ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕುಶಾಶನಗರ 4 ಪಥದ ಹೆದ್ದಾರಿ: ಭೂ ಸ್ವಾಧೀನ: ಮಾರ್ಚ್‌ 5ರ ಗಡುವು

ಮೈಸೂರು–ಕುಶಾಶನಗರ 4 ಪಥದ ಹೆದ್ದಾರಿ ನಿರ್ಮಾಣ: ಸಂಸದ ಪ್ರತಾಪ ಸಿಂಹ
Last Updated 13 ಫೆಬ್ರುವರಿ 2023, 12:27 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಕುಶಾಶನಗರ ನಡುವೆ ನಾಲ್ಕು ಪಥದ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಭೂ ಸ್ವಾಧೀನಕ್ಕೆ ಉಂಟಾಗಿರುವ ಅಡೆತಡೆಗಳನ್ನು ಮಾರ್ಚ್‌ 5ರೊಳಗೆ ಬಗೆಹರಿಸಬೇಕು’ ಎಂದು ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಈ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಮಾರ್ಚ್‌ 2 ಅಥವಾ 3ನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಂಕುಸ್ಥಾಪನೆ ಮಾಡಿಸುವ ಉದ್ದೇಶವಿದೆ. ಇದಕ್ಕಾಗಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘92.335 ಕಿ.ಮೀ. ಉದ್ದದ ಈ ಹೆದ್ದಾರಿ ಕಾಮಗಾರಿಯನ್ನು ₹ 3,329 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವ ಯೋಜನೆ ಇದು. 4 ಹಂತಗಳಲ್ಲಿ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿ–275ರಲ್ಲಿ 122ನೇ ಕಿ.ಮೀ.ನಿಂದ 214ರವರೆಗೆ ಇರಲಿದೆ. ಭೂಸ್ವಾಧೀನಕ್ಕೆ ₹ 1,113 ಕೋಟಿ ಹಾಗೂ ನಿರ್ಮಾಣಕ್ಕೆ ₹ 2,416 ಕೋಟಿಯಾಗಲಿದೆ’ ಎಂದು ಮಾಹಿತಿ ನೀಡಿದರು.

ಅಸಮಾಧಾನ:

‘ಮೈಸೂರು, ಹುಣಸೂರು, ಪಿರಿಯಾಪಟ್ಟಣ ತಹಶೀಲ್ದಾರ್‌ಗಳು ಹಾಗೂ ಭೂ ದಾಖಲೆಗಳ ಉಪ ನಿರ್ದೆಶಕರು ಹೆದ್ದಾರಿ ಮಾರ್ಗವಾಗಿ ಭೂಮಿಯನ್ನು ಸರ್ವೇ ಮಾಡಿ ಪೋಡಿ ಹಾಗೂ ದುರಸ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸೆಸ್ಕ್‌ ಅಧಿಕಾರಿಗಳು ರಾಷ್ಟೀಯ ಹೆದ್ದಾರಿಯುದ್ದಕ್ಕೂ ಬರುವ ಉಪ ಕೇಂದ್ರಗಳು ಹಾಗೂ ವಿದ್ಯುತ್ ಗ್ರಿಡ್‌ಗಳನ್ನು ಸ್ಧಳಾಂತರಿಸಲು ಅಗತ್ಯ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ಅಡತಡೆ ನಿವಾರಣೆಗೆ ಒಂದೂವರೆ ವರ್ಷದಿಂದ ಪ್ರಯತ್ನಿಸುತ್ತಿದ್ದೇನೆ. ಭೂಸ್ವಾಧೀನಕ್ಕಾಗಿ ಪರಿಶಿಷ್ಟರ ಜಮೀನುಗಳಿಗೆ ಗ್ರಾಂಟ್ ಸರ್ಟಿಫಿಕೆಟ್ ಕೊಡಬೇಕಾಗುತ್ತದೆ. ಭೂಸ್ವಾಧೀನದಿಂದ, ಸಾಗುವಳಿ ಮಾಡುತ್ತಿರುವವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಸೂಕ್ತ ದಾಖಲೆಗಳನ್ನು ಒದಗಿಸಿದರೆ, ಪರಿಹಾರವನ್ನು ಕೊಡಲಾಗುತ್ತದೆ’ ಎಂದು ಹೇಳಿದರು.

‌ಭೂಸ್ವಾಧೀನ ಪ್ರಕ್ರಿಯೆಗೆ 6 ತಿಂಗಳು ಗಡುವು ನೀಡಿದ್ದರೂ ಪ್ರಗತಿಯಾಗದಿರುವುದು, ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಭೆಯಲ್ಲಿ ಬಹಿರಂಗವಾಯಿತು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಮಾರ್ಚ್‌ 5ರ ಗಡುವು ನೀಡಿದರು. ‘ಇದನ್ನು ಮೇಲ್ವಿಚಾರಣೆ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು. ‘ಜಮೀನುಗಳ ದುರಸ್ತಿಗೆ ತ್ವರಿತವಾಗಿ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಮೈಸೂರು-ಬೆಂಗಳೂರು ಹೆದ್ದಾರಿಯ ಯೋಜನಾ ನಿರ್ದೇಶಕ ಬಿ.ಟಿ.ಶ್ರೀಧರ್, ಡಿಸಿಎಫ್ ಬಸವರಾಜ್, ಭೂಸ್ವಾಧೀನಾಧಿಕಾರಿ ಹರ್ಷವರ್ಧನ್, ತಹಶೀಲ್ದಾರರು, ಭೂ ದಾಖಲೆ ಅಧಿಕಾರಿಗಳು, ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಹಂಗಾಮಿ ಸಾಗುವಳಿ ಚೀಟಿ ಇದ್ದರೆ...

‘ಹಂಗಾಮಿ ಸಾಗುವಳಿ ಚೀಟಿ ಇರುವವರಿಂದ ಭೂಸ್ವಾಧೀನಪಡಿಸಿಕೊಂಡರೆ ನಿಯಮದ ಪ್ರಕಾರ ಪರಿಹಾರ ಕೊಡಲಾಗುವುದಿಲ್ಲ. ಒತ್ತಾಯಪೂರ್ವಕವಾಗಿ ಅವರಿಂದ ಜಾಗ‌ ಬಿಡಿಸಿಕೊಳ್ಳಬೇಕಾಗುತ್ತದೆ. ಅವರು ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಲಿ, ಅಲ್ಲಿಂದ ಬರುವ ನಿರ್ದೇಶನ ಪಾಲಿಸಿದರಾಯಿತು. ಉಳಿದ ಜಮೀನಿನಲ್ಲಿ ಅವರು ಸಾಗುವಳಿ ಮಾಡಿಕೊಳ್ಳಲಿ. ಇಂತಹ ಮಹತ್ವದ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿಕೊಡುವುದು ಪ್ರಾಮುಖ್ಯತೆ ಗಳಿಸುತ್ತದೆ’ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಅಧಿಕಾರಿಗಳಿಗೆ ತಿಳಿಸಿದರು.

‘ನಾವು ಭೂಸ್ವಾಧೀನದ ಹಣ ಕಟ್ಟಿಬಿಡುತ್ತೇವೆ. ನೀವು, ಜಾಗ ಪಡೆದುಕೊಳ್ಳಿ’ ಎಂದು ಸಂಸದರು ತಿಳಿಸಿದರು.

ಫೆ.20ರಂದು ಟೆಂಡರ್

ಶಂಕುಸ್ಥಾಪನೆಯಾದ 24 ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶವಿದೆ. ಇದೇ 20ರಂದು ಟೆಂಡರ್ ಆಹ್ವಾನಿಸಲಾಗುವುದು.

–ಪ್ರತಾಪ ಸಿಂಹ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT