ಮೈಸೂರು: ಹಗರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ಯು ಶಾಸಕಾಂಗವನ್ನು ರಾಜ್ಯಪಾಲರು ಅಮಾನತಿನಲ್ಲಿ ಇರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಒತ್ತಾಯಿಸಿದರು.
'ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿಯೂ ಇದೇ ಕ್ರಮ ಕೈಗೊಳ್ಳಲಾಗಿತ್ತು. ನಂತರದಲ್ಲಿ ಚುನಾವಣೆ ನಡೆದು ಬಂಗಾರಪ್ಪ ಮುಖ್ಯಮಂತ್ರಿ ಆದರು' ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
'ಸಿದ್ದರಾಮಯ್ಯ ಮೂಗಿನಡಿ ಮುಡಾ ವಾಸನೆ ಜಾಸ್ತಿ ಆಗುತ್ತಿದೆ. ಮೈಸೂರಿನಲ್ಲಿ ಕಾನೂನಿಗೆ ಬೆಲೆ ಇಲ್ಲದಂತಾಗಿದೆ. ಮುಡಾ ಕಡತವನ್ನು ವೈಟ್ನರ್ ಹಾಕಿ ತಿದ್ದಿರುವುದು ನಾಚಿಕೆಗೇಡಿನ ಸಂಗತಿ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರಿನಲ್ಲಿ ಬಂದು ಕಡತ ಹೊತ್ತೊಯ್ದಿದ್ದಾರೆ. ಕಡತ ಕಳವು ಮಾಡಿದ್ದಕ್ಕೆ ಸಚಿವರ ಮೇಲೆ ಪ್ರಕರಣ ದಾಖಲಿಸಬೇಕು. ಈ ಹಿಂದಿನ ಇಬ್ಬರು ಆಯುಕ್ತರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಆಗ ಎಲ್ಲ ಪಕ್ಷದವರೂ ಸಿಕ್ಕಿಹಾಕಿಕೊಳ್ಳುತ್ತಾರೆ’ ಎಂದು ಆಗ್ರಹಿಸಿದರು. ಲೋಕಾಯುಕ್ತ ಸುಮೊಟೊ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುವಂತೆ ಒತ್ತಾಯಿಸಿದರು.