ಮೈಸೂರು: ‘ನಗರದಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು, ಗಾಳಿಯ ಗುಣಮಟ್ಟ ತೀವ್ರಗತಿಯಲ್ಲಿ ಕುಸಿಯುತ್ತಿದೆ’ ಎಂದು ‘ಗ್ರೀನ್ ಪೀಸ್ ಇಂಡಿಯಾ ಸಂಸ್ಥೆ’ಯ ಸಂಶೋಧನಾ ವರದಿಯು ತಿಳಿಸಿದೆ. ಇದು, ವಾಯು ಮಾಲಿನ್ಯದಿಂದ ನಗರದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದೆ.
‘ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ, ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಸುತ್ತುವರಿದಿರುವ ಮೈಸೂರಿನ ಗಾಳಿ ಶುದ್ಧವಾಗಿರಬೇಕಿತ್ತು. ಆದರೆ, ಮಾಲಿನ್ಯಕಾರಕ ಕಣಗಳಾದ ಪಿ.ಎಂ. (ಪರ್ಟಿಕ್ಯುಲೇಟ್ ಮ್ಯಾಟರ್– ಗಾಳಿಯಲ್ಲಿರುವ ದೂಳಿನ ಕಣಗಳ ಪ್ರಮಾಣ) 2.5 (ಸೂಕ್ಷ್ಮ) ಹಾಗೂ ಪಿ.ಎಂ. 10 (ಅತಿಸೂಕ್ಷ್ಮ) ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ’ ಎಂದು ಸಂಸ್ಥೆಯ ‘ಸ್ಪೇರ್ ದಿ ಏರ್–2’ ವರದಿಯು ತಿಳಿಸಿದೆ.
‘ವಾಹನಗಳು ಉಗುಳುವ ಹೊಗೆ, ರಸ್ತೆಯ ದೂಳು, ಹೊಸ ಕಟ್ಟಡ ನಿರ್ಮಾಣ ಮತ್ತು ಹಳೆ ಕಟ್ಟಡಗಳ ನೆಲಸಮ, ಕೈಗಾರಿಕೆಗಳ ಮಾಲಿನ್ಯ ಮತ್ತು ಕಟ್ಟಿಗೆ, ಪ್ಲಾಸ್ಟಿಕ್ ಉರಿಸುವಿಕೆ ಮೊದಲಾದ ಕಾರಣಗಳಿಂದ ಮಾಲಿನ್ಯಕಾರಕಗಳು ಗಾಳಿಯನ್ನು ಸೇರುತ್ತಿವೆ’ ಎಂದು ಮಾಹಿತಿ ನೀಡಿದೆ.
‘ಬೆಂಗಳೂರು ಹಾಗೂ ಮಂಗಳೂರು ನಗರದಲ್ಲೂ ಇದೇ ಪರಿಸ್ಥಿತಿ ಇದೆ. ಅದನ್ನು ತಗ್ಗಿಸಲು ಕ್ರಮವಹಿಸದಿದ್ದರೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.
ಸಂಸ್ಥೆಯ ಸಂಶೋಧನಾ ತಂಡದ ಆಕಾಂಕ್ಷಾ ಸಿಂಗ್, ‘ವಿಶಾಖಪಟ್ಟಣದಲ್ಲಿ ಗಾಳಿಯಲ್ಲಿ ಪಿ.ಎಂ. 2.5 ಕಣಗಳ ಪ್ರಮಾಣ 10 ಪಟ್ಟು, ಪಿಎಂ 10 ಕಣಗಳ ಪ್ರಮಾಣ 9 ಪಟ್ಟು ಹೆಚ್ಚಿದ್ದರೆ, ಬೆಂಗಳೂರಿನಲ್ಲಿ ಕ್ರಮವಾಗಿ 6 ಪಟ್ಟು ಹಾಗೂ 4.5 ಪಟ್ಟು ಹೆಚ್ಚಿದೆ. ಮಂಗಳೂರು, ಹೈದರಾಬಾದ್, ವಿಜಯವಾಡ, ಕೊಚ್ಚಿ, ಅಮರಾವತಿ ಮತ್ತು ಚೆನ್ನೈನಲ್ಲಿ 6ರಿಂದ 7 ಪಟ್ಟು ಹೆಚ್ಚಾಗಿದೆ. ಪಿ.ಎಂ. 10 ಕಣಗಳ ಮಟ್ಟವು ಮೈಸೂರು ಮತ್ತು ಪುದುಚೇರಿ ನಗರಗಳಲ್ಲಿ 4ರಿಂದ 5 ಪಟ್ಟು ಹೆಚ್ಚಿದೆ. ಈ ಕಣಗಳ ಪ್ರಮಾಣ ವಾರ್ಷಿಕ 1.5ರಿಂದ 2.5ರಷ್ಟು ಸರಾಸರಿ ಹೆಚ್ಚಳವಾಗುತ್ತಿದೆ’ ಎಂದು ವರದಿಯಲ್ಲಿ ವಿವರಿಸಿದ್ದಾರೆ.
10 ನಗರಗಳಲ್ಲಿ ಅಧ್ಯಯನ
‘ಸಂಸ್ಥೆಯು ದಕ್ಷಿಣ ಭಾರತದ 10 ಪ್ರಮುಖ ನಗರಗಳಲ್ಲಿ ಸಂಶೋಧನೆ ನಡೆಸಿದೆ. ತೆಲಂಗಾಣದ ಹೈದರಾಬಾದ್ ತಮಿಳುನಾಡಿನ ಚೆನ್ನೈ ಕೇರಳದ ಕೊಚ್ಚಿ ಆಂಧ್ರದ ವಿಶಾಖಪಟ್ಟಣ ಅಮರಾವತಿ ವಿಜಯವಾಡ ಹಾಗೂ ಪುದುಚೇರಿಯಲ್ಲಿ ಗಾಳಿಯ ಗುಣಮಟ್ಟವನ್ನು ವಿಶ್ಲೇಷಿಸಿದೆ. ಇಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಮಾರ್ಗಸೂಚಿಗಿಂತ 9ರಿಂದ 10 ಪಟ್ಟು ಹೆಚ್ಚು ಮಾಲಿನ್ಯಕಾರಕ ಕಣಗಳು ಈ ನಗರಗಳ ಗಾಳಿಯಲ್ಲಿವೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.