ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಅದ್ದೂರಿ ತಕ್ಕಂತೆ ಕಾರ್ಯಕ್ರಮಕ್ಕೆ ಸಿದ್ಧತೆ

ದಸರಾ ಉಪ ಸಮಿತಿಗಳಿಗೆ ಉಸ್ತುವಾರಿ ಸಚಿವ ಸೂಚನೆ
Published : 4 ಸೆಪ್ಟೆಂಬರ್ 2024, 16:18 IST
Last Updated : 4 ಸೆಪ್ಟೆಂಬರ್ 2024, 16:18 IST
ಫಾಲೋ ಮಾಡಿ
Comments

ಮೈಸೂರು: ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅದ್ದೂರಿಯಾಗಿ ಆಚರಿಸಲು ಎಲ್ಲ 19 ಉಪ ಸಮಿತಿಗಳೂ ವಿಭಿನ್ನವಾದ ಕಾರ್ಯಕ್ರಮಗಳನ್ನು ರೂಪಿಸಬೇಕು. ಪ್ರವಾಸಿಗರೊಂದಿಗೆ ಸ್ಥಳೀಯರನ್ನೂ ಆಕರ್ಷಿಸುವಂತಿರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸೂಚಿಸಿದರು.

ಇಲ್ಲಿನ ಅರಮನೆ ಮಂಡಳಿ ಸಭಾಂಗಣದಲ್ಲಿ ಬುಧವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಸಾಂಸ್ಕೃತಿಕ ಸೇರಿದಂತೆ ಪ್ರಮುಖ ಕಾರ್ಯಕ್ರಮಗಳನ್ನು ಸೆ.20ರೊಳಗೆ ಅಂತಿಮಗೊಳಿಸಬೇಕು. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕಂತೆ ರೂಪಿಸಬೇಕು. ಮಹಿಳಾ ಮತ್ತು ಮಕ್ಕಳ ದಸರೆಯಲ್ಲಿ ಮೂಢನಂಬಿಕೆ ಹಾಗೂ ದೌರ್ಜನ್ಯಗಳ ವಿರುದ್ಧ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

‘ಹಣ ಕೊಟ್ಟು ಬಂದವರು ಎಲ್ಲೆಲ್ಲೋ ಕೂರುವಂತಹ ಸ್ಥಿತಿ ಈ ಬಾರಿ ಆಗದಂತೆ ನೋಡಿಕೊಳ್ಳಬೇಕು. ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಪಡೆದವರಿಗೆ ಆಸನಗಳ ವ್ಯವಸ್ಥೆ ಸಮರ್ಪಕವಾಗಿರಬೇಕು’ ಎಂದು ನಿರ್ದೇಶನ ನೀಡಿದರು.

ವಿಶೇಷ ಹಾಡು: ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಮಾತನಾಡಿ, ‘ಉತ್ಸವದ ಉದ್ಘಾಟಕರ ಹೆಸರು ಅಂತಿಮವಾದ ಬಳಿಕ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಲಾಗುವುದು. ದಸರೆಯ ವಿಶೇಷ ಹಾಡೊಂದನ್ನೂ ಸಿದ್ಧಪಡಿಸಲಾಗುತ್ತಿದೆ’ ಎಂದು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮಾತನಾಡಿ, ‘ದಸರಾ ಉದ್ಘಾಟಿಸಲು ಆಗಮಿಸುವ ಅತಿಥಿಗಳು, ಪಾಲ್ಗೊಳ್ಳುವ ಗಣ್ಯರಿಗೆ ಈ ಬಾರಿ ಚಾಮುಂಡೇಶ್ವರಿ ಮತ್ತು ಅಂಬಾರಿ ಇರುವ ಸ್ಮರಣಿಕೆ ನೀಡಲಾಗುವುದು’ ಎಂದರು.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾತನಾಡಿ, ‘ಪಂಜಿನ ಕವಾಯಿತು ಪ್ರದರ್ಶನದಲ್ಲಿ ಹಿಂದೆ 1,500 ಮಂದಿ ಪಾಲ್ಗೊಳ್ಳುತ್ತಿದ್ದರು. ಈ ಬಾರಿ ಒಂದಿಷ್ಟು ಕಡಿತ ಮಾಡಲಾಗುವುದು’ ಎಂದು ಹೇಳಿದರು.

ಸ್ತಬ್ಧಚಿತ್ರ ಉಪ ಸಮಿತಿ ಕಾರ್ಯಾಧ್ಯಕ್ಷ ಎ.ಎಸ್.ರಂಜಿತ್ ಕುಮಾರ್, ‘ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸುವುದಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳ ಸಿಇಒಗಳಿಗೆ ಪತ್ರ ಬರೆಯಲಾಗಿದೆ. ಒಟ್ಟು 45 ಸ್ತಬ್ಧಚಿತ್ರಗಳು ಇರಲಿವೆ’ ಎಂದು ತಿಳಿಸಿದರು.

ಕ್ರೀಡಾಕೂಟಕ್ಕೆ ₹ 6.32 ಕೋಟಿಗೆ ಪ್ರಸ್ತಾವ: ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಭಾಸ್ಕರ್ ನಾಯಕ್ ಮಾತನಾಡಿ, ‘ಹೊರಾಂಗಣ ಮತ್ತು ಒಳಾಂಗಣದಲ್ಲಿ 32 ಕ್ರೀಡೆಗಳು ನಡೆಯಲಿವೆ. ಈ ಬಾರಿ ₹ 6.32 ಕೋಟಿಗೆ ಪ್ರಸ್ತಾಪ ಸಲ್ಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಯುವ ದಸರಾ ಉಪ ವಿಶೇಷಾಧಿಕಾರಿ ಎನ್.ವಿಷ್ಣುವರ್ಧನ್ ಮಾತನಾಡಿ, ‘ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಾರ್ಯಕ್ರಮ ನಡೆಸಲಾಗುವುದು. ಅಲ್ಲಿ ಆಯ್ಕೆಯಾಗುವ ವಿಜೇತ ತಂಡಗಳಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಯುವ ದಸರೆಯಲ್ಲಿ ಅವಕಾಶ ಕಲ್ಪಿಸಲಾಗುವುದು. ಈ ಬಾರಿಯೂ ಸ್ಥಳೀಯರೊಂದಿಗೆ ಹೆಸರಾಂತ ಕಲಾವಿದರನ್ನು ಆಹ್ವಾನಿಸಲಾಗುವುದು’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್ ಅಂಗಡಿ, ‘ಕುಪ್ಪಣ್ಣ ಪಾರ್ಕ್‌ನಲ್ಲಿ ಈ ಬಾರಿಯೂ ಅತ್ಯಾಕರ್ಷಕ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುವುದು. 2–3 ದಿನಗಳಲ್ಲಿ ಥೀಮ್‌ ಅಂತಿಮಗೊಳಿಸಲಾಗುವುದು’ ಎಂದರು.

‘ಪುಸ್ತಕ ಮೇಳವನ್ನು ಈ ಬಾರಿ ಪ್ರಮುಖ ಸ್ಥಳದಲ್ಲಿ ಆಯೋಜಿಸಲು ಅವಕಾಶ ಕೊಡಬೇಕು. ಕಾಡಾ ಕಚೇರಿ ಅಥವಾ ರಂಗಾಯಣದಲ್ಲಿ ಆಯೋಜಿಸಿದರೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬರುವುದಿಲ್ಲ. ಓವೆಲ್‌ ಮೈದಾನದಂತಹ ಕಡೆ ಜಾಗ ಕಲ್ಪಿಸಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಕೋರಿದರು.

ಇದಕ್ಕೂ ಮುನ್ನ ಸಚಿವರು, ಅರಮನೆ ಆವರಣದಲ್ಲಿ ಪ್ರದಕ್ಷಿಣೆ ಹಾಕಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಮಾವುತರು ಹಾಗೂ ಕಾವಾಡಿಗಳ ಮಕ್ಕಳೊಂದಿಗೆ ವಾಲಿಬಾಲ್ ಆಡಿ ಖುಷಿಪಟ್ಟರು.

ಉಪ ಸಮಿತಿಗಳ ಸಭೆ ನಡೆಸಿದ ಸಚಿವ ಕಾರ್ಯಕ್ರಮಗಳ ವಿವರ ನೀಡಿದ ಅಧಿಕಾರಿಗಳು ಕ್ರೀಡಾಕೂಟಕ್ಕೂ ಸಿದ್ಧತೆ

ಲಲಿತ ಮಹಲ್ ಮೈದಾನದಲ್ಲಿ ರೆಸ್ಟೋರೆಂಟ್ ಮಾದರಿ ಮಳಿಗೆ

‘ಆಹಾರ ಮೇಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯಲಿದ್ದು ಈ ಬಾರಿ 175 ಮಳಿಗೆಗಳು ಇರಲಿವೆ. ಜತೆಗೆ ಲಲಿತಮಹಲ್ ಮೈದಾನದಲ್ಲಿ ರೆಸ್ಟೋರೆಂಟ್ ಮಾದರಿಯಲ್ಲಿ 15 ಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು. ಸ್ಥಳೀಯ ಹೋಟೆಲ್‌ನಿಂದ ಪಂಚತಾರಾ ಹೋಟೆಲ್‌ವರೆಗೆ ಯಾರು ಬೇಕಾದರೂ ಮಳಿಗೆ ಬಳಸಿಕೊಳ್ಳಬಹುದು. ರೆಸ್ಟೋರೆಂಟ್ ಮಾದರಿಯ ವ್ಯವಸ್ಥೆ ಅದಾಗಿರಲಿದೆ’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದರು.

ಸಚಿವರ ಸೂಚನೆಗಳು

* ಸ್ತಬ್ಧಚಿತ್ರಗಳು ನಮ್ಮ ಸಂಸ್ಕೃತಿ ಬಿಂಬಿಸಬೇಕು ಸಾಮಾಜಿಕ ಸಂದೇಶವನ್ನೂ ಸಾರುವಂತಿರಬೇಕು

* ಸಂವಿಧಾನದ ಸಂದೇಶ ಅದರ ಪೀಠಿಕೆಯ ಮಹತ್ವ ತಿಳಿಸುವ ಸ್ತಬ್ಧಚಿತ್ರವಿರಲಿ

* ಕೃಷಿ ಸಲಕರಣೆಗಳ ಪ್ರದರ್ಶನ ಆಯೋಜಿಸಿ ಸಬ್ಸಿಡಿ ಮೊದಲಾದ ಸೌಲಭ್ಯ ಬಗ್ಗೆ ತಿಳಿಸಿ

* ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಸ್ಪರ್ಧಿಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು

* ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು 

* ಕವಿಗೋಷ್ಠಿಯನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಿ ಯುವ ಕವಿಗಳಿಗೆ ಆದ್ಯತೆ ಕೊಡಬೇಕು

* ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು

* ಚಲನಚಿತ್ರೋತ್ಸವದಲ್ಲಿ ಸಾಮಾಜಿಕ ಕಳಕಳಿಯುಳ್ಳ ಕಲಾತ್ಮಕ ಚಿತ್ರಗಳನ್ನು ಪ್ರದರ್ಶಿಸಿ

ಪ್ರತಿದಿನ ಸಂಜೆ 4ರಿಂದಲೇ...

ಸಾಂಸ್ಕೃತಿಕ ಉಪ ಸಮಿತಿ ಉಪ ವಿಶೇಷಾಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ ‘ಅರಮನೆ ಹಾಗೂ ಇತರ 8 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅರಮನೆ ಆವರಣದಲ್ಲಿ ‘ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ’ ಕಾರ್ಯಕ್ರಮಕ್ಕೆ ಪ್ರೇಕ್ಷಕರ ಕೊರತೆ ಆಗುತ್ತದೆ. ಹೀಗಾಗಿ ಪ್ರತಿ ದಿನವೂ ಸಂಜೆ 4ರಿಂದ 6ರವರೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT