ಮೈಸೂರು: ಇಲ್ಲಿನ ದಟ್ಟಗಳ್ಳಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಜಾಗ ಅತಿಕ್ರಮಿಸಿ, ಅನುಮೋದಿತ ನಕ್ಷೆಗಿಂತಲೂ ಹೆಚ್ಚುವರಿಯಾಗಿ ಅಂತಸ್ತು ನಿರ್ಮಿಸಿ ನಿಯಮ ಉಲ್ಲಂಘಿಸಿದ್ದರೂ ಕಟ್ಟಡ ತೆರವುಗೊಳಿಸಿ ಭೂಕಬಳಿಕೆ ಪ್ರಕರಣ ದಾಖಲಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ನಗರದ ಅಶೋಪುರಂ ನಿವಾಸಿ ಎಸ್. ಶೈಲಜಾ ಮೋಹನ್ ಎನ್ನವವರು ಕಸಬಾ ಹೋಬಳಿಯ ದಟ್ಟಗಳ್ಳಿಯಲ್ಲಿ ಕಟ್ಟಿರುವ ಕಟ್ಟಡಕ್ಕೆ ಸಂಬಂಧಿಸಿದಂತೆ ‘ಸಿಆರ್’ (ಕಟ್ಟಡ ಪೂರ್ಣಗೊಂಡ ವರದಿ) ನೀಡುವಂತೆ 2023ರ ಆ.11ರಂದು ಮುಡಾಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಆರ್‌ಟಿಐ ಕಾರ್ಯಕರ್ತ ಎನ್. ಗಂಗರಾಜು ತಕರಾರು ಅರ್ಜಿ ಸಲ್ಲಿಸಿದ್ದರು. ಇದನ್ನು ಆಧರಿಸಿ ಮುಡಾ ಅಧಿಕಾರಿಗಳು ಸ್ಥಳ ಪರಿಶೀಲಿಸಿದಾಗ, ಅಕ್ರಮಗಳು ಬಹಿರಂಗಗೊಂಡಿವೆ.
‘ದಟ್ಟಗಳ್ಳಿಯ ಸ.ನಂ. 123/18ರ 2 ಗುಂಟೆ ಹಾಗೂ 123/22ರ 1.12 ಗುಂಟೆ ಸೇರಿ ಒಟ್ಟು 3.12 ಗುಂಟೆ ಜಾಗದಲ್ಲಿ ಕಟ್ಟಡ ನಿರ್ಮಿಸಿದ್ದು, ಅದಕ್ಕೆ ಸಿಆರ್ ಕೊಡುವಂತೆ ಶೈಲಜಾ ಅರ್ಜಿ ಸಲ್ಲಿಸಿದ್ದರು. ಕಟ್ಟಡ ನಿರ್ಮಿಸಿದ ಸ್ಥಳ ಪರಿಶೀಲಿಸಿದ ಅಧಿಕಾರಿಗಳು, ‘ದಿಶಾಂಕ್ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಕಟ್ಟಡವು ಸ.ನಂ.123ರಲ್ಲಿ ಅಂದಾಜು 1/3ರಲ್ಲಿ ಮತ್ತು 2/3ರಷ್ಟು ಸರ್ವೇ ನಂ.121ರಲ್ಲಿ ಬರುತ್ತಿರುವುದು ಕಂಡುಬಂದಿದೆ. ಅನುಮೋದಿತ ನಕ್ಷೆಯಲ್ಲಿ ನೆಲ, ಮೊದಲನೇ ಹಾಗೂ 2ನೇ ಮಹಡಿಗೆ ಅನುಮೋದನೆ ಪಡೆಯಲಾಗಿದೆ. ಆದರೆ, 3ನೇ ಮಹಡಿ ಪೂರ್ತಿ ಹಾಗೂ 4ನೇ ಮಹಡಿಯಲ್ಲಿ ಅರ್ಧದಷ್ಟು ಹೆಚ್ಚುವರಿಯಾಗಿ (ಭೇಟಿ ನೀಡಿದಾಗ) ನಿರ್ಮಿಸಲಾಗಿದೆ’ ಎಂದು ಸ್ಪಷ್ಟವಾಗಿ ವರದಿ ನೀಡಿದ್ದಾರೆ.
ವರದಿಯಲ್ಲೇನಿದೆ?: ಅರ್ಜಿದಾರರು ಮುಡಾದಿಂದ ಪಡೆದುಕೊಂದ ನಕ್ಷೆ ಉಲ್ಲಂಘಿಸಿ, ಹೆಚ್ಚುವರಿ ಮಹಡಿ ಕಟ್ಟಿದ್ದಾರೆ. ಅನುಮೋದಿತ ನಕ್ಷೆಯಂತೆ ನಿವೇಶನದ ವಿಸ್ತೀರ್ಣ 380.5 ಚ.ಮೀ. ಇರುತ್ತದೆ. ಆದರೆ, ಸ್ಥಳದಲ್ಲಿ ನಿರ್ಮಿಸಿರುವ ಕಾಂಪೌಂಡ್ ಪೂರ್ವ–ಪಶ್ಚಿಮ ಮತ್ತು ಉತ್ತರ–ದಕ್ಷಿಣ ಅಳತೆಗಳು ಅನುಮೋದಿತ ನಕ್ಷೆಯಲ್ಲಿರುವ ಅಳತೆಗಳಿಗೆ ವ್ಯತ್ಯಾಸವಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಇದನ್ನು ಆಧರಿಸಿ, ಮುಡಾ ಅಧಿಕಾರಿಗಳು ಶೈಲಜಾ ಅವರಿಗೆ ಹಿಂಬರಹ ನೀಡಿದ್ದಾರೆ. ‘ನೀವು ನಿಯಮ ಉಲ್ಲಂಘಿಸಿರುವುದರಿಂದಾಗಿ ಕಟ್ಟಡ ಪೂರ್ಣಗೊಂಡ ವರದಿ ನೀಡಲು ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ’ ಎಂದು ವಲಯ ಕಚೇರಿ–2ರ ವಲಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಗಂಗರಾಜು ಅವರು ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಪಡೆದಿದ್ದು, ಅವು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ‘ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ, ಮುಡಾ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ವರದಿ ಸಲ್ಲಿಸಿ ವರ್ಷವೇ ಕಳೆದಿದ್ದರೂ ಪ್ರಕರಣ ದಾಖಲಿಸದೇ ಇರುವುದು ಹಾಗೂ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದಿರುವುದು ಅಚ್ಚರಿ ಮೂಡಿಸಿದೆ. ಭೂಕಬಳಿಕೆ ಕೇಸ್ ದಾಖಲಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಇದರಲ್ಲಿ ಪ್ರಭಾವಿಗಳು ಶಾಮೀಲಾಗಿರುವ ಶಂಕೆ ಇದೆ’ ಎಂದು ಆರೋಪಿಸುತ್ತಾರೆ ಗಂಗರಾಜ್.
ಅಧಿಕಾರಿಗಳು ಗಮನಿಸುವುದಿಲ್ಲವೇ?:
‘ಮುಡಾ ಜಾಗವನ್ನು ಯಾರು ಬೇಕಾದರೂ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಬಹುದೇ, ಅಧಿಕಾರಿಗಳು ಇತ್ತ ಗಮನಹರಿಸುವುದಿಲ್ಲವೇ’ ಎಂಬ ಪ್ರಶ್ನೆ ಗಂಗರಾಜ್ ಅವರದ್ದು.
‘ಒತ್ತುವರಿದಾರರ ವಿರುದ್ಧ ಕೂಡಲೇ ಭೂಕಬಳಿಕೆ ಪ್ರಕರಣ ದಾಖಲಿಸಬೇಕು, ಭಾರಿ ಬೆಲೆ ಬಾಳುವ ಮುಡಾ ಜಾಗದಲ್ಲಿ ನಿರ್ಮಿಸಿರುವ ಕಟ್ಟಡವನ್ನು ಕೆಡವಿ ಆಸ್ತಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಮುಡಾ ನೀಡಿದ ದಾಖಲೆಗಳ ಪ್ರಕಾರ ಅರ್ಜಿದಾರರು, ಶುದ್ಧ ಕ್ರಯಪತ್ರದಲ್ಲಿ ಇಂಗ್ಲಿಷ್‌ನಲ್ಲಿ ಸಹಿ ಮಾಡಿದ್ದಾರೆ. ಆದರೆ, ಸಿಆರ್ ಕೇಳಿರುವ ಅರ್ಜಿಯಲ್ಲಿ ಕನ್ನಡದಲ್ಲಿ ಸಹಿ ಹಾಕಿದ್ದಾರೆ. ಸಹಿ ಕೂಡ ನಕಲಿಯಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು. ಪ್ರಾಧಿಕಾರದ ಆಸ್ತಿ ಸಂಕಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸುತ್ತಾರೆ ಅವರು.
ಅನುಮೋದನೆ ಪಡೆದಿದ್ದೊಂದು ನಿರ್ಮಿಸಿದ್ದೊಂದು! ತಮ್ಮದಲ್ಲದ ಜಾಗದಲ್ಲಿ ಕಟ್ಟಡ ನಿರ್ಮಾಣ ಆರ್‌ಟಿಐ ಕಾರ್ಯಕರ್ತ ತರಕಾರು ಸಲ್ಲಿಸಿದಾಗ ಬಹಿರಂಗಗೊಂಡ ಅಕ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.