ಮೈಸೂರು: ನಗರದ ಆಗಸದಲ್ಲಿ ಶನಿವಾರ ಸಂಜೆ ಮೋಡಗಳ ಕಣ್ಣಾಮುಚ್ಚಾಲೆ ಆಟ ನಡೆದಿದ್ದರೆ, ಕಲಾಮಂದಿರದ ಒಳಗಿದ್ದ ಪ್ರೇಕ್ಷಕರು ಮಾತ್ರ ಸಂಗೀತದ ಮಳೆಯಲ್ಲಿ ತೋಯ್ದರು. ಸಿತಾರ್ ವಾದನ ಹಾಗೂ ಪಂಡಿತ್ ವೆಂಕಟೇಶಕುಮಾರ್ ಅವರ ಗಾಯನವು ಮಲ್ಲಿಗೆ ನಗರಿಯಲ್ಲೂ ಹಿಂದೂಸ್ತಾನಿ ಸಂಗೀತದ ಕಂಪು ಚೆಲ್ಲಿತು.

ಕಲಾ ಸಂವಹನ ಟ್ರಸ್ಟ್ ಆಯೋಜಿಸಿದ್ದ ‘ಮೈಸೂರು ಸಿತಾರ್ ಸಂಭ್ರಮ’ದ ವೇದಿಕೆಯಲ್ಲಿ ಮೊದಲಿಗೆ 50ಕ್ಕೂ ಹೆಚ್ಚು ಅಭ್ಯಾಸನಿರತ ಕಲಾವಿದರು ನಡೆಸಿಕೊಟ್ಟ ಸಿತಾರ್ ಸಮೂಹ ವಾದನ ನೆರೆದ ಮಂದಿಯನ್ನು ಮೂಕವಿಸ್ಮಿತರನ್ನಾಗಿಸಿತು. ಕಳೆದೊಂದು ವರ್ಷದಿಂದ ಉಸ್ತಾದ್ ಮೊಹಸಿನ್ ಖಾನ್ರ ಗರಡಿಯಲ್ಲಿ ಸಿತಾರ್ನ ಪಟ್ಟುಗಳನ್ನು ಕಲಿಯುತ್ತಿರುವ ಶಿಷ್ಯ ವೃಂದವು 45 ನಿಮಿಷಕ್ಕೂ ಹೆಚ್ಚು ಕಾಲ ಪ್ರದರ್ಶನದ ಮೂಲಕ ಗುರುವಂದನೆ ಸಲ್ಲಿಸಿತು. ಸಿತಾರ್ ವಾದಕರ ಬೆರಳಲ್ಲಿ ಮೊದಲಿಗೆ ‘ಯಮನ್ ಕಲ್ಯಾಣಿ’ ರಾಗ ಮೂಡಿತು. ನಂತರದಲ್ಲಿ ಅತಿವೇಗದ ಲಯದಲ್ಲಿ ಮೂಡಿಬಂದ ‘ಯಮನ್ ಧೃತ್’, ಅದರ ನಂತರದಲ್ಲಿನ ‘ಝಾಲಾ’ ಪ್ರೇಕ್ಷಕರಲ್ಲಿ ವಿಸ್ಮಯವನ್ನುಂಟು ಮಾಡಿದವು. ಕಡೆಗೆ ಸಿತಾರ್ ಹಾಗೂ ತಬಲ ನಡುವಿನ ಸ್ವರ ಸಂಗೀತ ಸಂಭಾಷಣೆಯ ‘ಸವಾಲ್–ಜವಾಬ್’ ಕೂಡ ರಂಜಿಸಿತು. ಮಲೆಯ ಮಹದೇಶ್ವರನ ಕುರಿತ ‘ಸೋಜುಗಾದ ಸೂಜಿಮಲ್ಲಿಗೆ’ ಜನಪದ ಗೀತೆಯೂ ಸಿತಾರ್ ಧ್ವನಿಯಲ್ಲಿ ಮೂಡಿಬಂದಿತು.

ವೇದಿಕೆ ಕಾರ್ಯಕ್ರಮದ ತರುವಾಯ ಉಸ್ತಾದ್ ಮೊಹಸಿನ್ ಖಾನ್ ತಮ್ಮ ಸಿತಾರ್ ಮೂಲಕ ಮೋಡಿ ಮಾಡಿದರು. ಧಾರವಾಡದ ಹಿಂದೂಸ್ತಾನಿ ಸಂಗೀತ ಪರಂಪರೆಯ ಏಳನೇ ತಲೆಮಾರಿನ ಈ ಕಲಾವಿದ ಸಿತಾರ್ ಮೂಲಕ ಕೇಳುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ದರು. ಕಾರ್ಯಕ್ರಮದ ಕಡೆಯವರೆಗೂ ಪ್ರೇಕ್ಷಕರನ್ನು ಕೂರುವಂತೆ ಮಾಡಿದ್ದು ಪಂಡಿತ್ ವೆಂಕಟೇಶಕುಮಾರ್. ಹಿಂದೂಸ್ತಾನಿ ಸಂಗೀತದ ವಿವಿಧ ರಾಗಾಲಾಪನೆಗಳ ಮೂಲಕ ಇಡೀ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದ ಅವರ ಹಾಡಿನ ಪರಿಗೆ ಇಡೀ ಸಭಾಂಗಣದ ತುಂಬ ಚಪ್ಪಾಳೆಯ ಸದ್ದೇ ಕೇಳಿಬಂದಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಗಾಯಕಿ ಎಚ್.ಆರ್. ಲೀಲಾವತಿ ‘ಮೈಸೂರು ಒಂದು ಕಲಾಕೇಂದ್ರ. ರಾಜರ ಕಾಲದಿಂದಲೂ ಇಲ್ಲಿ ಸಂಗೀತ ಸಾಹಿತ್ಯಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಈ ಕಾರ್ಯಕ್ರಮವು ಧಾರವಾಡ ಹಾಗೂ ಮೈಸೂರಿನ ಪ್ರೇಮ ಸಮ್ಮಿಲನವಾಗಿದ್ದು, ಮೊಹಸಿನ್ ಖಾನ್ ಅಲ್ಲಿಂದ ಇಲ್ಲಿಗೆ ಕಲೆಯ ಬಂಧ ಬೆಸೆದಿದ್ದಾರೆ’ ಎಂದರು.

ಗಾಯಕ ಪಂಡಿತ್ ವೆಂಕಟೇಶಕುಮಾರ್ ಮಾತನಾಡಿ, ‘ಮೈಸೂರು ಸಾಂಸ್ಕೃತಿಕ ನಗರಿ. ಕರ್ನಾಟಕ ಸಂಗೀತಕ್ಕೆ ಮೈಸೂರು ಹಾಗೂ ಹಿಂದೂಸ್ತಾನಿ ಸಂಗೀತಕ್ಕೆ ಧಾರವಾಡ ಹೆಸರಾಗಿವೆ. ಇವೆರಡೂ ಸಂಗೀತದ ಎರಡು ಕಣ್ಣುಗಳು’ ಎಂದರು.

ಚಿನ್ಮಯ ಮಿಷನ್ನ ಸ್ವಾಮಿ ಕೃತಾತ್ಮಾನಂದಜೀ ಸಾನ್ನಿಧ್ಯ ವಹಿಸಿದ್ದರು. ಕಲಾಸಂವಹನ ಟ್ರಸ್ಟ್ ಅಧ್ಯಕ್ಷೆ ರಾಜೇಶ್ವರಿ ವಸ್ತ್ರದ, ಸಿತಾರ್ ವಾದಕ ಮೊಹಸಿನ್ ಖಾನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.