ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು | ದುಬಾರಿ ಆಗಲಿದೆ ಚಾಮುಂಡಿ ‘ಸೇವಾರ್ಥ’

ದರ ಪರಿಷ್ಕರಣೆಗೆ ‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’ದಿಂದ ಪ್ರಸ್ತಾವ ಸಿದ್ಧ
Published : 10 ಸೆಪ್ಟೆಂಬರ್ 2024, 6:38 IST
Last Updated : 10 ಸೆಪ್ಟೆಂಬರ್ 2024, 6:38 IST
ಫಾಲೋ ಮಾಡಿ
Comments

ಮೈಸೂರು: ಇಲ್ಲಿನ ಪ್ರಖ್ಯಾತ ಧಾರ್ಮಿಕ ಸ್ಥಳವಾದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ಸಮೂಹ ದೇವಾಲಯಗಳಲ್ಲಿನ ಸೇವಾರ್ಥದ ದರಗಳನ್ನು ಹೆಚ್ಚಿಸಿ ಪರಿಷ್ಕರಿಸಲು ‘ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ’ ಪ್ರಸ್ತಾವ ಸಿದ್ಧಪಡಿಸಿದೆ.

ಈಗಿರುವ ಸೇವಾರ್ಥದ ದರಗಳು 10 ವರ್ಷ ಹಳೆಯದಾಗಿದ್ದು, ಪ್ರಸ್ತುತ ಮಾರುಕಟ್ಟೆ ದರಗಳ ಅನ್ವಯ ಪರಿಷ್ಕರಣೆಗೆ ಯೋಜಿಸಲಾಗಿದೆ. ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ದರ ಅಂತಿಮಗೊಳಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಪ್ರಸ್ತಾವದಂತೆ, ದರ ಪರಿಷ್ಕರಣೆಯಾದಲ್ಲಿ ಭಕ್ತರು ‘ಸೇವಾರ್ಥ’ಕ್ಕೆ ಹೆಚ್ಚಿನ ಹಣ ಕೊಡಬೇಕಾಗುತ್ತದೆ ಹಾಗೂ ವಾಹನಗಳ ನಿಲುಗಡೆ ಶುಲ್ಕವೂ ಸರಾಸರಿ ಮೂರು ಪಟ್ಟು ಜಾಸ್ತಿಯಾಗಲಿದೆ! ಇದಕ್ಕೆ ಜಿಎಸ್‌ಟಿ ಸಹಿತ ಶುಲ್ಕ ವಿಧಿಸಲು ಯೋಜಿಸಲಾಗಿದೆ.

ಪ್ರಸ್ತಾವಕ್ಕೆ ಅನುಮೋದನೆ ದೊರೆತಲ್ಲಿ, ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ನಾಡದೇವತೆಯ ಪೂಜೆಗೆಂದು ಬರುವವರು ಮುಂದಿನ ದಿನಗಳಲ್ಲಿ ದುಬಾರಿ ಬೆಲೆಯನ್ನು ತೆರಬೇಕಾಗುವುದು ಅನಿವಾರ್ಯವಾಗಲಿದೆ.

ದೇಗುಲಗಳ ಅಭಿವೃದ್ಧಿಗೆ: ₹ 100 ಇರುವ ಪ್ರವೇಶ ಶುಲ್ಕ ₹ 200ಕ್ಕೆ ಏರಿಕೆಯಾಗಲಿದೆ. ಚಂಡಿ ಹೋಮದ ದವರನ್ನು ಒಮ್ಮೆಲೆ ಬರೋಬ್ಬರಿ ₹ 10ಸಾವಿರ ಹೆಚ್ಚಿಸಲು ಪ್ರಸ್ತಾವ ಸಿದ್ಧಪಡಿಸಲಾಗಿದೆ. ವಾಹನಗಳಿಗೆ ಪೂಜೆ ಸಲ್ಲಿಕೆಗೆ ನೀಡುವ ‘ಕಾಣಿಕೆ’ಯ ಪ್ರಮಾಣವೂ ದುಬಾರಿ ಆಗಲಿದೆ. ಈ ‘ದರ ಏರಿಕೆ’ಯ ಮೂಲಕ ಆದಾಯದ ಪ್ರಮಾಣವನ್ನು ವೃದ್ಧಿಸಲು ಪ್ರಾಧಿಕಾರ ಯೋಜಿಸಿದೆ. ಇದಕ್ಕಾಗಿ ಭಕ್ತರ ಮೇಲೆ ‘ಹೊರೆ’ ಹೇರುವುದಕ್ಕೆ ಉದ್ದೇಶಿಸಲಾಗಿದೆ. ಪ್ರಾಧಿಕಾರದಿಂದ ಸಿದ್ಧಪಡಿಸಿರುವ ಪ್ರಸ್ತಾವದ ವಿವರ ‘‍ಪ್ರಜಾವಾಣಿ’ಗೆ ಲಭ್ಯವಾಗಿದೆ.

ದೇವಾಲಯದ ಖಾತೆಯಲ್ಲಿ ಸದ್ಯ ₹169 ಕೋಟಿ ನಿಶ್ಚಿತ ಠೇವಣಿ ಇದ್ದು, ವಾರ್ಷಿಕ ಸರಾಸರಿ ₹20–25 ಕೋಟಿ ನಿವ್ವಳ ಆದಾಯ ಬರುತ್ತಿದೆ. ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದ್ದು, ವಿವಿಧ ಮೂಲಗಳಿಂದ ಸಂಗ್ರಹವಾಗುವ ಆದಾಯವೂ ಜಾಸ್ತಿಯಾಗುತ್ತಿದೆ. ಪ್ರಾಧಿಕಾರದ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ₹169 ಕೋಟಿ ನಿಶ್ಚಿತ ಠೇವಣಿ ಹಾಗೂ ಉಳಿತಾಯ ಖಾತೆಯಲ್ಲಿ ₹20.24 ಕೋಟಿ ಇದೆ. 2023–24ರಲ್ಲಿ ₹49.64 ಕೋಟಿ ಆದಾಯ ಬಂದಿದ್ದು, ಇದರಲ್ಲಿ  ₹21 ಕೋಟಿ ಖರ್ಚಾಗಿ ₹28.18 ಕೋಟಿ ನಿವ್ವಳ ಆದಾಯ ಉಳಿದಿದೆ. ಈ ವರ್ಷ ಈ ಜುಲೈ ಅಂತ್ಯಕ್ಕೆ ₹17.04 ಕೋಟಿ ಆದಾಯ ಬಂದಿದ್ದು, ಇದರಲ್ಲಿ ₹6.97 ಕೋಟಿ ಖರ್ಚಾಗಿದೆ. ಪ್ರಾಧಿಕಾರದ ವ್ಯಾಪ್ತಿಯ 24 ದೇವಾಲಯಗಳನ್ನು ಅಭಿವೃದ್ಧಿಪಡಿಸಲು ಅನುವಾಗುವಂತೆ ಆದಾಯ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಈಗಿರುವ ದರ 10 ವರ್ಷ ಹಳೆಯದ್ದು ವಾಹನ ನಿಲುಗಡೆ ಶುಲ್ಕಕ್ಕೂ ಜಿಎಸ್‌ಟಿ ಸೇರಿಸುವ ಉದ್ದೇಶ! ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸುವ ಸಾಧ್ಯತೆ

ವಿಶೇಷ ವ್ಯವಸ್ಥೆಗೆ ‘ಸ್ಮಾರ್ಟ್‌ ಕಾರ್ಡ್‌’ ‘ಬೆಟ್ಟಕ್ಕೆ ಭಕ್ತರು ಸುಗಮ ಹಾಗೂ ವಿಶೇಷ ದರ್ಶನ ಪಡೆಯುವುದಕ್ಕೆ ಅನುವಾಗುವಂತೆ ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೂ ಯೋಜಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ. ಕಾರ್ಡ್‌ಗಳಿಗೆ ಇಂತಿಷ್ಟು ದರ ನಿಗದಿಪಡಿಸಲಾಗುತ್ತದೆ. ಅವುಗಳನ್ನು ಪಡೆದವರು ವಿಶೇಷ ಆದ್ಯತೆಯನ್ನು ದೇಗುಲದಲ್ಲಿ ಪಡೆದುಕೊಳ್ಳಬಹುದಾಗಿದೆ. ಪ್ರಸ್ತಾವಿತ ದರ ವಿವರ ಇಂತಿದೆ. * ₹10ಸಾವಿರದ ಸ್ಮಾರ್ಟ್‌ ಕಾರ್ಟ್‌: ಒಬ್ಬರಿಗೆ ವರ್ಷಕ್ಕೆ 12 ಬಾರಿ ದರ್ಶನ ಪ್ರತಿ ಭೇಟಿಗೆ 1 ಲಡ್ಡು ಪ್ರಸಾದ. * ₹25ಸಾವಿರ ಕಾರ್ಡ್: ಇಬ್ಬರಿಗೆ ವಾರ್ಷಿಕ 12 ಬಾರಿ ದರ್ಶನ ಪ್ರತಿ ಭೇಟಿಗೆ 2 ಲಡ್ಡು ಪ್ರಸಾದ. * ₹1 ಲಕ್ಷದ ಸ್ಮಾರ್ಟ್ ಕಾರ್ಡ್: ಗರಿಷ್ಠ 10 ಮಂದಿಗೆ ವರ್ಷಕ್ಕೆ 12 ಬಾರಿ ದರ್ಶನ ಪ್ರತಿ ಭೇಟಿಗೆ 10 ಲಡ್ಡು ಪ್ರಸಾದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT