ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು| ಅದ್ಧೂರಿ ಜಂಬೂಸವಾರಿಗೆ ಸಿದ್ಧತೆ: ಲಕ್ಷಾಂತರ ಮಂದಿ ಭಾಗಿ ಸಾಧ್ಯತೆ

ಜಿಲ್ಲಾಡಳಿತದಿಂದ ಸಿದ್ಧತೆ; ಲಕ್ಷಾಂತರ ಮಂದಿ ಭಾಗಿ ಸಾಧ್ಯತೆ
Last Updated 3 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಅ.5ರಂದು ನಡೆಯಲಿದ್ದು, ಇದಕ್ಕಾಗಿ ಸಾಂಸ್ಕೃತಿಕ ನಗರಿಯು ಸಜ್ಜಾಗುತ್ತಿದೆ.

ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ, ಹಿಂದಿನ ಎರಡು ವರ್ಷಗಳು ಜಂಬೂಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿತ್ತು. ಈ ಬಾರಿ ಕೋವಿಡ್‌ ಆತಂಕ ದೂರಾಗಿರುವುದರಿಂದ ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಜಿಲ್ಲಾಡಳಿತದಿಂದ ಭರದ ತಯಾರಿ ಮಾಡಿಕೊಳ್ಳಲಾಗುತ್ತಿದೆ.

750 ಕೆ.ಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾದ ಅಧಿದೇವತೆ ಚಾಮುಂಡೇಶ್ವರಿ ಮೂರ್ತಿಗೆ ನಮಿಸಲು, ‘ರಾಜಪಥ’ದಲ್ಲಿ ಸಾಗುವ ನಾಡಿನ ಕಲೆ–ಸಾಂಸ್ಕೃತಿಕ ವೈಭವ ಮತ್ತು ಜಂಬೂಸವಾರಿ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತರಾಗಿದ್ದಾರೆ. ಆನೆಗಳು, ವಿದ್ಯುತ್‌ ದೀಪಾಲಂಕಾರದ ನಡುವೆ ಸಾಗುವುದು ವಿಶೇಷವಾಗಿದೆ.

ಸಂಜೆ ಚಾಲನೆ:

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36ರಿಂದ 2.50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜ ಪೂಜೆ ನೆರವೇರಲಿದೆ. ಸಂಜೆ 5.07ರಿಂದ 5.18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಅಂಬಾವಿಲಾಸ ಅರಮನೆಯ ಒಳಾವರಣದಲ್ಲಿ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಮೇಯರ್ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್‌ಕುಮಾರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಜಂಬೂಸವಾರಿ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ಇದೇ ಮೊದಲು.

‘ರಾಜ ಮಾರ್ಗ’ದ ಇಕ್ಕೆಲಗಳಲ್ಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗುತ್ತಿದ್ದು, ಜನರು ಅದರೊಳಗೆ ನಿಂತು ಜಂಬೂಸವಾರಿ ವೀಕ್ಷಿಸಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ. 43 ಸ್ತಬ್ಧಚಿತ್ರಗಳು, 50 ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ. 13 ಆನೆಗಳು ಮೆರುಗು ಹೆಚ್ಚಿಸಲಿವೆ. ಗಜಪಡೆಯ ನಾಯಕ ಅಭಿಮನ್ಯುಗೆ ಅಂಬಾರಿ ಹೊರುವ ಅವಕಾಶ ಸಿಗುವ ನಿರೀಕ್ಷೆ ಇದೆ.

ಪಂಜಿನ ಕವಾಯತಿನೊಂದಿಗೆ ತೆರೆ:

ಅಂದು ಸಂಜೆ 7.30ಕ್ಕೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತು ಜರುಗಲಿದ್ದು, ಇದಕ್ಕಾಗಿಯೂ ತಾಲೀಮು ನಡೆದಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಕವಾಯತು ವೀಕ್ಷಿಸಿ, ಗೌರವವಂದನೆ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ, ಕೇಂದ್ರ ಸಚಿವರು ಮತ್ತು ರಾಜ್ಯದ ಸಚಿವರು ಪಾಲ್ಗೊಳ್ಳಲಿದ್ದಾರೆ. ಶಾಸಕ ತನ್ವೀರ್‌ ಸೇಠ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದರೊಂದಿಗೆ, ಸೆ.26ರಂದು ಇದೇ ಮೊದಲ ಬಾರಿಗೆ ರಾಷ್ಟ್ರಪತಿಯಿಂದ ಉದ್ಘಾಟನೆಯಾದ ಮತ್ತು ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ವಿಜೃಂಭಣೆಯ ನಾಡಹಬ್ಬಕ್ಕೆ ತೆರೆ ಬೀಳಲಿದೆ.

ಯಾವುದೇ ಕೊರತೆ ಇಲ್ಲ

ಜಂಬೂಸವಾರಿ ತಯಾರಿ ಅಂತಿಮ ಹಂತದಲ್ಲಿದೆ. ಯಾವುದೇ ಕೊರತೆ ಇಲ್ಲ. ಕಲಾತಂಡಗಳೂ ಆಗಮಿಸಿವೆ. ಸ್ತಬ್ಧಚಿತ್ರಗಳು ಕೂಡ ತಯಾರಾಗುತ್ತಿವೆ.

–ಎಸ್.ಟಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT