚಿನ್ನದ ಸರಗಳ ಕಳವು ಸೇರಿದಂತೆ ಹಲವು ಕೃತ್ಯಗಳಲ್ಲಿ ಆರೋಪಿಯು ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ’ ಎಂದು ಎಸ್‌ಪಿ ತಿಳಿಸಿದರು.

ವಿಳಾಸ ಕೇಳುವ ನೆಪದಲ್ಲಿ ದರೋಡೆ: ‘ಮನೆ ವಿಳಾಸ ಕೇಳುವ ನೆಪದಲ್ಲಿ, ಕೃಷಿಗೆ ಜಮೀನು ಪಡೆಯುವ ಸೋಗಿನಲ್ಲಿ ಮಹಿಳೆಯರನ್ನು ಅಡ್ಡಗಟ್ಟುತ್ತಿದ್ದ ಆರೋಪಿ ಹೆದರಿಸಿ ಚಿನ್ನದ ಸರ ಕಳವು ಮಾಡುತ್ತಿದ್ದ. ಕದ್ದ ಬೈಕ್‌ಗಳನ್ನೇ ಅಪರಾಧ ಕೃತ್ಯಗಳಿಗೆ ಬಳಕೆ ಮಾಡುತ್ತಿದ್ದು, ನಿರ್ದಿಷ್ಟ ಪ್ರದೇಶದಲ್ಲಿ ನೆಲೆ ನಿಲ್ಲದೆ ಬೈಕ್‌ನಲ್ಲಿಯೇ ನಿತ್ಯದ ಬಳಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ಇರಿಸಿಕೊಂಡು ಓಡಾಡುತ್ತಿದ್ದ’ ಎಂದು ಎಸ್‌ಪಿ ಮಾಹಿತಿ ನೀಡಿದರು.

‘ಆರೋಪಿ ವಿರುದ್ಧ ದಾಖಲಾಗಿರುವ ಇತರೆ ಪ್ರಕರಣಗಳಲ್ಲಿ ಬಾಡಿ ವಾರೆಂಟ್ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುವುದು. ಕಾರ್ಯಾಚರಣೆ ತಂಡದಲ್ಲಿ ಇನ್‌ಸ್ಪೆಕ್ಟರ್ ಸಾಗರ್, ಪಿಎಸ್‌ಐ ತಾಜುದ್ದೀನ್ ಹಾಗೂ ಇತರ ಸಿಬ್ಬಂದಿ ಭಾಗವಹಿಸಿದ್ದರು. ತಂಡಕ್ಕೆ ₹ 25,000 ನಗದು ಬಹುಮಾನ ನೀಡಲಾಗುವುದು’ ಎಂದು ಎಸ್‌ಪಿ ಘೋಷಿಸಿದರು.

ಮೋಜಿಗಾಗಿ ಕಳವು

‘ದುಶ್ಚಟಗಳನ್ನು ಮೈಗಂಟಿಸಿಕೊಂಡಿದ್ದ ಆರೋಪಿಯು ಮೋಜು ಮಸ್ತಿ ಮಾಡಲು ಕಳ್ಳತನ ರೂಢಿಸಿಕೊಂಡಿದ್ದ. ಹಣ ಖಾಲಿಯಾದಾಗಲೆಲ್ಲ ಕಳ್ಳತನಕ್ಕೆ ಇಳಿಯುತ್ತಿದ್ದ’ ಎಂದು ಎಸ್‌ಪಿ ಬಿ.ಟಿ.ಕವಿತಾ ತಿಳಿಸಿದರು. ‘ಬೆಳಗಿನ ಜಾವ ಹಾಗೂ ಸಂಜೆಯ ಹೊತ್ತು ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದ ಆತ ಮಾಂಗಲ್ಯ ಸರ ಅಥವಾ ಚಿನ್ನದ ಆಭರಣಗಳನ್ನು ಕಿತ್ತು ಪರಾರಿಯಾಗುತ್ತಿದ್ದ’ ಎಂದರು.

ಎಲ್ಲೆಲ್ಲಿ ಪ್ರಕರಣ ಠಾಣೆ;ಪ್ರಕರಣ ಸಂಖ್ಯೆ

*ಸಂತೆಮರಹಳ್ಳಿ ಪೊಲೀಸ್ ಠಾಣೆ–2

*ಚಾಮರಾಜನಗರ ಗ್ರಾಮಾಂತರ ಠಾಣೆ–4

*ಯಳಂದೂರು ಠಾಣೆ–2

*ಕವಲಂದೆ ಠಾಣೆ 1

*ಕೆ.ಎಂ.ದೊಡ್ಡಿ ಠಾಣೆ–1

*ಮೈಸೂರು ದಕ್ಷಿಣ ಠಾಣೆ–1

*ವರುಣ ಠಾಣೆ–1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT