ಮೈಸೂರು: ಕಲಾಮಂದಿರದ ಕಿರುರಂಗಮಂದಿರದಲ್ಲಿ ‘ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ’ಯು ಮಾರ್ಚ್ 22ರಿಂದ 27ರವರೆಗೆ ‘ಮೈಸೂರು ರಂಗ ಹಬ್ಬ’ ಆಯೋಜಿಸಿದ್ದು, ರಂಗಾಸಕ್ತರಿಗೆ ರಸದೌತಣ ಸಿಗಲಿದೆ.
ರಂಗಕರ್ಮಿ ಪ್ರಸನ್ನ 22ರ ಬುಧವಾರ ಸಂಜೆ 6.30ಕ್ಕೆ ಉತ್ಸವಕ್ಕೆ ಚಾಲನೆ ನೀಡಲಿದ್ದು, ರಂಗಕರ್ಮಿ ಮಂಡ್ಯ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆರು ದಿನಗಳ ಉತ್ಸವದಲ್ಲಿ ಮೈಸೂರಿನ ರಂಗತಂಡಗಳೇ ನಾಟಕ ಪ್ರದರ್ಶನ ನೀಡುತ್ತಿರುವುದು ‘ರಂಗ ಯುಗಾದಿ’ಯ ವಿಶೇಷ! ನಾಟಕ ಪ್ರದರ್ಶನ ಜೊತೆಗೆ ವಿಚಾರ ಸಂಕಿರಣ ಮತ್ತು ವಿಶ್ವ ರಂಗಭೂಮಿ ದಿನದ ಆಚರಣೆಯೂ ಇದೆ.
ಮಾರ್ಚ್ 26ರಂದು ಬೆಳಿಗ್ಗೆ 10.30ಕ್ಕೆ ‘ಹವ್ಯಾಸಿ ರಂಗಭೂಮಿ- ನಿನ್ನೆ, ಇಂದು, ನಾಳೆ’ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ರಂಗಕರ್ಮಿಗಳಾದ ಎಚ್.ಎಸ್.ಉಮೇಶ್, ನಾಟಕಕಾರ ಹೊರೆಯಾಲ ದೊರೆಸ್ವಾಮಿ ವಿಚಾರ ಮಂಡಿಸಲಿದ್ದಾರೆ. ಎಚ್.ಆರ್.ಅಧ್ಯಾಪಕ್, ಬಿ.ಎಸ್.ಸತೀಶ್, ಎನ್.ಎಸ್.ಶ್ರೀಧರ್, ಕೆ.ಆರ್.ಸುಮತಿ, ಮೈಮ್ ರಮೇಶ್, ನಾಗೇಂದ್ರ ಕುಮಾರ್, ಎನ್. ಧನಂಜಯ, ನಾಗಭೂಷಣ್, ರವಿ ಪ್ರಸಾದ್ ಸೇರಿದಂತೆ ರಂಗಕರ್ಮಿಗಳು ಪ್ರತಿಕ್ರಿಯೆ ನೀಡಲಿದ್ದಾರೆ. ರಾಜಶೇಖರ ಕದಂಬ ಅಧ್ಯಕ್ಷತೆ ಹಾಗೂ ಮಾಧವ್ ಖರೆ ಸಂಕಿರಣವನ್ನು ನಿರೂಪಿಸಲಿದ್ದಾರೆ.
ಸಮಾರೋಪವು 27ರಂದು ಸಂಜೆ 6 ನಡೆಯಲಿದ್ದು, ರಂಗಕರ್ಮಿ ಸಿ.ಬಸವಲಿಂಗಯ್ಯ ಸಮಾರೋಪ ಭಾಷಣ ಮಾಡುವರು. ರಂಗಕರ್ಮಿ ಇಂದಿರಾ ನಾಯರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಹಾಗೂ ವಿಶ್ವ ರಂಗಭೂಮಿ ದಿನದ ಸಂದೇಶವನ್ನು ರಂಗವಲ್ಲಿ ಬಿ.ರಾಜೇಶ್ ವಾಚಿಸುವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.