ಸುಧೀರ್‌ಕುಮಾರ್ ಎಚ್.ಕೆ.
ಮೈಸೂರು: ನಗರದ ಪಕ್ಷಿ ತಾಣ, ಸಂರಕ್ಷಿತ ಪ್ರದೇಶವಾದ ಲಿಂಗಾಂಬುಧಿ ಕೆರೆಯು ಪ್ಲಾಸ್ಟಿಕ್ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ಆವರಿಸತೊಡಗಿದೆ.
ದಂಡೆಯ ಮೇಲಿನ ಲಿಂಗಾಂಬುಧಿ ಪಾಳ್ಯ ರಸ್ತೆಯ ಎರಡೂ ಬದಿಗಳಲ್ಲಿ ಸುರಿಯಲಾಗುತ್ತಿರುವ ತ್ಯಾಜ್ಯ ಕೆರೆಯ ಒಡಲು ಸೇರುತ್ತಿದೆ. ರಾಜಕಾಲುವೆಗಳಲ್ಲಿ ಹರಿದುಬರುವ ಮಲಿನ ನೀರು ಕೆರೆಗೆ ಸೇರಿಸುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳು, ಚಪ್ಪಲಿಗಳು ಮೊದಲಾದವು ಬಿದ್ದಿವೆ.
ಮೈಸೂರು ಪ್ರಾದೇಶಿಕ ಅರಣ್ಯ ವಿಭಾಗದ ನಿರ್ವಹಣೆಯಲ್ಲಿರುವ ಕೆರೆ ಪರಿಸರವು ಕುವೆಂಪುನಗರ, ರಾಮಕೃಷ್ಣ ನಗರ, ವಿವೇಕಾನಂದ ನಗರ, ಶ್ರೀರಾಂಪುರ, ಪ್ರೀತಿ ಬಡಾವಣೆ, ಶಾರದಾದೇವಿ ನಗರ, ಬೆಮೆಲ್ ಬಡಾವಣೆ ಸೇರಿದಂತೆ ನಗರದ ದಕ್ಷಿಣ ಭಾಗಕ್ಕೆ ಶುದ್ಧ ಗಾಳಿ ನೀಡುವುದಲ್ಲದೇ, ಜನರ ಮುಂಜಾನೆ ಮತ್ತು ಮುಸ್ಸಂಜೆ ವಾಯುವಿಹಾರದ ತಾಣವಾಗಿದೆ. ಬೆಳೆಯುತ್ತಿರುವ ನಗರೀಕರಣದ ಅಡ್ಡ ಪರಿಣಾಮವನ್ನೂ ಕೆರೆಯು ಎದುರಿಸುತ್ತಿದ್ದು, ಸಂಕಷ್ಟದಲ್ಲಿದೆ. ಇದು ಪರಿಸರ ಪ್ರಿಯರ ಕಳವಳಕ್ಕೆ ಕಾರಣವಾಗಿದೆ.
‘ಶ್ರೀರಾಂಪುರ ಮತ್ತು ದಟ್ಟಗಳ್ಳಿ ಭಾಗದಿಂದ ರಾಜಕಾಲುವೆ ಮೂಲಕ ಕೆರೆಗೆ ಮಳೆ ನೀರು ಹರಿದುಬರಬೇಕಿತ್ತು. ಆದರೆ, ರಾಜಕಾಲುವೆಗಳು ಒತ್ತುವರಿಯಾಗಿವೆ. ಹಲವೆಡೆ ತ್ಯಾಜ್ಯದ ಗುಂಡಿಗಳಾಗಿಯೂ ಮಾರ್ಪಟ್ಟಿದೆ. ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಒಳಚರಂಡಿ ನೀರನ್ನು ಹೊತ್ತು ತರುತ್ತಿರುವ ಕಾಲುವೆಗಳು ಕೆರೆಯ ಜೀವ ವೈವಿಧ್ಯತೆಗೆ ಅಪಾಯದಲ್ಲಿದೆ’ ಎನ್ನುತ್ತಾರೆ ಸ್ಥಳೀಯರು.
ಪ್ರೀತಿ ಬಡಾವಣೆ ಕಡೆಯ ಗೇಟ್‌ನಿಂದ ಬರುವ ವಾಯು ವಿಹಾರಿಗಳು ಕಾಲಭೈರವ ದೇವಸ್ಥಾನ ಬಳಸಿ ಮುಂದೆ ಸಾಗುವಾಗ ಮೂಗು ಮಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಶ್ರೀರಾಂಪುರ ಭಾಗದಿಂದ ಬರುವ ಕೊಳಚೆ ನೀರು ಕೆರೆಯಲ್ಲಿ ಪಾಚಿ, ಕಳೆ ಸಸ್ಯಗಳಿಗೆ ಬೆಳವಣಿಗೆಗೆ ಕಾರಣವಾಗಿದೆ. ನೀರು ಹಸಿರು ಬಣ್ಣಕ್ಕೆ ತಿರುಗಿ ದುರ್ನಾತ ಬೀರುತ್ತಿದೆ.
‘ಕೌಟಿಲ್ಯ ಶಾಲೆ ಬಳಿ ಕೆರೆಗೆ ಸೇರುತ್ತಿರುವ ಕೊಳಚೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ತಡೆಯುವ ಪ್ರಯತ್ನವಾಗುತ್ತಿಲ್ಲ. ಮಳೆಗಾಲದಲ್ಲಿ ಕೆರೆಗೆ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ತುಂಬುತ್ತಿದೆ. ಅಷ್ಟೇ ಅಲ್ಲದೇ, ಕೆರೆಯ ಅರಣ್ಯ ವಿಹಾರ ಮಾರ್ಗವನ್ನೇ ತುಂಡರಿಸಿದ್ದು, ವಾಯುವಿಹಾರಿಗಳ ಓಡಾಟಕ್ಕೂ ತಡೆಯಾಗಿದೆ’ ಎಂದು ಶ್ರೀರಾಮಪುರದ ರವೀಂದ್ರ ಬೇಸರ ವ್ಯಕ್ತಪಡಿಸಿದರು.
‘ಮಳೆ ನೀರು ಕಾಲುವೆಗಳಿಗೆ ಗ್ರಿಲ್‌ಗಳನ್ನು ಅಳವಡಿಸಿ ಪ್ಲಾಸ್ಟಿಕ್ ತ್ಯಾಜ್ಯ ತಡೆಯುವ ಕೆಲಸವಾಗಬೇಕು. ಕಾಲುವೆಯನ್ನು ಒತ್ತುವರಿಯಿಂದ ರಕ್ಷಿಸಿ ನೀರಿನ ಸರಾಗ ಓಡಾಟಕ್ಕೆ, ಸ್ವಚ್ಛತೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ದುರ್ನಾತದ ನಡುವೆ ವಾಯುವಿಹಾರ ಹೆಚ್ಚುತ್ತಿದೆ ಕಳೆ ಸಸ್ಯ ರಾಜಕಾಲುವೆಗಳೇ ಕೊಳಚೆ ಮೂಲ
ಕೆರೆ ಬದಿಯ ರಸ್ತೆಯಲ್ಲಿ ತ್ಯಾಜ್ಯ ಹಾಕುವುದನ್ನು ತಡೆಯಬೇಕು ಕಸದ ತೊಟ್ಟಿಯನ್ನು ಹಾಗೂ ತ್ಯಾಜ್ಯ ಹಾಕದಂತೆ ಎಚ್ಚರಿಕೆ ಫಲಕ ಅಳವಡಿಸಬೇಕುಸರಸ್ವತಿ ಶ್ರೀರಾಂಪುರ
ರಾಜ ಕಾಲುವೆಗಳನ್ನು ರಕ್ಷಿಸಿ ಕೆರೆಗೆ ಕೊಳಚೆ ಮತ್ತು ತ್ಯಾಜ್ಯ ಸೇರದಂತೆ ನೋಡಿಕೊಳ್ಳಬೇಕು. ಸುತ್ತಲಿನ ಪ್ರದೇಶ ಪ್ಲಾಸ್ಟಿಕ್ ಮುಕ್ತವಾಗಿಸಬೇಕುಶ್ರೀಧರ್ ರಾಮಕೃಷ್ಣ ನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.