ಮೈಸೂರು: ಜಿಲ್ಲೆಯಲ್ಲಿ ‘ಪೂರ್ವ ಮುಂಗಾರು ಮಳೆ’ ಬಹುತೇಕ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗೆ ತೀವ್ರ ಹಿನ್ನಡೆ ಉಂಟಾಗಿದೆ. ಇದು, ಬೇಸಾಯಗಾರರ ಆತಂಕಕ್ಕೆ ಕಾರಣವಾಗಿದೆ. ದಿನೇ ದಿನೇ ಬಿಸಿಲಿನ ತೀವ್ರತೆಯೂ ಹೆಚ್ಚುತ್ತಿರುವುದು ಜನರನ್ನು ಕಂಗಾಲಾಗುವಂತೆ ಮಾಡಿದೆ.

ಆಗಾಗ ಸುರಿದು ಕೈಹಿಡಿಯಬೇಕಿದ್ದ ‘ಅಡ್ಡ ಮಳೆ’ ಬಾರದಿರುವುದರಿಂದ ಕೃಷಿಕರು ಖುಷಿಯಿಂದ ಕೃಷಿ ಮಾಡುವ ಪರಿಸ್ಥಿತಿಯಲ್ಲಿ ಇಲ್ಲದಂತಾಗಿದೆ. ‘ಮೇ ಮಳೆ’ಗೋಸ್ಕರ ಅವರು ಕಾದಿದ್ದಾರೆ. ವರುಣನ ಕೃಪೆಯ ನಿರೀಕ್ಷೆಯಲ್ಲಿದ್ದಾರೆ.

ಹವಾಮಾನ ಇಲಾಖೆಯ ವರದಿ ಪ್ರಕಾರ, ಜಿಲ್ಲೆಯಲ್ಲಿ ವಾಡಿಕೆಯಂತೆ ಏ.1ರಿಂದ ಏ.30ರವರೆಗೆ 66.2 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ, ವಾಸ್ತವವಾಗಿ 9.8 ಮಿ.ಮೀ. ಮಳೆಯಷ್ಟೆ ಬಿದ್ದಿದೆ. ಅಂದರೆ, ಶೇ 85ರಷ್ಟು ಕೊರತೆ ಕಂಡುಬಂದಿದೆ. ಕಳೆದ ಏಳು ದಿನಗಳಲ್ಲಿ ಅಂದರೆ ಏ.24ರಿಂದ 30ರವರೆಗೆ 21.7 ಮಿ.ಮೀ. ವಾಡಿಕೆಯಲ್ಲಿ ಆಗಿರುವುದು 2 ಮಿ.ಮೀ. ಮಳೆಯಷ್ಟೆ. ಈ ಅವಧಿಯಲ್ಲಿ ಶೇ 91ರಷ್ಟು ಕೊರತೆ ಕಂಡುಬಂದಿದೆ.

ವರ್ಷಾರಂಭದಿಂದಲೂ ಕೊರತೆ: ಮಾರ್ಚ್ 1ರಿಂದ ಏ.30ರವರೆಗೆ ಅಂದರೆ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ವಾಡಿಕೆಯಂತೆ 81.4 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ವಾಸ್ತವವಾಗಿ 24.6 ಮಿ.ಮೀ. ಸುರಿದಿದ್ದು, ಶೇ 70ರಷ್ಟು ಕೊರತೆ ಉಂಟಾಗಿದೆ. ಈ ವರ್ಷದ ಜನವರಿ 1ರಿಂದ ಏ.30ರವರೆಗೆ ಶೇ 50ರಷ್ಟು ಕೊರತೆ ಉಂಟಾಗಿರುವುದು ವರದಿಯಾಗಿದೆ.

ಸಾಮಾನ್ಯವಾಗಿ, ಏಪ್ರಿಲ್ನಲ್ಲಿ ಸುರಿಯುವ ‘ಅಡ್ಡ ಮಳೆ’ಯು ಕೃಷಿ ಚಟುವಟಿಕೆಗಳಿಗೆ ಬಹಳ ಅನುಕೂಲ ಕಲ್ಪಿಸುತ್ತದೆ. ಭೂಮಿ ಹದಗೊಳಿಸಲು ಹಾಗೂ ಪೂರ್ವ ಮುಂಗಾರು ಬೆಳೆಗಳನ್ನು ಬಿತ್ತುವುದಕ್ಕೆ ಪೂರಕವಾಗುತ್ತದೆ. ಈ ಮಳೆಯನ್ನು ನಂಬಿ ಕೃಷಿ ಮಾಡುವ ರೈತರು ಸಾಕಷ್ಟು ಮಂದಿ ಇರುತ್ತಾರೆ. ಅದರಂತೆ, ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಮೊದಲಾದವುಗಳನ್ನು ಪೂರೈಸಲಾಗುತ್ತದೆ. ಆದರೆ, ಈ ಬಾರಿ ಕೃಷಿಕರ ನಿರೀಕ್ಷೆಗಳೆಲ್ಲ ಹುಸಿಯಾಗಿವೆ.

ಏಪ್ರಿಲ್ನಲ್ಲಿ ಸಾಲಿಗ್ರಾಮ, ಎಚ್.ಡಿ.ಕೋಟೆ, ಸರಗೂರು ತಾಲ್ಲೂಕುಗಳಲ್ಲಿ ಮಳೆ ಕೊರತೆಯು ಶೇ 90ರ ಪ್ರಮಾಣವನ್ನೂ ಮೀರಿದೆ! ಯಾವ ತಾಲ್ಲೂಕುಗಳಲ್ಲೂ ವಾಡಿಕೆಯಷ್ಟು ವರುಣನ ಕೃಪೆಯಾಗಿಲ್ಲ. ಪರಿಣಾಮ, ಮಳೆ ಆಶ್ರಿತ ಕೃಷಿ ಚಟುವಟಿಕೆಗಳಿಗೆ ‘ಮಂಕು’ ಕವಿದಿದೆ. ನೀರಾವರಿ ಹಾಗೂ ಪಂಪ್ಸೆಟ್ ವ್ಯವಸ್ಥೆ ಹೊಂದಿರುವವರ ಜಮೀನುಗಳಲ್ಲಷ್ಟೆ ಬೆಳೆ ಇದೆ.

ಬಿರುಬಿಸಿಲಿನಿಂದ ಹೈರಾಣ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ನಿತ್ಯವೂ ಸರಾಸರಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿರುವುದರಿಂದ ಜನರು ಹೈರಾಣುವಂತಾಗಿದೆ.

ಉತ್ತಮ ಹವಾಗುಣದ ಕಾರಣದಿಂದಾಗಿ ‘ನಿವೃತ್ತರ ಸ್ವರ್ಗ’ ಎಂದೇ ಹೆಸರು ಗಳಿಸಿರುವ ಮೈಸೂರಿನಲ್ಲಿ ದಾಖಲಾಗುತ್ತಿರುವ ‘ಬಿಸಿಲಾಘಾತ’ವು ಜನರನ್ನು ಕಂಗಾಲಾಗುವಂತೆ ಮಾಡಿದೆ. ಹೊರಾಂಗಣದ ದುಡಿಮೆಯನ್ನೇ ನಂಬಿರುವ ಶ್ರಮಿಕ ವರ್ಗದವರು ಬಿಸಿಲಿನ ಝಳದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಬಸವಳಿಯುವಂತಾಗಿದೆ. ಮಧ್ಯಾಹ್ನದ ವೇಳೆ ಜನರು ಮನೆಯಿಂದ ಹೊರಗೆ ಕಾಲಿಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳಿಗ್ಗೆಯಿಂದಲೇ ಬಿಸಿಲಿನ ತಾಪ ಸುಡುತ್ತಿದೆ. ಹೊತ್ತೇರಿದಂತೆಲ್ಲಾ ಸೆಕೆಯ ಪ್ರತಾಪ ಕಂಡುಬರುತ್ತಿದೆ. ಹಗಲಿನಲ್ಲೂ ಬಿಸಿಗಾಳಿ, ರಾತ್ರಿ ವೇಳೆಯೂ ವಿಪರೀತ ಸೆಕೆಯಿಂದಾಗಿ ಜನರು ಬೇಸತ್ತಿದ್ದಾರೆ. ಹೀಗಾಗಿ, ಕೊಂಚ ಮಳೆ ಬಿದ್ದರೂ ಸಂಭ್ರಮಿಸುವ ಸ್ಥಿತಿ ಇದೆ! ಬಿಸಿಲಿನ ಪ್ರಭಾವವು ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದೂ ವರದಿಯಾಗುತ್ತಿದೆ.

‘ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಜಿಲ್ಲೆಯಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಸರಾಸರಿ 36, 37, 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಇರಲಿದೆ’ ಎಂದು ತಾಲ್ಲೂಕಿನ ನಾಗನಹಳ್ಳಿ ಕೃಷಿ ಹಮಾಮಾನ ಕ್ಷೇತ್ರ ವಿಭಾಗ ತಿಳಿಸಿದೆ.

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜಿಲ್ಲೆಯಲ್ಲಿ ಮೇ 1ರಿಂದ 5ರವರೆಗೆ ತುಂತುರು ಮಳೆ ಬರುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 36ರಿಂದ 37 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 21ರಿಂದ 22 ಡಿಗ್ರಿ ಸೆ. ದಾಖಲಾಗುವ ಸಾಧ್ಯತೆ ಇದೆ.

ಕೃಷಿ ಚಟುವಟಿಕೆಗೆ ಹಿನ್ನಡೆ: ರವಿ

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ, ‘ಪೂರ್ವ ಮುಂಗಾರು ಮಳೆ ಬಾರದಿದ್ದರಿಂದಾಗಿ, ಜಿಲ್ಲೆಯಲ್ಲಿ ಹೆಸರು, ಅಲಸಂದೆ, ಉದ್ದು ಮೊದಲಾದವುಗಳ ಬಿತ್ತನೆ ಆಗಿಲ್ಲ. ಸಾಮಾನ್ಯವಾಗಿ ಈ ಅವಧಿಯಲ್ಲಿ 20ಸಾವಿರದಿಂದ 25ಸಾವಿರ ಹೆಕ್ಟೇರ್ ಬಿತ್ತನೆ ಆಗಬೇಕಿತ್ತು’ ಎಂದು ಮಾಹಿತಿ ನೀಡಿದರು.

‘ಮಳೆ ಬೀಳದಿದ್ದರಿಂದ ಭೂಮಿ ಹದಗೊಳಿಸುವುದು ಹಾಗೂ ಉಳುಮೆ ಕಾರ್ಯವೂ ಸಮರ್ಪಕವಾಗಿ ಆಗಿಲ್ಲ. 30 ಮಿ.ಮೀ.ನಿಂದ 40 ಮಿ.ಮೀ. ಮಳೆ ಬಿದ್ದರೆ ಮಾತ್ರ ಉಳುಮೆಗೆ ಹಾಗೂ ಬಿತ್ತನೆಗೆ ಅನುಕೂಲ ಆಗುತ್ತದೆ. ಅಲ್ಪಸ್ವಲ್ಪ ಮಳೆ ಬಿದ್ದಿರುವುದರಿಂದ ಪ್ರಯೋಜನ ಆಗುತ್ತಿಲ್ಲ’ ಎಂದು ಹೇಳಿದರು.

‘ಇಲಾಖೆಯಿಂದ ಪೂರ್ವ ಮುಂಗಾರು ಹಾಗೂ ಮುಂಬರುವ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮೊದಲಾದ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲದ ಕಾರಣದಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ’ ಎಂದು ಅವರು ತಿಳಿಸಿದರು.

ಮಾವಿಗಷ್ಟೆ ತೊಂದರೆ: ಅಂಗಡಿ

‘ಏಪ್ರಿಲ್ನಲ್ಲಿ ಮಳೆ ಕೊರತೆ ಯಿಂದಾಗಿ ಮಾವು ಬೆಳೆಗೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ತಾಪಮಾನ ಹೆಚ್ಚಾದ್ದರಿಂದ ಹೂವುಗಳು ಉದುರಿವೆ, ಕಾಯಿ ಕಚ್ಚಲಿಲ್ಲ. ಇದರಿಂದ ಇಳುವರಿ ಕಡಿಮೆಯಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅಂಗಡಿ ತಿಳಿಸಿದರು.

‘ಇತರ ತೋಟಗಾರಿಕೆ ಬೆಳೆಗಳು ಕೊಳವೆಬಾವಿ ನೀರಿನ ಆಧಾರಿತವಾದ್ದರಿಂದ ಹೆಚ್ಚಿನ ತೊಂದರೆ ಉಂಟಾಗಿಲ್ಲ. ಕಡಿಮೆ ನೀರಿನಲ್ಲೇ ಅವುಗಳನ್ನು ನಿರ್ವಹಿಸಬಹುದಾಗಿದೆ’ ಎಂದು ಪ್ರತಿಕ್ರಿಯಿಸಿದರು.

ನೀರಿನ ಮಟ್ಟ ಇಳಿಕೆ

ಕೃಷಿ ಹಾಗೂ ಕುಡಿಯುವ ನೀರಿನ ಪ್ರಮುಖ ಮೂಲಗಳಲ್ಲಿ ಒಂದಾಗಿರುವ, ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದೆ. ಹೋದ ವರ್ಷ ಇದೇ ಅವಧಿಯಲ್ಲಿ 9.17 ಟಿಎಂಸಿ ಅಡಿ ನೀರಿತ್ತು. ಆದರೆ, ಗುರುವಾರದ ಮಟ್ಟ 6.46ಟಿಎಂಸಿ ಅಡಿಗಳಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.