ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಡಹಬ್ಬ ಉದ್ಘಾಟನೆ: ಈ ಬಾರಿಯೂ ಸಾಹಿತಿಗೇ ಮಣೆ

ಸಾಹಿತ್ಯ ವಲಯಕ್ಕೆ ಸಿದ್ದರಾಮಯ್ಯ ಆದ್ಯತೆ; ಬಿಜೆಪಿ ಸರ್ಕಾರದಲ್ಲಿ ಶ್ರೀಗಳಿಗೆ ಅವಕಾಶ
Published : 21 ಸೆಪ್ಟೆಂಬರ್ 2024, 6:10 IST
Last Updated : 21 ಸೆಪ್ಟೆಂಬರ್ 2024, 6:10 IST
ಫಾಲೋ ಮಾಡಿ
Comments

ಮೈಸೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯ ಗೌರವವನ್ನು ಈ ಬಾರಿಯೂ ಸಾಹಿತ್ಯ ವಲಯದವರಿಗೇ ನೀಡಿದೆ.

ಅದ್ದೂರಿ ಹಾಗೂ ವಿಜೃಂಭಣೆಯ ಹಬ್ಬಕ್ಕೆ ಹಂ.ಪ.ನಾಗರಾಜಯ್ಯ ಚಾಲನೆ ನೀಡಲಿದ್ದಾರೆ. ಅವರು ಕಾರ್ಯಕ್ರಮವೊಂದರಲ್ಲಿ ಮೈಸೂರಿನಲ್ಲಿದ್ದಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ. ನಾಗರಾಜಯ್ಯ ಇಲ್ಲಿನ ಮಹಾರಾಜ ಕಾಲೇಜಿನ ಹಿರಿಯ ವಿದ್ಯಾರ್ಥಿ. ಚಿಕ್ಕಬಳ್ಳಾಪುರ ಜಿಲ್ಲೆಯ ಹಂಪಸಂದ್ರದ ಅವರು, ‘ಹಂಪನಾ’ ಎಂದೇ ಪ್ರಸಿದ್ಧರು. ಹಿಂದಿನ ವರ್ಷ ಚಲನಚಿತ್ರ ಸಂಗೀತ ನಿರ್ದೇಶಕ, ಚಿತ್ರ ಸಾಹಿತಿ ಹಂಸಲೇಖ ಅವರಿಗೆ ಅವಕಾಶ ಕೊಡಲಾಗಿತ್ತು.

ಬಿಜೆಪಿ ಸರ್ಕಾರದಲ್ಲಿ ಮಠಾಧೀಶರಿಗೂ ಅವಕಾಶ ನೀಡಲಾಗಿತ್ತು. ಸಿದ್ದರಾಮಯ್ಯ ಸರ್ಕಾರದಲ್ಲಿ ಮನ್ನಣೆ ಕೊಟ್ಟಿಲ್ಲ. ಈ ಸಲ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯನ್ನು ಆಹ್ವಾನಿಸಬೇಕೆಂದು ಬಿಜೆಪಿ ಪ್ರತಿಪಾದಿಸಿತ್ತು. ಶಾಸಕ ಟಿ.ಎಸ್. ಶ್ರೀವತ್ಸ ಉನ್ನತ ಮಟ್ಟದ ಸಭೆಯಲ್ಲೂ ಪ್ರಸ್ತಾಪಿಸಿದ್ದರು. ಹಿಂದಿನ ವರ್ಷವೂ ಅವರ ಹೆಸರು ಕೇಳಿಬಂದಿತ್ತು.

ಹಲವು ವರ್ಗದವರಿಗೆ ಅವಕಾಶ: ಉತ್ಸವವನ್ನು ಇದುವರೆಗೆ ಲೇಖಕರು, ರಾಜಕಾರಣಿಗಳು, ಪ್ರಗತಿಪರರು, ಮಠಾಧೀಶರು, ನಟರು, ಸ್ವಾಮೀಜಿಗಳು ಉದ್ಘಾಟಿಸಿದ್ದಾರೆ. 2015ರಲ್ಲಿ ರೈತ, ‌ಎಚ್.ಡಿ.ಕೋಟೆ ತಾಲ್ಲೂಕು ಮಲಾರ ಕಾಲೊನಿಯ ಪುಟ್ಟಯ್ಯ ಉದ್ಘಾಟಿಸಿದ್ದರು. ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೃಷಿಕರಿಗೆ ಆತ್ಮಸ್ಥೈರ್ಯ ತುಂಬುವುದೇ ಉದ್ದೇಶ ಎಂದು ಸರ್ಕಾರ ಆಗ ಹೇಳಿತ್ತು.

2022ರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಿದ್ದರು. ದೇಶದ ಪ್ರಥಮ ಪ್ರಜೆಯಾದ ಅವರು ಬುಡಕಟ್ಟು ಮಹಿಳೆಯೂ ಆಗಿದ್ದ ಕಾರಣಕ್ಕೆ ಅವರ ಆಯ್ಕೆಯು ಇಡೀ ದೇಶದ ಗಮನಸೆಳೆದಿತ್ತು. ಹಿಂದೆ ದಸರೆಯನ್ನು ರಾಜ್ಯಪಾಲರು ಉದ್ಘಾಟಿಸಿದ್ದೂ ಇದೆ. ನಟರಾದ ಡಾ.ರಾಜ್‌ಕುಮಾರ್‌, ರೆಬಲ್‌ ಸ್ಟಾರ್ ಅಂಬರೀಷ್, ಬಿ.ಸರೋಜಾದೇವಿ ಅವರಿಗೂ ಈ ಗೌರವ ದೊರೆತಿದೆ.

2021ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ 2020ರಲ್ಲಿ ಕೊರೊನಾ ಮುಂಚೂಣಿ ಯೋಧರಿಗೆ ಗೌರವ ಸಲ್ಲಿಸಲು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್‌ ಅವರಿಗೆ ಉದ್ಘಾಟನೆಯ ಗೌರವವನ್ನು ಸರ್ಕಾರ ನೀಡಿತ್ತು.

‘ರಾಜಧನ’ ರದ್ದಾದ ಹಿನ್ನೆಲೆಯಲ್ಲಿ ಮೈಸೂರು ಅರಸರು ಸಾರ್ವಜನಿಕ ದಸರಾ ಆಚರಣೆ ನಿಲ್ಲಿಸಿದ ನಂತರ ಸರ್ಕಾರವೇ ‘ನಾಡಹಬ್ಬ’ದ ಹೆಸರಿನಲ್ಲಿ ಮಹೋತ್ಸವ ಆಚರಿಸುತ್ತಿದೆ. ದಸರೆಯ ಕೊನೆಯ ದಿನ, ಅಂದರೆ ವಿಜಯದಶಮಿಯಂದು ನಡೆಯುವ ‘ಜಂಬೂಸವಾರಿ’ಯನ್ನು ಮುಖ್ಯಮಂತ್ರಿ, ‘ಪಂಜಿನ ಕವಾಯತ’ನ್ನು ರಾಜ್ಯಪಾಲರು ಉದ್ಘಾಟಿಸುವುದು ಸಂಪ್ರದಾಯ. ಉಸ್ತುವಾರಿ ಸಚಿವರು ಉದ್ಘಾಟಿಸಿದ್ದೂ ಇದೆ.

1993ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪನವಾದಾಗ ದಸರೆ ಆಚರಿಸುವುದು ಬೇಡ ಎಂಬ ಕೂಗು ಕೇಳಿ ಬಂದಿತ್ತು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಕನ್ನಡದ ವರನಟ ರಾಜ್‌ಕುಮಾರ್ ಅವರನ್ನೇ ಉದ್ಘಾಟಕರಾಗಿ ಆಹ್ವಾನಿಸುವ ಮೂಲಕ ವಿರೋಧವನ್ನು ತಣ್ಣಗಾಗಿಸಿದ್ದರು. ಅಲ್ಲಿಂದ ಕಲಾವಿದರು, ಸಾಹಿತಿಗಳನ್ನು ಆಹ್ವಾನಿಸುವ ಸಂಪ್ರದಾಯ ಆರಂಭವಾಯಿತು.

ದೇವೇಗೌಡರಿಂದ ‘ಪಾಲ್ಗೊಳ್ಳುವಿಕೆ’ ಪ್ರಾರಂಭ
ಹಿಂದೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸುತ್ತಿರಲಿಲ್ಲ. 1995ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡರು ಪಾಲ್ಗೊಂಡಿದ್ದರು. 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ದೇವೇಗೌಡರ ನಂತರ ಪಾಲ್ಗೊಂಡಿದ್ದಲ್ಲದೆ ಸತತ ಮೂರು ವರ್ಷವೂ ಭಾಗವಹಿಸಿದ್ದರು. ಬಳಿಕ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಜಗದೀಶ ಶೆಟ್ಟರ ಸಂಪ್ರದಾಯ ಮುಂದುವರಿಸಿದರು. ಮೈಸೂರಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 2013ರಿಂದ 2017ರವರೆಗೆ ಸತತ ಐದು ವರ್ಷವೂ ಉದ್ಘಾಟನೆ ಹಾಗೂ ಜಂಬೂ ಸವಾರಿಯಲ್ಲಿ ಭಾಗವಹಿಸಿ ದಾಖಲೆ ಬರೆದಿದ್ದರು. 2018ರಲ್ಲಿ ಎಚ್.ಡಿ. ಕುಮಾರಸ್ವಾಮಿ 2019 2020ರಲ್ಲಿ ಮತ್ತೆ ಬಿ.ಎಸ್. ಯಡಿಯೂರಪ್ಪ ಅವರು ಎರಡು ಬಾರಿ ಬಂದಿದ್ದರು. 2022ರಲ್ಲಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಮತ್ತೆ 2023ರಿಂದ ಸಿದ್ದರಾಮಯ್ಯು ಪಾಲ್ಗೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT