ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಬೆಂಗಳೂರು ದಶಪಥ ಮಾರ್ಚ್‌ಗೆ ಉದ್ಘಾಟನೆ: ಪ್ರತಾಪ್‌ ಸಿಂಹ

ಸಂಸದ ಪ್ರತಾಪ ಸಿಂಹ ಮಾಹಿತಿ
Last Updated 13 ಫೆಬ್ರುವರಿ 2023, 12:21 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರು–ಬೆಂಗಳೂರು ದಶಪಥ ಎಕ್ಸ್‌ಪ್ರೆಸ್‌ ವೇಯನ್ನು ಮಾರ್ಚ್‌ 2ನೇ ಅಥವಾ 3ನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಧಿಕೃತವಾಗಿ ಉದ್ಘಾಟನೆ ಮಾಡಿಸಲಾಗುವುದು’ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಹೆದ್ದಾರಿಯು ಬಹುತೇಕ ಪೂರ್ಣಗೊಂಡಿದೆ. ಬೂದನೂರು ಹಾಗೂ ಇಂಡವಾಳು ಬಳಿ ಕಾಮಗಾರಿ ಪ್ರಗತಿಯಲ್ಲಿದೆ. ಉದ್ಘಾಟನೆ ಕಾರ್ಯಕ್ರಮವನ್ನು ಮಂಡ್ಯದಲ್ಲಿ ಆಯೋಜಿಸುವ ಉದ್ದೇಶವಿದೆ’ ಎಂದು ಹೇಳಿದರು.

‘ಈ ಹೆದ್ದಾರಿಯಲ್ಲಿ ಕಿ.ಮೀ.ಗೆ ಇಂತಿಷ್ಟು ಟೋಲ್ ನಿಗದಿ‍‍ಪಡಿಸಲಾಗುತ್ತದೆ. ಮಾಮೂಲಿ ರಸ್ತೆಗಿಷ್ಟು, ಎಲಿವೇಟೆಡ್ ಫ್ಲೈಒವರ್‌ಗೆ ಇಷ್ಟೆಂದು ಇರುತ್ತದೆ. ಸದ್ಯಕ್ಕೆ ಬೆಂಗಳೂರಿನಿಂದ ನಿಡಘಟ್ಟವರೆಗೆ ಹೆದ್ದಾರಿ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತಗೊಂಡಿದ್ದು, ₹ 125 ಟೋಲ್ ಕಟ್ಟಬೇಕಾಗುತ್ತದೆ. ಉಳಿದದ್ದೂ ಶುರುವಾದರೆ, ಟೋಲ್‌ ಹೆಚ್ಚಾಗಲಿದೆ. ನನ್ನ ತಿಳಿವಳಿಕೆಯ ಪ್ರಕಾರ, ಒಟ್ಟು ₹250 (ಹೋಗಿ ಬರಲು) ಟೋಲ್‌ ತುಂಬಬೇಕಾಗಬಹುದು. ಒಂದೇ ದಿನದಲ್ಲಿ ಹೋಗಿ ಬಂದವರಿಗೆ ಕಡಿಮೆಯಾಗಲಿದೆ. ಆದರೆ, ಬಹಳಷ್ಟು ಸಮಯವನ್ನು ಉಳಿತಾಯ ಮಾಡಬಹುದಾಗಿದೆ’ ಎಂದು ತಿಳಿಸಿದರು.

‘ಟೊಲ್ ನಿಗದಿ ವಿಚಾರದಲ್ಲಿ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಅಂದಾಜಿನ ಪಟ್ಟಿ. ಫ್ಲೈಓವರ್‌ಗಳು ಬಂದಾಗ ಸಾಮಾನ್ಯವಾಗಿ ಟೋಲ್ ಹೆಚ್ಚಾಗುತ್ತದೆ. ಈ ರಸ್ತೆಯಲ್ಲೂ ಫ್ಲೈ ಓವರ್‌ಗಳು ಇರುವ ಕಾರಣ ಅದರಂತೆ ನಿಗದಿಪಡಿಸಲಾಗುತ್ತದೆ’ ಎಂದರು.

‘ರಾಷ್ಟ್ರೀಯ ಹೆದ್ದಾರಿಗಳಿಗೆ ಯಾವುದೇ ವ್ಯಕ್ತಿಗಳ ಹೆಸರಿಡುವ ಪದ್ಧತಿ ಇಲ್ಲ. ಕರ್ನಾಟಕದಲ್ಲಿ ಜಿಲ್ಲೆಗಳಿಗೂ ಹೆಸರು ಇಡುವ ಪದ್ಧತಿ ಇಲ್ಲ. ಇದನ್ನು, ದಶಪಥಕ್ಕೆ ವ್ಯಕ್ತಿಗಳ‌ ಹೆಸರಿಡಿ ಎಂದು ಸಲಹೆ ಕೊಡುತ್ತಿರುವವರು ತಿಳಿದುಕೊಳ್ಳಲಿ. ನಮ್ಮೆಲ್ಲ ಜಿಲ್ಲೆಗಳ ಜನರೂ ಭಕ್ತಿಯಿಂದ ನೋಡುವುದು ಕಾವೇರಿ ಮಾತೆಯನ್ನು. ಮಗ ದೊಡ್ಡವನಾ, ತಾಯಿ ದೊಡ್ಡವಳಾ ಎನ್ನುವ ಚರ್ಚೆ ಬೇಡ. ತಾಯಿಯೇ ಶ್ರೇಷ್ಠ. ಹೀಗಾಗಿ, ಸುಮ್ಮನೆ ಯಾವ್ಯಾವ ಹೆಸರನ್ನೋ ಹರಿಬಿಡಬೇಡಿ. ಜೀವನದಿ ಕಾವೇರಿ ಹೆಸರಿಡಲು ಅವಕಾಶ ಮಾಡಿಕೊಡಿ’ ಎಂದು ಕೋರಿದರು.

‘ನಾವು ಮಹಾರಾಜರ ಕುಟುಂಬಕ್ಕೆ ಎಷ್ಟು ಗೌರವ ಕೊಡಬೇಕೋ ಕೊಟ್ಟಿದ್ದೇವೆ. ಈಗ ರಸ್ತೆಯ ನಾಮಕರಣ ವಿಚಾರದಲ್ಲಿ ಅನಗತ್ಯ ವಿವಾದ ಮಾಡುವುದು ಬೇಡ’ ಎಂದರು.

‘ಬೆಂಗಳೂರು-ಮೈಸೂರು ಹೆದ್ದಾರಿಯ ನಡುವಿನ ಚನ್ನಪಟ್ಟಣದ ಬಳಿ 30 ಏಕರೆಯಲ್ಲಿ ದ್ವೀಪದ ಮಾದರಿಯಲ್ಲಿ ‘ರೆಸ್ಟ್ ಏರಿಯಾ’ ನಿರ್ಮಿಸಲಿದ್ದೇವೆ. ಇದಕ್ಕೆ 6 ತಿಂಗಳು ಅಥವಾ ವರ್ಷ ಬೇಕಾಗುತ್ತದೆ. ಅಲ್ಲಿವರೆಗೆ, ಅಡ್ಜಸ್ಟ್ ಮಾಡಿಕೊಳ್ಳಿ. ರೆಸ್ಟ್‌ ಏರಿಯಾ ಸಿದ್ಧವಾದರೆ ಎಲ್ಲ ಬಗೆಯ ಹೋಟೆಲ್‌ಗಳೂ ಅಲ್ಲಿ ಬರಲಿವೆ. ಚನ್ನಪಟ್ಟಣ ಬೊಂಬೆ, ಮೈಸೂರು ರೇಷ್ಮೆ ಸೀರೆ ಮೊದಲಾದ ನಾಡಿನ ಬ್ರ್ಯಾಂಡ್‌ ಪದಾರ್ಥಗಳ ಮಾರಾಟವೂ ಇರುತ್ತದೆ. ಹಲವು ಮಳಿಗೆಗಳು ಇರಲಿವೆ. ಅಲ್ಲಿವೆ ಸಮರ್ಪಕವಾದ ಪ್ರವೇಶ ಹಾಗೂ ನಿರ್ಗಮನ ವ್ಯವಸ್ಥೆಯನ್ನು ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT