ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ₹ 102 ಕೋಟಿ ವೆಚ್ಚದಲ್ಲಿ ಲಾಜಿಸ್ಟಿಕ್ ಪಾರ್ಕ್: ಪ್ರತಾಪ್‌ ಸಿಂಹ

ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ
Last Updated 18 ಜನವರಿ 2023, 11:35 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರದ ಭಾರತೀಯ ಕಂಟೇನರ್‌ ನಿಗಮ(ಸಿಒಎನ್‌ಸಿಒಆರ್)ದಿಂದ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸುತ್ತಿರುವ ‘ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್’ (ಎಂಎಂಎಲ್‌ಪಿ) ಕಾಮಗಾರಿಯನ್ನು ಸಂಸದ ಪ್ರತಾಪ ಸಿಂಹ ಬುಧವಾರ ವೀಕ್ಷಿಸಿದರು.

‘ಕೈಗಾರಿಕೆಗಳ ಬಹಳ ಅನುಕೂಲ ಮಾಡಿಕೊಡುವ ಮಹತ್ವದ ಯೋಜನೆ ಇದಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಒಂದು ಕಡೆ ಮೈಸೂರು–ಬೆಂಗಳೂರು ದಶಪಥ ಸಿದ್ಧಗೊಳ್ಳುತ್ತಿದೆ. ಇನ್ನೊಂದೆಡೆ, ಮೈಸೂರು ವಿಮಾನನಿಲ್ದಾಣವನ್ನು ಕ್ರಿಯಾಶೀಲಗೊಳಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ, ಮೈಸೂರು ಭಾಗದಲ್ಲಿ ಉದ್ಯಮ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ, ಇನ್‌ಲ್ಯಾಂಡ್ ಕಂಟೇನರ್ ಡಿಪೊ ಬಹಳ ಮುಖ್ಯವಾಗುತ್ತದೆ. ಆದ್ದರಿಂದ 2015–16ರಲ್ಲೇ ‘ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್’ ಮೈಸೂರಿಗೆ ಮಂಜೂರಾದರೂ ಭೂಸ್ವಾಧೀನ ಮೊದಲಾದ ಸಮಸ್ಯೆಗಳಾಗಿದ್ದವು. ಅದೆಲ್ಲವನ್ನೂ ಪರಿಹರಿಸಿ ಕಾಮಗಾರಿ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘₹ 102 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು (ಭೂಸ್ವಾಧೀನವೂ ಸೇರಿ) ನಡೆಸಲಾಗುತ್ತಿದೆ. ಇದು, ಡಿಸೆಂಬರ್‌ ವೇಳೆಗೆ ಸಿದ್ಧಗೊಳ್ಳಲಿದೆ. ಬೆಂಗಳೂರು ನಂತರ 2ನೇ ಕಂಟೇನರ್‌ ಡಿಪೊ ಇದಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಭಾಗವು ಅಭಿವೃದ್ಧಿಗೊಳ್ಳಲಿದೆ’ ಎಂದು ತಿಳಿಸಿದರು.

‘ಚೆನ್ನೈನಿಂದ ಮೈಸೂರಿಗೆ ವಾರಕ್ಕೆ ಮೂರು ಕಂಟೇನರ್‌ಗಳ ಬರುತ್ತಿವೆ. ಅವುಗಳಿಗೆ ಚೆನ್ನೈನಲ್ಲೇ ಅನುಮತಿ ನೀಡಲಾಗುತ್ತಿದೆ. ಸುಂಕವನ್ನೂ ಅಲ್ಲೇ ಕಟ್ಟಿಸಿಕೊಳ್ಳಲಾಗುತ್ತಿದೆ. ಇಲ್ಲೇ ಆ ಕೆಲಸ ನಡೆದರೆ ನಮ್ಮ ಸರ್ಕಾರಕ್ಕೆ ವರಮಾನವೂ ಹೆಚ್ಚಲಿದೆ. ವಾರ್ಷಿಕವಾಗಿ 1.40 ಲಕ್ಷ ಕಂಟೇನರ್‌ಗಳನ್ನು ನಿರೀಕ್ಷಿಸಲಾಗುತ್ತಿದೆ. ಇಲ್ಲಿಂದಲೇ ರಫ್ತು ಹಾಗೂ ಆಮದು ನಡೆಯಲಿದೆ. ಅಗತ್ಯವಿದ್ದವರಿಗೆ, ಗೋದಾಮಿನ ಸೌಲಭ್ಯವನ್ನೂ ಕಲ್ಪಿಸಲಾಗುತ್ತದೆ’ ಎಂದರು.

‘ಪ್ರಧಾನ ಮಂತ್ರಿ ಗತಿ–ಶಕ್ತಿ ಯೋಜನೆಯಲ್ಲಿ ಈ ಕಂಟೇನರ್‌ ಡಿಪೊ ನಿರ್ಮಿಸಲಾಗುತ್ತಿದೆ. 67 ಎಕರೆಯನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಭಾಗದ ಉದ್ದಿಮೆಯವರು ರಫ್ತು ಹಾಗೂ ಆಮದಿಗಾಗಿ ಚೆನ್ನೈ ಮೊದಲಾದ ನಗರಗಳನ್ನು ಅವಲಂಬಿಸುವುದು ತಪ್ಪಲಿದೆ. ಇಲ್ಲೇ ಆ ಸೌಲಭ್ಯ ಸಿಗಲಿದೆ. ಇಲ್ಲಿಂದಲೇ ರೈಲಿನ ಮೂಲಕ ರವಾನಿಸಬಹುದಾಗಿದೆ. ಇದರಿಂದ ಶೇ 30ರಷ್ಟು ಸಾಗಣೆ ವೆಚ್ಚವನ್ನೂ ಉಳಿಸಬಹುದಾಗಿದೆ. ಸಮಯವೂ ಉಳಿತಾಯವಾಗಲಿದೆ’ ಎಂದು ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಧಿಕಾರಿ ಸತೀಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಡಕೊಳ ರೈಲು ನಿಲ್ದಾಣದಿಂದ ಡಿಪೊವರೆಗೆ ಹಳಿ ಹಾಕಲಾಗುವುದು. ರಸ್ತೆ ಹಾಗೂ ಹಳಿ ನಿರ್ಮಾಣ– ಹೀಗೆ ಎರಡು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಲೋಡಿಂಗ್ ಹಾಗೂ ಅನ್‌ಲೋಡಿಂಗ್‌ಗೆ ಬೇಕಾದ ಸ್ಥಳಾವಕಾಶ, ಗೋದಾಮಿಗೆ ವ್ಯವಸ್ಥೆಯೂ ಇರಲಿದೆ. ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ’ ಎಂದು ರೈಲ್ವೆ ಸಚಿವಾಲಯದ ಐಆರ್‌ಸಿಒಎನ್ (ಭಾರತೀಯ ರೈಲ್ವೆ ನಿರ್ಮಾಣ ಕಂಪನಿ) ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರೂ ಆಗಿರುವ ಯೋಜನೆಯ ಮುಖ್ಯಸ್ಥ ಶಶಿಧರ ಎಸ್.ಮಠದ ತಿಳಿಸಿದರು.

ಕಾಮಗಾರಿಯ ಗುತ್ತಿಗೆದಾರ ಎಸ್.ಜಿ. ಅಗರ್‌ವಾಲ್‌ ಕಂಪನಿಯ ದೀಪಕ್ ಅಗರ್‌ವಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT