ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಅಧ್ಯಕ್ಷ ಮರೀಗೌಡ ಪತ್ನಿಯಿಂದ ಭಾರಿ ಮೌಲ್ಯದ ಬಂಗಲೆ ಖರೀದಿ!

ಸುಮಾರು ₹6 ಕೋಟಿ ಮೌಲ್ಯದ ಮನೆ ಖರೀದಿಸಿದ ನಿವೃತ್ತ ಶಿಕ್ಷಕಿ
Published : 30 ಆಗಸ್ಟ್ 2024, 23:30 IST
Last Updated : 30 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಕೆ. ಮರೀಗೌಡರ ಪತ್ನಿ ಜಯಶ್ರೀ ಅವರು, ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ದಟ್ಟಗಳ್ಳಿಯಲ್ಲಿ ಸುಮಾರು ₹6 ಕೋಟಿ ಮೌಲ್ಯದ ಬಂಗಲೆ ಖರೀದಿಸಿದ್ದಾರೆ. ಮುಡಾ ನಿವೇಶನ ಹಂಚಿಕೆ ಪ್ರಕರಣ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ಈ ಖರೀದಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.

2024ರ ಜೂನ್ 8ರಂದು ಈ ಖರೀದಿ ನಡೆದಿದ್ದು, ‘ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನಿವೃತ್ತಿಯಾಗಿರುವ ಅವರು ಇಷ್ಟೊಂದು ದೊಡ್ಡ ಮೌಲ್ಯದ ಆಸ್ತಿಯನ್ನು ಖರೀದಿಸಲು ಹೇಗೆ ಸಾಧ್ಯ’ ಎಂಬ ಚರ್ಚೆ ಬಿಜೆಪಿ–ಕಾಂಗ್ರೆಸ್ ವಲಯದಲ್ಲಿ ನಡೆದಿದೆ.

ಮರುವಿನ್ಯಾಸ ಕಾರ್ಯ ಚುರುಕು:

ದಟ್ಟಗಳ್ಳಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೌಕರರ/ ಅಧಿಕಾರಿಗಳ ಸಾಂಸ್ಕೃತಿಕ ಹಾಗೂ ಕ್ಷೇಮಾಭಿವೃದ್ಧಿ ಸಂಘವು ನಿರ್ಮಿಸಿರುವ ಬಡಾವಣೆಯ ನಿವೇಶನ ಸಂಖ್ಯೆ 149ರಲ್ಲಿ ಈ ಮನೆ ಇದೆ. ಸದ್ಯ ಬಂಗಲೆಯ ಮರುವಿನ್ಯಾಸದ ಕೆಲಸ ಭರದಿಂದ ಸಾಗಿದೆ.

ಜಯಶ್ರೀ ಅವರು ₹2 ಕೋಟಿ ಮೌಲ್ಯಕ್ಕೆ ಬಂಗಲೆಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದು, ₹16 ಲಕ್ಷದಷ್ಟು ಶುಲ್ಕವನ್ನೂ ಸರ್ಕಾರಕ್ಕೆ ಪಾವತಿಸಿದ್ದಾರೆ.

3,900 ಚದರ ಅಡಿ ವಿಸ್ತೀರ್ಣದ ಪೂರ್ವ ದಿಕ್ಕಿನ ನಿವೇಶನದಲ್ಲಿ‌, ನೆಲ ಮಹಡಿ ಹಾಗೂ ಎರಡು ಅಂತಸ್ತು ಸೇರಿಸಿ ಒಟ್ಟು 659 ಚದರ ಮೀಟರ್ ವಿಸ್ತೀರ್ಣದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ.

‘ಸದ್ಯ ಅದರ ಮಾರುಕಟ್ಟೆ ಮೌಲ್ಯ ₹5.5 ಕೋಟಿಯಿಂದ ₹6 ಕೋಟಿಯಷ್ಟಿದೆ. ನವೀಕರಣ ವೆಚ್ಚವನ್ನೂ ಸೇರಿಸಿದರೆ ಒಟ್ಟಾರೆ ಮೌಲ್ಯ ಇನ್ನೂ ಹೆಚ್ಚಾಗಬಹುದು’ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಅಂದಾಜಿಸುತ್ತಾರೆ.

ಮರೀಗೌಡರ ಹತ್ತಿರದ ಸಂಬಂಧಿ ಎಸ್‌. ಶಿವಣ್ಣ ಅವರಿಗೆ ರಿಯಲ್‌ ಎಸ್ಟೇಟ್ ಉದ್ಯಮಿ ಎನ್‌. ಮಂಜುನಾಥ್‌ ಅವರು ಇದೇ ವರ್ಷ ಮೇ ತಿಂಗಳಲ್ಲಿ, ವಿಜಯನಗರ 4ನೇ ಹಂತದಲ್ಲಿ ಸೆಟ್ಲ್‌ಮೆಂಟ್‌ ಡೀಡ್ ಅಡಿ 40X60 ಚ.ಅಡಿ ವಿಸ್ತೀರ್ಣದ ನಿವೇಶನ ನೋಂದಣಿ ಮಾಡಿಕೊಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು. ಅದರ ಬೆನ್ನಲ್ಲೇ ಈ ಆಸ್ತಿ ನೋಂದಣಿ ವಿವರವೂ ಹೊರಬಿದ್ದಿದೆ.

‘ಉಳಿಕೆ ಹಣ ಕೃಷಿ ಆದಾಯದಿಂದ ಖರೀದಿ’ ‘ಪತ್ನಿ ಜಯಶ್ರೀ ಅವರು 38 ವರ್ಷಗಳ ಸೇವಾ ಅವಧಿಯಲ್ಲಿ ಉಳಿಸಿದ ಹಣ ₹55 ಲಕ್ಷ ಗೃಹ ಸಾಲ ಹಾಗೂ ಕೃಷಿಯಿಂದ ಬಂದ ಆದಾಯದಿಂದಲೇ ಬಂಗಲೆ ಖರೀದಿಸಿದ್ದೇವೆ. ಇದಕ್ಕೂ ಮುಡಾಕ್ಕೂ ಸಂಬಂಧ ಇಲ್ಲ’ ಎಂದು ಕೆ. ಮರೀಗೌಡ ಸ್ಪಷ್ಟನೆ ನೀಡಿದರು. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ‌ಅವರು ‘ನಾನು ಹಾಗೂ ನನ್ನ ಮಡದಿ ನಿರಂತರವಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದೇವೆ. ನನ್ನ ಬಳಿ 10–15 ಎಕರೆ ಹಾಗೂ ಪತ್ನಿ ಬಳಿ 20–25 ಎಕರೆಯಷ್ಟು ಕೃಷಿ ಜಮೀನಿದೆ. ಇಬ್ಬರೂ ಪ್ರಗತಿಪರ ಕೃಷಿಕರಾಗಿದ್ದೇವೆ. ಅದರಿಂದ ಬಂದ ಆದಾಯದಿಂದ ಖರೀದಿಸಿದ್ದೇವೆ’ ಎಂದು ಹೇಳಿದರು. ‘ಮುಡಾದಲ್ಲಿ ಯಾವುದೇ ಅಕ್ರಮ ಆಗಿದ್ದರೆ ತನಿಖೆಗೆ ಸಿದ್ಧನಿದ್ದೇನೆ. ಆದರೆ ಅದನ್ನೇ ಮುಂದಿಟ್ಟುಕೊಂಡು ಕೆಲವರು ವೈಯಕ್ತಿಕವಾಗಿ ನನ್ನ ತೋಜೋವಧೆಗೆ ಮುಂದಾಗಿದ್ದು ಅಂತಹವರ ವಿರುದ್ಧ ಕಾನೂನು ಕ್ರಮವನ್ನೂ ಕೈಗೊಳ್ಳುತ್ತೇನೆ’ ಎಂದರು.

ದಿನೇಶ್‌ಕುಮಾರ್‌ಗೆ ಕುಲಸಚಿವ ಹುದ್ದೆ: ಬಿಜೆಪಿ ಆಕ್ಷೇಪ

ಮೈಸೂರು: ಮುಡಾ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಅವರನ್ನು ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದ್ದು, ಅದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾಗಿದೆ.

ಮತ್ತೊಂದೆಡೆ, ಮುಡಾದ ಹಿಂದಿನ ಆಯುಕ್ತರಾದ ಡಿ.ಬಿ.ನಟೇಶ್ ಹಾಗೂ ದಿನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ವಕೀಲ ಅರುಣ್‌ಕುಮಾರ್ ಎಂಬುವರು ಇಲ್ಲಿನ ಲಕ್ಷ್ಮಿಪುರಂ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.

‘ಇಬ್ಬರೂ ಆಯುಕ್ತರು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ-1987, ಭ್ರಷ್ಟಾಚಾರ ತಡೆ
ಕಾಯ್ದೆ– 1988 ನಿಬಂಧನೆಗಳಿಗೆ ವಿರುದ್ಧವಾಗಿ ಕೆಲಸ ಮಾಡಿ ಸರ್ಕಾರಕ್ಕೆ ₹5 ಸಾವಿರ ಕೋಟಿ ನಷ್ಟ ಉಂಟು ಮಾಡಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಬಳಿಕ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌ ಅವರನ್ನು ಭೇಟಿ ಮಾಡಿ, ‘ಪೊಲೀಸರು ಎಫ್‌ಐಆರ್ ದಾಖಲಿಸದೇ ಬೆಂಗಳೂರಿಗೆ ದೂರಿನ ಪ್ರತಿಯನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ. ಇಲ್ಲಿಯೇ ಎಫ್‌ಐಆರ್‌ ದಾಖಲಿಸಬೇಕು’ ಎಂದು ಮನವಿ ಮಾಡಿದರು.

ದಿನೇಶ್‌ಕುಮಾರ್‌ ವರ್ಗಾವಣೆ ಸಂಬಂಧ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಾಸಕ ಟಿ.ಎಸ್. ಶ್ರೀವತ್ಸ, ‘ಭ್ರಷ್ಟ ಅಧಿಕಾರಿಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧೃತರಾಷ್ಟ್ರ ಪ್ರೇಮ ಏಕೆ? ಭ್ರಷ್ಟಾಚಾರ ಮಾಡಿದ್ದ ಅಧಿಕಾರಿಗೆ ಪ್ರಮೋಷನ್‌ ಕೊಟ್ಟು ವರ್ಗಾಯಿ
ಸಲಾಗಿದೆ. ತಮಗೆ ಕಮಿಷನ್ ಬಂದರೆ ಸಾಕು ಎಂಬ ಮನಸ್ಥಿತಿ ಅವರದ್ದು . ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಹಿಂದಿನ ಇಬ್ಬರೂ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಲೋಕಾಯುಕ್ತ ಅಧಿಕಾರಿಗಳಿಗೆ ಸದ್ಯದಲ್ಲೇ ದೂರು ಸಲ್ಲಿಸುವೆ’ ಎಂದರು.

ಸ್ನೇಹಮಯಿ ಕೃಷ್ಣ ವಿರುದ್ಧ ಲಕ್ಷ್ಮಣ್‌ ದೂರು

ಮೈಸೂರು: ‘ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಗಡಿಪಾರು ಮಾಡಿ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಅವರಿಗೆ ಶುಕ್ರವಾರ ದೂರು ಸಲ್ಲಿಸಿದರು.

‘ರೌಡಿಗಳ ಪಟ್ಟಿಯಲ್ಲಿ ಕೃಷ್ಣ ಹೆಸರಿದ್ದು, ಅವರ ವಿರುದ್ಧ ನಗರ ವ್ಯಾಪ್ತಿಯಲ್ಲಿ 17 ಪ್ರಕರಣಗಳಿವೆ. ಭೂವಿವಾದಗಳ ಸೃಷ್ಟಿ, ಆಸ್ತಿದಾರರಿಗೆ ಬೆದರಿಕೆ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್‌ಟಿಐ ಅಡಿ ದಾಖಲೆಗಳನ್ನು ಪಡೆದು, ನಕಲಿ ಸೀಲ್‌ ಮೂಲಕ ದಾಖಲೆಗಳನ್ನು ತಿರುಚಿ ದುರುಪಯೋಗಪಡಿಸಿಕೊಂಡಿದ್ದಾರೆ. ಆತನ ಸಹಚರರು ನಮ್ಮ ವಿರುದ್ಧವೇ ಸುಳ್ಳು ದೂರು ದಾಖಲಿಸುತ್ತಿದ್ದಾರೆ. ಅಂಥಹವರಿಂದ ಜೀವ ಬೆದರಿಕೆ ಇದೆ’ ಎಂದರು.

ವಿಜಯೇಂದ್ರ ಗಾಡಿ ಬಹಳ ದಿನ ಓಡದು: ಎಂ.ಬಿ.ಪಾಟೀಲ

ಬೆಳಗಾವಿ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಗಾಡಿ ಬಹಳ ದಿನ ಓಡದು. ಯತ್ನಾಳ, ರಮೇಶ ಜಾರಕಿಹೊಳಿ, ಆರ್.ಅಶೋಕ, ಬೊಮ್ಮಾಯಿ ಸೇರಿ ಯಾರೂ ಅವರ ನಾಯಕತ್ವ ಒ‍ಪ್ಪಿಲ್ಲ. ತಮ್ಮ ಸ್ಥಾನವೇ ಅಲುಗಾಡುತ್ತಿರುವಾಗ ಸಿದ್ದರಾಮಯ್ಯ ವಿರುದ್ಧ ಆರೋಪಿಸುತ್ತಾರೆ’ ಎಂದು ಸಚಿವ
ಎಂ.ಬಿ.ಪಾಟೀಲ ವ್ಯಂಗ್ಯವಾಡಿದರು.

‘ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ತಪ್ಪು ಏನೂ ಇಲ್ಲ ಎಂಬುದು ನಮಗೆ ಖಾತ್ರಿಯಾಗಿದೆ. ಆಗ ಬಿಜೆಪಿಯರು ಪೇಚಾಟಕ್ಕೆ ಸಿಲುಕುತ್ತಾರೆ. ಸಿದ್ದರಾಮಯ್ಯ ಮತ್ತಷ್ಟು ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಾರೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ
ತಿಳಿಸಿದರು.

‘ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಇನ್ನೊಬ್ಬ ದಲಿತ ನಾಯಕನ್ನೇ ಎತ್ತಿ ಕಟ್ಟಲಾಗಿದೆ. ಹೀಗೆ ಒಂದು ಸಮಾಜವನ್ನು ತುಳಿಯಲು ಅದೇ ಸಮಾಜದ ನಾಯಕರನ್ನು ಎತ್ತಿಕಟ್ಟುವುದು ಬಿಜೆಪಿ, ಆರ್‌ಎಸ್‌ಎಸ್‌ ಉದ್ದೇಶ. ಲಿಂಗಾಯತ ನಾಯಕರನ್ನೇ ಎತ್ತಿಕಟ್ಟಿ ಯಡಿಯೂರಪ್ಪ ಅವರನ್ನು ಬಲಿ ಕೊಟ್ಟಿದ್ದು ಇದೇ ತಂತ್ರದಿಂದ’ ಎಂದರು.

ಅವಮಾನಿಸಿಲ್ಲ: ‘ಛಲವಾದಿ ನಾರಾಯಣಸ್ವಾಮಿ ಅವರಿಗೆ ನಾನು ಅವಮಾನ ಮಾಡಿಲ್ಲ. ಅವರು ಮೈಸೂರು ಬಳಿ ಸಾಫ್ಟ್‌ವೇರ್‌ ತಂತ್ರಜ್ಞಾನ ಅಭಿವೃದ್ಧಿಪಡಿಸಲು 8,029 ಚದರ್‌ ಮೀಟರ್ ಭೂಮಿ ಪಡೆದಿದ್ದಾರೆ. ಅಲ್ಲಿ ಶೆಡ್‌ ಮಾತ್ರ ಕಟ್ಟಿದ್ದಾರೆ. ಆ ದೃಷ್ಟಿಯಲ್ಲಿ ಅವರನ್ನು ‘ಶೆಡ್‌ ಗಿರಾಕಿ’ ಎಂದು ಕರೆದಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

‘ಶಾಮನೂರು ಶಿವಶಂಕರಪ್ಪ ಅವರ ಜೊತೆಗೆ ಸಂಬಂಧ ಬೆಳೆಸಿದ ಬಳಿಕ ಲಿಂಗಾಯತ ಧರ್ಮದ ಹೋರಾಟದಿಂದ ಹಿಂದೆ ಸರಿದಿದ್ದೇನೆ ಎಂಬುದು ಸುಳ್ಳು. ಅವರ ತತ್ವ ಅವರಿಗೆ, ನಮ್ಮ ತತ್ವ ನಮಗೆ. ಮುಂದೊಂದು ದಿನ ವೀರಶೈವ ಮಹಾಸಭೆಯವರೇ ಲಿಂಗಾಯತ ಧರ್ಮಕ್ಕೆ ಮುದ್ರೆ ಒತ್ತುವರು’ ಎಂದೂ ಅವರು ‍ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT