ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕೆಂಚನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವನ್ಯಜೀವಿ ಸಂರಕ್ಷಣೆ ಸಂಸ್ಥೆಯಿಂದ ರಣಹದ್ದುಗಳ ಸಂರಕ್ಷಣೆ ಕುರಿತು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ರಾಜ್ ಕುಮಾರ್ ಮಾತನಾಡಿ, ‘ದಕ್ಷಿಣ ಭಾರತದಲ್ಲಿ ನಾಲ್ಕು ಜಾತಿಯ ರಣಹದ್ದುಗಳಿವೆ. ಕೆಂಪುತಲೆ, ಬಿಳಿಬೆನ್ನಿನ, ಭಾರತೀಯ ಹಾಗೂ ಈಜಿಪ್ಟಿಯನ್ ರಣಹದ್ದುಗಳನ್ನು ಕಾಣಬಹುದಾಗಿದ್ದು, ನಿಸರ್ಗ ಸಮತೋಲನ ಹಾಗೂ ಆರೋಗ್ಯಕರ ಪರಿಸರಕ್ಕಾಗಿ ರಣಹದ್ದುಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ’ ಎಂದು ಹೇಳಿದರು.
ಪಕ್ಷಿಗಳ ಪ್ರಾಮುಖ್ಯತೆ, ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಬಂಧ, ಆಹಾರ ಸರಪಳಿ, ವನ್ಯಜೀವಿ– ಮಾನವನ ಸಂಘರ್ಷ ಸೇರಿದಂತೆ ಅನೇಕ ವಿಷಯಗಳ ಕುರಿತು ಶಾಲಾ ಮಕ್ಕಳಿಗೆ ತಿಳಿಸಿದರು.
ವಿದ್ಯಾರ್ಥಿಗಳು ರಣಹದ್ದು ಕುರಿತು ಚಿತ್ರ ಬಿಡಿಸಿದರು. ಡಬ್ಲ್ಯೂಸಿಎಫ್‌ನ ಮಾರ್ಕ್ ಸ್ಟೀವ್, ಜಗದೀಶ್, ವೀ ಟು ಸಾಫ್ಟ್‌ನ ಕಾರ್ತಿಕೇಯನ್, ದೀಕ್ಷಿತ್, ಅನಘ, ದಿವ್ಯ, ಗೀತಾ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶಂಕರ ದುರ್ಗಾ ಪ್ರಸಾದ್, ರಾಜ ನಾಯಕ, ಅಣ್ಣಯ್ಯಸ್ವಾಮಿ ಇದ್ದರು.
‘ಶೇ 99ರಷ್ಟು ರಣಹದ್ದು ಕಣ್ಮರೆ’ ‘ರಣಹದ್ದುಗಳು ಸತ್ತ ವನ್ಯಜೀವಿಗಳ ಕಳೇಬರ ತಿಂದು ಎಲ್ಲ ರೀತಿಯ ವೈರಾಣು ಕ್ರಿಮಿಗಳು ಹಾಗೂ ಸೂಕ್ಷ್ಮಾಣು ಜೀವಿಗಳನ್ನು ಜೀರ್ಣಿಸಿಕೊಂಡು ಪರಿಸರ ಸ್ವಚ್ಛತಾ ಕರ್ಮಿಯಾಗಿ ಕಾರ್ಯ ನಿರ್ವಹಿಸುತ್ತವೆ. ಆದರೆ ಹಸುವಿಗೆ ನೀಡುವ ಡೈಕ್ಲೋಫಿನಾಕ್ ಎಂಬ ನೋವು ನಿವಾರಕ ಔಷಧಿಯಿಂದ ನಾವು ಈಗಾಗಲೇ ಶೇ 99ರಷ್ಟು ರಣಹದ್ದುಗಳನ್ನು ಕಳೆದುಕೊಂಡಿದ್ದೇವೆ’ ಎಂದು ರಾಜ್ ಕುಮಾರ್ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.